ಜ್ಞಾನಪೀಠ ಪುರಸ್ಕೃತೆ ಮಹಾದೇವಿ ವರ್ಮಾಗೆ ಗೂಗಲ್ ಡೂಡಲ್ ಗೌರವ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಮಹಾದೇವಿ ವರ್ಮಾ ಅವರಿಗೆ ಗೂಗಲ್ ಡೂಡಲ್ ಗೌರವ ಸಲ್ಲಿಸಿದೆ. 

Updated: Apr 27, 2018 , 12:43 PM IST
ಜ್ಞಾನಪೀಠ ಪುರಸ್ಕೃತೆ ಮಹಾದೇವಿ ವರ್ಮಾಗೆ ಗೂಗಲ್ ಡೂಡಲ್ ಗೌರವ

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ್ತಿ, ಮಹಿಳಾ ಹಕ್ಕುಗಳ ಪ್ರತಿಪಾದಕಿ, ಹಿಂದಿ ಕವಯಿತ್ರಿ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಮಹಾದೇವಿ ವರ್ಮಾ ಅವರಿಗೆ ಗೂಗಲ್ ಡೂಡಲ್ ಗೌರವ ಸಲ್ಲಿಸಿದೆ. 

1982 ಏಪ್ರಿಲ್ 27ರಂದು ಸಾಹಿತ್ಯ ಕ್ಷೇತ್ರದಲ್ಲಿ ಇವರ ಅಗಾಧ ಸೇವೆಯನ್ನು ಪರಿಗಣಿಸಿ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಹಾಗಾಗಿ ಇಂದು ಡೂಡಲ್‌ನಲ್ಲಿ ಅತಿಥಿ ಕಲಾವಿದೆ ಸೊನಾಲಿ ಜೋಹ್ರಾ, ಮಹಾದೇವಿ ವರ್ಮಾ ಅವರು, ಡೈರಿ ಮತ್ತು ಪೆನ್ ಹಿಡಿದುಕೊಂಡು ಗಂಭೀರವಾದ ಆಲೋಚನೆಯಲ್ಲಿ ತಲ್ಲೀನರಾಗಿರುವಂತೆ ಚಿತ್ರಿಸಲಾಗಿದೆ. 

ಆಧುನಿಕ ಮೀರಾ ಎಂದೇ ಹೆಸರಾಗಿರುವ ವರ್ಮಾ ಮಾರ್ಚ್ 26, 1907ರಲ್ಲಿ ಫರುಖಾಬಾದ್‌ನಲ್ಲಿ ಜನಿಸಿದ್ದರು. 9ನೇ ವಯಸ್ಸಿಗೆ ಮದುವೆಯಾಗಿದ್ದ ಅವರು ತಂದೆ-ತಾಯಿಗಳ ಪ್ರೋತ್ಸಾಹದೊಂದಿಗೆ ತವರಿನಲ್ಲಿದ್ದುಕೊಂಡೇ (ಅಲಹಾಬಾದ್‌) ತಮ್ಮ ಶಿಕ್ಷಣವನ್ನು ಮುಂದುವರಿಸಿ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. 

ತಮ್ಮ ತಾಯಿಯಿಂದ ಸ್ಫೂರ್ತಿ ಪಡೆದ ಅವರು ಹಿಂದಿ ಮತ್ತು ಸಂಸ್ಕೃತದಲ್ಲಿ ಸಾಹಿತ್ಯ ಅಧ್ಯಯನ ಮಾಡಿದ ವರ್ಮಾ, ಹಿಂದಿ ಮತ್ತು ಸಂಸ್ಕೃತದಲ್ಲಿ ಸಾಕಷ್ಟು ಕವಿತೆಗಳನ್ನು ಬರೆದಿದ್ದರು. ನಂತರ ಅವರ ಸ್ನೇಹಿತೆ, ಪ್ರಖ್ಯಾತ ಕವಯತ್ರಿ ಸುಭದ್ರ ಕುಮಾರಿ ಚೌಹಾನ್ ಅವರು ವರ್ಮಾ ಅವರ ಪ್ರತಿಭೆಯನ್ನು ಬೆಳಕಿಗೆ ತಂದರು ಎಂದು ಗೂಗಲ್ ಹೇಳಿದೆ.

ಅವರ ಸಾಕಷ್ಟು ಕವಿತೆಗಳು ಸ್ತ್ರೀವಾದವನ್ನು ಪ್ರತಿಬಿಂಬಿಸುತ್ತವೆ. ಅವರ ಸಣ್ಣ ಕಥೆಗಳ ಸಂಗ್ರಹ 'ಸ್ಕೆಚೆಸ್ ಫ್ರಮ್ ಮೈ ಪಾಸ್ಟ್' ಹೆಚ್ಚು ಪ್ರಸಿದ್ಧವಾಗಿದೆ. ಭಾರತೀಯ ಸಾಹಿತ್ಯಕ್ಕೆ ಅವರು ನೀಡಿದ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ 1982ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 1956ರಲ್ಲಿ ಪದ್ಮ ಭೂಷಣ, 1979ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಮತ್ತು 1988ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿತ್ತು. ಸೆಪ್ಟೆಂಬರ್ 11, 1987ರಲ್ಲಿ ಮಹಾದೇವಿ ವರ್ಮಾ ನಿಧನರಾದರು.

By continuing to use the site, you agree to the use of cookies. You can find out more by clicking this link

Close