ಇಂದು ಐತಿಹಾಸಿಕ ಬೆಂಗಳೂರು ಕರಗ

ನಗರದ ಬೀದಿಗಳಲ್ಲಿ ರಾರಾಜಿಸಲಿದೆ ಹೂವಿನ ಕರಗ. ಇಲ್ಲಿಯ ಒಂದು ವಿಶೇಷವೆಂದರೆ ಭಾವೈಕ್ಯದ ಸಂಕೇತವೆಂಬಂತೆ ಕರಗದ ದಾರಿಯಲ್ಲಿ ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಿ, ಅಲ್ಲಿ ಧೂಪಾರತಿ ಸ್ವೀಕರಿಸಲಾಗುತ್ತದೆ.

Last Updated : Mar 31, 2018, 11:56 AM IST
ಇಂದು ಐತಿಹಾಸಿಕ ಬೆಂಗಳೂರು ಕರಗ title=

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದಿಶಕ್ತಿ ಅವತಾರಿಣಿಯಾದ ದ್ರೌಪದಿ ದೇವಿಯ ಕರಗ ಇಂದು ರಾಜಧಾನಿಯ  ಬೀದಿಗಳಲ್ಲಿ ರಾರಾಜಿಸಲಿದೆ.

ಕರಗ ಕರ್ನಾಟಕದ ಪ್ರಸಿದ್ಧ ಜಾನಪದ ಆಚರಣೆಯಾಗಿದೆ. ಈ ಸಂಧರ್ಭದಲ್ಲಿ ಆದಿಶಕ್ತಿ ಶ್ರೀ ದ್ರೌಪದಿಯನ್ನು, ವಹ್ನಿಕುಲ ಕ್ಷತ್ರಿಯ ( ತಿಗಳ ಕ್ಷತ್ರಿಯ) ಜನಾಂಗದವರು ಕುಲದೇವತೆಯಾಗಿ ಆರಾಧಿಸುತ್ತಾರೆ.

ಕರಗ ಆಚರಣೆಯ ಮೂಲ:
ಕುರುಕ್ಷೇತ್ರ ಸಮರದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುವ ಸಂದರ್ಭದಲ್ಲಿ ದ್ರೌಪದಿ ಮಾರ್ಛಿತಳಾಗಿ ಬಿದ್ದಳಂತೆ. ದ್ರೌಪದಿ ಮೂರ್ಛಿತಳಾಗಿ ಬಿದ್ದದ್ದು ಪಾಂಡವರಿಗೆ ತಿಳಿಯದೆ ಮುಂದೆ ನಡೆಯುತ್ತಾರೆ. ಆಕೆಗೆ ಎಚ್ಚರ ಬಂದು ನೋಡಿದಾಗ ತಿಮಿರಾಸುರ ಎಂಬ ರಾಕ್ಷಸ ದೂರದಲ್ಲಿ ನಿಂತಿದ್ದ. ಆಗ ದ್ರೌಪದಿ ಆದಿಶಕ್ತಿಯ ರೂಪವನ್ನು ತೋರುತ್ತಾ ತಿಮರಾಸುರನನ್ನು ಸದೆ ಬಡಿಯಲು, ತನ್ನ ತಲೆಯಿಂದ ‘ಯಜಮಾನ’ರನ್ನು, ಹಣೆಯಿಂದ ‘ಗಣಾಚಾರಿ’ಗಳನ್ನು, ಕಿವಿಗಳಿಂದ ‘ಗವ್ಡ’ರನ್ನು, ಬಾಯಿಯಿಂದ ‘ಗಂಟೆಪೂಜಾರಿ’ಗಳನ್ನು ಮತ್ತು ಹೆಗಲಿನಿಂದ ‘ವೀರಕುಮಾರ’ರನ್ನು ಸೃಷ್ಥಿ ಮಾಡುತ್ತಾಳೆ. ಹೀಗೆ ಹುಟ್ಟಿದ ಇವರೆಲ್ಲರೂ ಸೇರಿ ಆ ರಕ್ಕಸನ ಎದಿರು ಹೋರಾಡಿ ಗೆಲ್ಲುತ್ತಾರೆ. ಹೀಗೆ ಮಕ್ಕಳನ್ನು ಹುಟ್ಟಿಸಿದ ದ್ರೌಪದಿ ಆದಿಶಕ್ತಿಯಾಗಿ, ಮತ್ತೆ ಭೂಮಿಗೆ ಮರಳಿ ಬಾರದಂತೆ ಕೈಲಾಸಕ್ಕೆ ಹೋಗುವುದು ಮಕ್ಕಳಿಗೆ ದುಗುಡ ಉಂಟು ಮಾಡುತ್ತದೆ. ಅವಳು ಹೋಗದಂತೆ ಬೇಡಿಕೊಳ್ಳಲು ಕೃಷ್ಣನು ಅವರಿಗೆ, ತಾಯಿಯನ್ನು ಹೋಗದಂತೆ ತಡೆಯಲು ತಮ್ಮ ಕೈಯಲ್ಲಿರುವ ಕತ್ತಿಯಿಂದ ತಮ್ಮ ಎದೆಗೆ ತಿವಿದುಕೊಳ್ಳುತ್ತಾ (ಇದನ್ನು ಕರಗ ಹಬ್ಬದಲ್ಲಿ ‘ಅಲಗುಸೇವೆ’ ಎನ್ನುತ್ತಾರೆ) “ನಮಗೆ ನೀನಲ್ಲದೆ ಇನ್ಯಾರು ದಿಕ್ಕು, ಹೋಗದಿರು” ಎಂದು ಅಲವತ್ತು ಕೊಳ್ಳಲು ಹೇಳುವನು. ಇದನ್ನು ನೋಡಿ ದ್ರೌಪದಿಗೆ ಮರುಕವಾಗಿ ಪ್ರತಿ ವರುಷವೂ ಮೂರು ದಿನ ಭೂಮಿಗೆ ಬಂದು ಮಕ್ಕಳೊಂದಿಗೆ ಇರುವ ಮಾತು ನೀಡುತ್ತಾಳೆ. ಆ ಮೂರು ದಿನಗಳೇ ಕರಗ ಹಬ್ಬದ ದಿನಗಳು. ಇದರ ನೆನಪಿಗೆ ಕರಗ ನಡೆಯುತ್ತದೆಂದು ಹೇಳಲಾಗಿದೆ. ಇದರ ಜೊತೆಗೆ ಇನ್ನೊಂದು ಐತಿಹ್ಯವಿದೆ. ದ್ವಾಪರ ಯುಗದಲ್ಲಿ, ಒಂದು ಸರ್ವಾಲಂಕಾರ ಭೂಷಿತೆಯಾದ ದ್ರೌಪದಿ ಮಂಗಳ ಕಲಶವನ್ನು ಹಿಡಿದು ಸ್ವಯಂವರ ಮಂಟಪವನ್ನು ಪ್ರವೇಶಿಸಿದಳು. ಮತ್ಸ್ಯವನ್ನು ಭೇದಿಸುವ ಅರ್ಜುನನ್ನೂ, ಕುಂತಿಯ ಅಭಿಲಾಷೆಯಂತೆ ಉಳಿದ ನಾಲ್ವರು ಪಾಂಡವ ಸಹೋದರರನ್ನೂ ಶಾಸ್ತ್ರೋಸ್ತವಾಗಿ ವಿವಾಹವಾದಳು. ಆಗ ಸಂತೋಷದಿಂದ ಕೈಯಲಿದ್ದ ಕಲಶವನ್ನು ಶಿರದಲ್ಲಿ ಧರಿಸಿದಳು. ಅದೇ ಕರಗವಾಯಿತು ಎಂಬ ನಂಬಿಕೆಯೂ ಇದೆ.

ಹೀಗೆ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಬೆಂಗಳೂರು ಕರಗಕ್ಕೆ ಸಕಲ ಸಿದ್ಧತೆ ನಡೆದಿದ್ದು, ದ್ರೌಪತಮ್ಮನ ದೇವಾಲಯದಲ್ಲಿ ಭಕ್ತವೃಂದ ಕರಗ ಮಹೋತ್ಸವ ಕಣ್ತುಂಬಿಕೊಳ್ಳಲು ಕಾತರವಾಗಿದೆ. ವಿಶ್ವವಿಖ್ಯಾತ ಕರಗಕ್ಕೆ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಒಂದು ವಾರದಿಂದ ಸಿದ್ಧತೆ ನಡೆಯುತ್ತಿದೆ. ಅರ್ಜುನ ಮತ್ತು ದ್ರೌಪತಿ ಕಲ್ಯಾಣೋತ್ಸವ ಮುಗಿಸಿ ನಂತರ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ಪೂಜಾ ವಿಧಾನ ಮುಗಿಸಿ ರಾತ್ರಿ 12:30 ಹೂವಿನ ಕರಗ ನಗರ ಬೀದಿಗಳಲ್ಲಿ ಸಂಚರಿಸಲಿದೆ. ಕರಗದ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲು ಪೋಲಿಸ್ ಪಡೆ ಸಿದ್ಧವಾಗಿದೆ. 

ಕರಗದ ಮಾರ್ಗ
ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರಡುವ ಕರಗ ಸಿಲಿಕಾನ್ ಸಿಟಿಯ ಕಬ್ಬನ್ ಪೇಟೆ, ಅವೆನ್ಯೂ ರಸ್ತೆ ಮಾರ್ಗವಾಗಿ ರಾಜಾಮಾರ್ಕೆಟ್ ಮೂಲಕ ಸಾಗಿ ಸಿಟಿ ಮಾರ್ಕೆಟ್ ನಲ್ಲಿ ಪೂಜೆ ಮುಗಿಸಿ, ಪೋಲಿಸ್ ರಸ್ತೆಯಿಂದ ಅರಳೆ ಪೇಟೆ ಸುತ್ತುಹಾಕಿ ನಂತರ ಮುಸ್ತಾನ್ ಸಾಹೇಬ್ ಮಸೀದಿ ಮೂಲಕ ಬಂದು ಅಣ್ಣಮ್ಮ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಬೆಳಿಗ್ಗೆ ಸೂರ್ಯೋದಯದ ಹೊತ್ತಿಗೆ ತಿಗಳರ ಪೇಟೆಗೆ ಆಗಮಿಸಲಿದೆ. 

ಇಲ್ಲಿಯ ಒಂದು ವಿಶೇಷವೆಂದರೆ ಭಾವೈಕ್ಯದ ಸಂಕೇತವೆಂಬಂತೆ ಕರಗದ ದಾರಿಯಲ್ಲಿ ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಿ, ಅಲ್ಲಿ ಧೂಪಾರತಿ ಸ್ವೀಕರಿಸುತ್ತಾರೆ. ಕರಗಧಾರಿಗಳ ಸ್ವಾಗತಕ್ಕೆ ಮನೆಗಳ ಮುಂದೆ ರಂಗೋಲಿ, ತಳಿರು ತೋರಣಗಳಿಂದ ಅಲಂಕೃತಗೊಂಡಿರುತ್ತದೆ. ಕರಗವನ್ನು ಸಾವಿರಾರು ಜನ ರಾತ್ರಿ ಇಡೀ ರಸ್ತೆಯ ಇಕ್ಕೆಲ ಗಳಲ್ಲಿ ನಿಂತು ನೋಡುತ್ತಾರೆ. 

Trending News