ಮೈಸೂರು ಚಿತ್ರಕಲೆ ಬೆಳೆದು ಬಂದ ಬಗೆ

         

Updated: May 6, 2018 , 03:05 PM IST
ಮೈಸೂರು ಚಿತ್ರಕಲೆ ಬೆಳೆದು ಬಂದ ಬಗೆ

ಕರ್ನಾಟಕದಲ್ಲಿ ಚಿತ್ರಕಲೆ ಪರಂಪರೆಯು ಪುರಾತನ ಕಾಲದಿಂದಲೂ ಅಸ್ತಿತ್ವದಲ್ಲಿದೆ ಎಂದು ಹೇಳಲಾಗುತ್ತಿದೆ.ಹಲವು ಇತಿಹಾಸಕಾರರ ಅಭಿಪ್ರಾಯದಂತೆ ಇದು ಕ್ರಿ.ಶ 2 ಮತ್ತು 7 ನೇಯ ಶತಮಾನದಲ್ಲಿ ಅಜಂತಾದಂತಹ ಚಿತ್ರಕಲೆಯ ಮೂಲಕ ಅದು ಬೆಳೆದು ಬಂದಿದೆ. ಅಂತವುಗಳ ಮುಂದುವರೆದ ಭಾಗವಾಗಿ ಬೆಳೆದು ಬಂದ ಮತ್ತೊಂದು ಕಲೆ ಎಂದರೆ ಅದು ಮೈಸೂರಿನ ಚಿತ್ರಕಲೆ.         

ಹೌದು, ಸಾಮಾನ್ಯವಾಗಿ ಮೈಸೂರೆಂದರೆ ಅದೊಂದು ಕರುನಾಡಿನ ಅಚ್ಚರಿ,ಸಾಹಿತ್ಯ,ಕಲೆ ಸಂಸ್ಕೃತಿಗಳ ಸಂಗಮ, ಈಗ ಮೈಸೂರಿನ ಚಿತ್ರ ಕಲೆಯೂ ಕೂಡ ಕನ್ನಡದ ಹಿರಿಮೆಗೆ ಕೀರ್ತಿ ಕಳಸವಿಟ್ಟಂತಿದೆ.ಭಾರತಿಯ ಚಿತ್ರಕಲಾ ಪರಂಪರೆಯಲ್ಲಿ  ಮೈಸೂರಿನ ಚಿತ್ರಕಲೆ ಅತ್ಯಂತ ವಿಶಿಷ್ಟವಾಗಿದೆ. ದಕ್ಷಿಣ ಭಾರತದ ಕ್ಲಾಸಿಕಲ್ ಪರಂಪರೆಯ ಭಾಗವಾಗಿರುವ ಈ ಕಲೆಯು ಕರ್ನಾಟಕದ ಮೈಸೂರಿನ ಸುತ್ತ ಬೆಳೆದು ಬಂದಿದೆ.ಇಲ್ಲಿನ ಸ್ಥಳೀಯ ರಾಜರ ಪ್ರೋತ್ಸಾಹದ ಮೂಲಕ ಬೆಳೆದು ಬಂದ ಪ್ರಮುಖ ಕಲಾ ಪರಂಪರೆಯಲ್ಲಿ ಇದು ಕೂಡ ಒಂದು ಎಂದು ಹೇಳಬಹುದು.ಈ ಮೈಸೂರಿನ ಚಿತ್ರಕಲೆಯು ಪ್ರಮುಖವಾಗಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ  ಬೆಳೆದುಬಂದಿದೆ.

ಆದರೆ ತಾಳಿಕೋಟೆ ಯುದ್ದದ ವೇಳೆಯಲ್ಲಿ ವಿಜಯನಗರ ಸಾಮ್ರಾಜ್ಯ ಪತನಗೊಂಡ ನಂತರ ಅಲ್ಲಿನ ಬಹುತೇಕ ಚಿತ್ರ ಕಲಾಕಾರರು ಮೈಸೂರು,ತಂಜಾವೂರ,ಸುರಪುರ ನಂತಹ ಸ್ಥಳಗಳಿಗೆ ವಲಸೆ ಹೋದರು.ಆ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯ ಕಲಾಪ್ರಕಾರದೊಂದಿಗೆ ಬೆರೆತ ಅವರ ಕಲೆಯು ಭಿನ್ನ ರೂಪವನ್ನು ತಾಳಿತು ಎಂದು ಹೇಳಬಹುದು.

ಆ ಮೂಲಕ ಮೈಸೂರು ಮತ್ತು ತಂಜಾವೂರ ಕಲೆಗಳು ಜನ್ಮತಾಳಿ  ದಕ್ಷಿಣ ಭಾರತದ ಪ್ರಮುಖ ಚಿತ್ರಕಲೆಗಳಲ್ಲಿ ಇಂದಿಗೂ ಮಹತ್ವದ ಸ್ಥಾನವನ್ನು ಗಳಿಸಿವೆ.ಈ ಕಲೆಯಲ್ಲಿ ಬಹುತೇಕವಾಗಿ ಹಿಂದೂಪುರಾಣಗಳಲ್ಲಿ ಬರುವ ದೇವ ದೇವತೆಗಳನ್ನು ಚಿತ್ರಿಸಲಾಗುತ್ತಿದೆ.ಇತಿಹಾಸಕಾರ ಎ.ಎಲ್.ನರಸಿಂಹನ್ ಹೇಳುವಂತೆ ಆ ಕಾಲದಲ್ಲಿ ಚಿತ್ರಿಸಿದ ಕೆಲವು ಚಿತ್ರಗಳು ಇಂದಿನ ಶ್ರವಣಬೆಳಗೊಳ,ಶ್ರೀರಂಗಪಟ್ಟಣ, ಸಿರಾ, ಹರದನಹಳ್ಳಿ,ಲೇಪಾಕ್ಷಿಯಲ್ಲಿ ಕಂಡುಬರುತ್ತವೆ.ಮೈಸೂರು ಆಸ್ಥಾನದ ರಾಜಾಒಡೆಯರ್ ಬಹುತೇಕ ಚಿತ್ರಕಾರ ಕುಟುಂಬಗಳಿಗೆ ಆಶ್ರಯ ನೀಡಿ ಈ ಕಲೆಯನ್ನು ಜೀವಂತವಾಗಿರುವಂತೆ ನೋಡಿಕೊಂಡನು. ನಂತರ ಟಿಪ್ಪು ಮತ್ತು ಹೈದರ್ ಅಲಿಯವರ ಕಾಲದಲ್ಲಿಯೂ ಸಹಿತ ಈ ಕಲಾ ಪರಂಪರೆಯನ್ನು ಪ್ರೋತ್ಸಾಹಿಸಲಾಯಿತು.ಇದಕ್ಕೆ ಪ್ರಮುಖ ನಿದರ್ಶನವೆಂದರೆ  ತುಮಕೂರು ಮತ್ತು ಶಿರಾ ನಡುವಿನ ಹೆದ್ದಾರಿಯಲ್ಲಿರುವ ಶಿಬಿಯಲ್ಲಿರುವ ನರಸಿಂಹ ಸ್ವಾಮಿ ದೇವಸ್ತಾನವು ನಲ್ಲಪ್ಪನಿಂದ ಕಟ್ಟಲ್ಪಟ್ಟಿದೆ ಇವನು ಟಿಪ್ಪು ಮತ್ತು ಹೈದರ್ ಅಲಿಯ ಸೇವೆಯಲ್ಲಿದ್ದನು ಇಲ್ಲಿನ ಗೋಡೆಗಳಲ್ಲಿರುವ ಚಿತ್ರ ಕಲೆಯು ತಂಜಾವೂರ ಮತ್ತು ಮೈಸೂರ ಕಲೆಯನ್ನು ಪ್ರತಿಬಿಂಬಿಸುತ್ತದೆ.ಈ ಚಿತ್ರ ಕಲೆಯಲ್ಲಿ ಬಹುತೇಕವಾಗಿ ನೈಸರ್ಗಿಕ ವಸ್ತುಗಳನ್ನು ಬಳಸಲಾಗುತ್ತದೆ .ಅದರಲ್ಲಿ ಪ್ರಮುಖವಾಗಿ  ಎಲೆ,ಕಲ್ಲು, ಹೂವುಗಳು  ಮತ್ತು ಬ್ರಷಗಳನ್ನೂ  ಒಂದು ವಿಶಿಷ್ಟ ರೀತಿಯ ಹುಲ್ಲಿನ ಮೂಲಕ ತಯಾರಿಸಲಾಗುತ್ತದೆ.
 

 

 

By continuing to use the site, you agree to the use of cookies. You can find out more by clicking this link

Close