ಬೆಂಗಳೂರಿನಲ್ಲಿ 'ಜುರಾಸಿಕ್ ವರ್ಲ್ಡ್' ನೋಡಲು ಬಂದವರಿಗೆ 'ಕಾಲಾ' ದರ್ಶನ!

ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದ್ದು, ಬುಕ್ ಮೈ ಶೋನಲ್ಲಿ 'ಜುರಾಸಿಕ್ ವರ್ಲ್ಡ್' ಚಿತ್ರ ನೋಡಲು ಟಿಕೆಟ್ ಬುಕ್ ಮಾಡಲಾಗಿತ್ತು. 

Updated: Jun 9, 2018 , 05:22 PM IST
ಬೆಂಗಳೂರಿನಲ್ಲಿ 'ಜುರಾಸಿಕ್ ವರ್ಲ್ಡ್' ನೋಡಲು ಬಂದವರಿಗೆ 'ಕಾಲಾ' ದರ್ಶನ!

ಬೆಂಗಳೂರು: ಗತಕಾಲದ ಪ್ರಾಣಿಗಳನ್ನು ನೋಡಬೇಕೆಂದು ಚಿತ್ರಮಂದಿರಕ್ಕೆ ಬಂದವರಿಗೆ 'ಜುರಾಸಿಕ್ ವರ್ಲ್ಡ್' ಚಿತ್ರಕ್ಕೆ ಬದಲಾಗಿ ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರ ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದ್ದು, ಬುಕ್ ಮೈ ಶೋನಲ್ಲಿ 'ಜುರಾಸಿಕ್ ವರ್ಲ್ಡ್' ಚಿತ್ರ ನೋಡಲು ಟಿಕೆಟ್ ಬುಕ್ ಮಾಡಲಾಗಿತ್ತು. ಆದರೆ, ಚಿತ್ರಮಂದಿರಕ್ಕೆ ತೆರಳಿದ ಪ್ರೇಕ್ಷಕರಿಗೆ 'ಕಾಲಾ' ಚಲನಚಿತ್ರದ ದರ್ಶನವಾಗಿದೆ. ಈ ಬಗ್ಗೆ ಥಿಯೇಟರ್ ವ್ಯವಸ್ಥಾಪಕರನ್ನು ಪ್ರಶ್ನಿಸಿದ ಪ್ರೇಕ್ಷಕರಿಗೆ, ಜುರಾಸಿಕ್ ವರ್ಲ್ಡ್ ಚಿತ್ರ ಪ್ರದರ್ಶನವಾಗಬೇಕಿತ್ತು. ಆದರೆ ಈಗ ಕ್ಯಾನ್ಸಲ್ ಆಗಿದ್ದು, 'ಕಾಲಾ' ಚಿತ್ರ ಪ್ರದರ್ಶನವಾಗಲಿದೆ. ನಿಮ್ಮ ಟಿಕೆಟ್ ಕ್ಯಾನ್ಸಲ್ ಆಗಿದ್ದು, ಹಣ ನಿಮ್ಮ ಖಾತೆಗೆ ಹಿಂದಿರುಗಿಸಲಾಗುತ್ತದೆ. ಇಲ್ಲವಾದರೆ ಈ ಚಿತ್ರವನ್ನೇ ನೋಡಬಹುದು" ಎಂದು ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿ ತಮಿಳಿನ ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರ ಪ್ರದರ್ಶನಕ್ಕೆ ಈ ಹಿಂದೆ ಭಾರೀ ವಿರೋಧ ವ್ಯಕ್ತವಾಗಿತ್ತು. ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಉಂಟುಮಾಡಿದ್ದವು. ಆದರೂ ರಾಜ್ಯದಲ್ಲಿ ಬಿಗಿ ಪೋಲಿಸ್ ಭದ್ರತೆಯೊಂದಿಗೆ 'ಕಾಲಾ' ಚಿತ್ರ ಪ್ರದರ್ಶನವಾಗಿದೆ. ಆದರೆ ಕಲೆಕ್ಷನ್ ಬಹಳ ಕಡಿಮೆ ಇದೆ ಎಂದು ತಿಳಿದುಬಂದಿದೆ. ಈ ಬೆನ್ನಲ್ಲೇ ಚಿತ್ರಮಂದಿರದಲ್ಲಿ ಚಿತ್ರಗಳ ಅದಲು ಬದಲಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.