ಮಳೆಗಾಲದಲ್ಲಿ ಪ್ರತಿನಿತ್ಯ ಈ ಪದಾರ್ಥ ಸೇವಿಸಿ, ಹಲವು ಸಮಸ್ಯೆಗಳಿಂದ ದೂರವಿರಿ!

ಕೇವಲ ನೆಗಡಿ ಕೆಮ್ಮು, ಜ್ವರ ಅಷ್ಟೇ ಅಲ್ಲ, ಅಲರ್ಜಿ, ಕಾಮಾಲೆ, ಅಸ್ತಮಾ, ಮೂಲವ್ಯಾಧಿ ಮತ್ತು ಹೃದ್ರೋಗದಂತಹ ಗಂಭೀರ ಸಮಸ್ಯೆಗಳಿಗೂ ಅಳಲೆಕಾಯಿ ಪರಿಣಾಮಕಾರಿ ಔಷಧಿ. 

Divyashree K Divyashree K | Updated: Jul 8, 2018 , 06:30 PM IST
ಮಳೆಗಾಲದಲ್ಲಿ ಪ್ರತಿನಿತ್ಯ ಈ ಪದಾರ್ಥ ಸೇವಿಸಿ, ಹಲವು ಸಮಸ್ಯೆಗಳಿಂದ ದೂರವಿರಿ!

ಶೀತ, ಕೆಮ್ಮು, ಜ್ವರ, ಮೈನೋವು ಮೊದಲಾದ ಸಮಸ್ಯೆಗಳು ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಅಳಲೆಕಾಯಿ ದಿವ್ಯೌಷಧ. ಮಾನವನ ದೇಹದ ಸ್ವಾಸ್ಥ್ಯಕ್ಕೆ ಅವಶ್ಯವಿರುವ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಪ್ರೋಟಿನ್ ಗಳು ಇದರಲ್ಲಿ ಹೇರಳವಾಗಿವೆ. ವಿಟಮಿನ್ ಸಿ, ಐರನ್, ಕಾಪರ್ ಸಹಿತ ಇನ್ನೂ ಅನೇಕ ಖನಿಜಾಂಶಗಳಿವೆ. ಹಾಗಾಗಿ ಕೇವಲ ನೆಗಡಿ ಕೆಮ್ಮು, ಜ್ವರ ಅಷ್ಟೇ ಅಲ್ಲ, ಅಲರ್ಜಿ, ಕಾಮಾಲೆ, ಅಸ್ತಮಾ, ಮೂಲವ್ಯಾಧಿ ಮತ್ತು ಹೃದ್ರೋಗದಂತಹ ಗಂಭೀರ ಸಮಸ್ಯೆಗಳಿಗೂ ಅಳಲೆಕಾಯಿ ಪರಿಣಾಮಕಾರಿ ಔಷಧಿ. 

ಅಳಲೆಕಾಯಿಯ ಉಪಯೋಗಗಳು

1. ಗಾಯ ನಿವಾರಣೆ:  ದೇಹದ ಯಾವುದೇ ಭಾಗದಲ್ಲಿ ಗಾಯಗಳಾದರೂ ಅಳಲೆಕಾಯಿ ರಸ ಲೇಪಿಸುವುದರಿಂದ ಗಾಯ ಉಪಶಮನವಾಗುತ್ತದೆ.

2. ಚರ್ಮರೋಗಕ್ಕೆ ಪ್ರಯೋಜನಕಾರಿ: ಬಹುತೇಕ ಚರ್ಮರೋಗಗಳಾದ, ಬ್ಯಾಕ್ಟೀರಿಯಾ ಮತ್ತು ಫಂಗಸ್ ಗಳಂತಹ ರೋಗಾಣುಗಳನ್ನು ಅಳಲೆ ಕಾಯಿ ನಿಯಂತ್ರಿಸುತ್ತದೆ. ಹಾಗಾಗಿ ಅಳಲೆ ಹಣ್ಣನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕಷಾಯ ತಯಾರಿಸಿ. ಇದನ್ನು ದಿನಕ್ಕೆ ಎರಡು ನಿಯಮಿತವಾಗಿ ಸೇವಿಸುವುದರಿಂದ ಅಲರ್ಜಿ ನಿವಾರಣೆಯಾಗುತ್ತದೆ. ಶಿಲೀಂದ್ರ ಸೊಂಕುಗಳ ನಿವಾರಣೆಗೆ ಅರಿಶಿನ ಮತ್ತು ಅಳಲೆ ಹಣ್ಣನ್ನು ಚೆನ್ನಾಗಿ ಅರೆದು ಸೋಂಕು ತಗುಲಿದ ಭಾಗಕ್ಕೆ ಹಚ್ಚಿ ಒಂದು ಗಂಟೆಯ ನಂತರ ತೊಳೆಯಿರಿ. ಹೀಗೆ ಮಾಡುವುದರಿಂದ ಶಿಲೀಂದ್ರ ಸೋಂಕು ನಿವಾರಣೆಯಾಗುತ್ತದೆ. 

3. ದೇಹದ ಕೊಬ್ಬು ಕರಗಿಸುತ್ತದೆ: ಪ್ರತಿದಿನ ಮುಂಜಾನೆ ಅಳಲೆ ಕಾಯಿ ಕಷಾಯವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುವುದರ ಜೊತೆಗೆ, ದೇಹದಲ್ಲಿ ಶೇಖರಿಸಲ್ಪಟ್ಟ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ.

3. ಕೆಮ್ಮು, ವಾಕರಿಕೆ, ದೇಹ ಬಾಧೆ ನಿವಾರಣೆ : ಅಳಲೆಕಾಯಿಯನ್ನು ನುಣ್ಣಗೆ ಪುಡಿ ಮಾಡಿ ಜೇನು ತುಪ್ಪದೊಂದಿಗೆ ಬೆರೆಸಿ 6-7 ದಿನಗಳ ಸೇವಿಸಿದರೆ ವಾಕರಿಕೆ, ಕೆಮ್ಮು ನಿವಾರಣೆಯಾಗುವುದು. ಎಲ್ಲಾ ಪ್ರಕಾರದ ಕಣ್ಣುಗಳ ಬೇನೆ, ಕುತ್ತಿಗೆ ನೋವಿಗೂ ಅಳಲೆ ಕಾಯಿ ಉಪಯೋಗಕಾರಿಯಾಗಿದೆ. 

4. ಕೂದಲಿನ ಸಮಸ್ಯೆಗೆ ಪರಿಹಾರ: ಕೂದಲು ಉದುರುವಿಕೆ, ಹೇನು ಮತ್ತು ತಲೆ ಹೊಟ್ಟನ್ನು ನಿವಾರಿಸಲು 1 ಕಪ್ ಕೊಬ್ಬರಿ ಎಣ್ಣೆಗೆ 3 ಅಳಲೆಕಾಯಿ ಬೀಜವನ್ನು ಹಾಕಿ, ಕಾಯಿಸಿ ಎಣ್ಣೆ ತಣ್ಣಗಾದ ನಂತರ ಉಪಯೋಗಿಸುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.

5. ಮಲಬದ್ಧತೆ ನಿವಾರಣೆ: ಜೀರ್ಣಶಕ್ತಿಯನ್ನು ವರ್ಧಿಸಲು ಮಲಬದ್ಧತೆಯನ್ನು ನೀಗಿಸುವಲ್ಲಿ ಪರಿಣಾಮಕಾರಿಯಾಗಿದೆ. ಸ್ವಲ್ಪ ಉಪ್ಪು, ಲವಂಗ ಅಥವಾ ದಾಲ್ಚಿನ್ನಿಗಳೊಂದಿಗೆ ಅಳಲೆ ಹಣ್ಣಿನ ತಿರುಳನ್ನು ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. 

6. ಬಾಯಿಹುಣ್ಣುಗೆ ರಾಮಬಾಣ: ಅಳಲೆ ಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ, ಬಾಯಿ ಮುಕ್ಕಳಿಸಿ ಉಗುಳುವುದರಿಂದ ಬಾಯಿಹುಣ್ಣು ಮತ್ತಿತರ ವಸಡು ಸಮಸ್ಯೆಗಳು ನಿವಾರಣೆಯಾಗುತ್ತದೆ. 

By continuing to use the site, you agree to the use of cookies. You can find out more by clicking this link

Close