ಆರೋಗ್ಯಯುತ ಕಿಡ್ನಿ ನಿಮ್ಮದಾಗಬೇಕೆ? ಹಾಗಿದ್ದರೆ ಈ 10 ಅಭ್ಯಾಸಗಳಿಂದ ದೂರವಿರಿ!

ಈ ಕೆಳಗಿನ 10 ಅಭ್ಯಾಸಗಳಿಂದ ದೂರವಿದ್ದು, ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಿ.

Divyashree K Divyashree K | Updated: Mar 7, 2018 , 06:14 PM IST
ಆರೋಗ್ಯಯುತ ಕಿಡ್ನಿ ನಿಮ್ಮದಾಗಬೇಕೆ? ಹಾಗಿದ್ದರೆ ಈ 10 ಅಭ್ಯಾಸಗಳಿಂದ ದೂರವಿರಿ!

ದೇಹದ ಬಹುಮುಖ್ಯ ಅಂಗಗಳಲ್ಲಿ ಕಿಡ್ನಿಗಳೂ ಸಹ ಮುಖ್ಯವಾದವು. ಆದರೆ, ಇಂದು ದೇಶಾದ್ಯಂತ ಬಹಳಷ್ಟು ಮಂದಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ನಮ್ಮ ದೇಹದ ರಕ್ತವನ್ನು ಶುದ್ಧೀಕರಿಸುವ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಅಗತ್ಯ ಹೆಚ್ಚಾಗುತ್ತಿದೆ. ಕಿಡ್ನಿಗೆ ಸಮಸ್ಯೆ ಎದುರಾದ ನಂತರ ಪರಿಹಾರೋಪಾಯಗಳಿಗೆ ಪರದಾಡುವ ಬದಲು ಕಿಡ್ನಿ ಆರೋಗ್ಯಕ್ಕೆ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಒಳಿತಲ್ಲವೇ ? ಹಾಗಿದ್ದರೆ, ಈ ಕೆಳಗಿನ 10 ಅಭ್ಯಾಸಗಳಿಂದ ದೂರವಿದ್ದು, ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಿ.

1. ಮೂತ್ರ ತಡೆಹಿಡಿಯುವುದು : ಮೂತ್ರ ವಿಸರ್ಜನೆ ಮಾಡಬೇಕೆನಿಸಿದರೂ, ತಡೆಹಿಡಿಯುವ ಅಭ್ಯಾಸ ಇದ್ದರೆ ಅದನ್ನು ಕೂಡಲೇ ಬಿಟ್ಟುಬಿಡಿ. ಏಕೆಂದರೆ ಇದು ಕಿಡ್ನಿಯಲ್ಲಿ ಕಲ್ಲುಗಳು ಉಂಟಾಗಲು ಮತ್ತು ಕಿಡ್ನಿ ವೈಫಲ್ಯಕ್ಕೆ ಕಾರಣವಾಗುತ್ತದೆ. 

2. ಅತಿ ಕಡಿಮೆ ನೀರು ಕುಡಿಯುವುದು : ಈ ಅಭ್ಯಾಸದಿಂದ ಕಿಡ್ನಿಗಳು ಸಕ್ರಿಯವಾಗಿರಲು ತೊಂದರೆಯಾಗುತ್ತದೆ. ಅಲ್ಲದೆ, ದೇಹದಲ್ಲಿನ ಕೆಟ್ಟ ಅಂಶಗಳು ಸಂಪೂರ್ಣವಾಗಿ ಹೊರಹೋಗಲು ತೊಂದರೆಯಾಗುತ್ತದೆ. ಹಾಗಾಗಿ ಹೆಚ್ಚು ನೀರು ಕುಡಿಯುವುದು ಒಳಿತು. 

3. ಹೆಚ್ಚು ಸಕ್ಕರೆ ಸೇವನೆ : ಸಿಹಿ ತಿಂಡಿಗಳು ಇಷ್ಟವೆಂದು ಮನಬಂದಂತೆ ತಿಂದರೆ ಅದು ನಿಮ್ಮ ಆರೋಗ್ಯಕ್ಕೆ ಕುತ್ತು ತರುತ್ತದೆ. ಹಾಗಾಗಿ ಸಿಹಿ ತಿಂಡಿಗಳ ಸೇವನೆ ಆದಷ್ಟು ಕಡಿಮೆ ಇರಲಿ. ಇತ್ತೀಚಿನ ಸಂಶೋಧನೆಗಳ ಪ್ರಕಾರ ದಿನಕ್ಕೆ 2 ಸೋಡಾ ಕುಡಿಯುವವರು ಹೆಚ್ಚು ಕಿಡ್ನಿ ಸಮಸ್ಯೆ ಎದುರಿಸುತ್ತಾರೆ ಎನ್ನಲಾಗಿದೆ. 

4. ಹೆಚ್ಚು ಮಾಂಸಾಹಾರ ಸೇವನೆ : ಕುರಿ, ಮೇಕೆ, ದನ ಮೊದಲಾದ ಪ್ರಾಣಿಗಳ ಮಾಂಸ ಬಲು ರುಚಿ. ಹಾಗೆಂದು ಅದನ್ನು ಪ್ರತಿನಿತ್ಯ ಸೇವಿಸಲು ಆರಂಭಿಸಿದರೆ ಕಿಡ್ನಿ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ ಕೆಂಪು ಮಾಂಸ ಸೇವನೆಯಿಂದ ದೂರವಿರಿ. 

5. ಅತಿ ಹೆಚ್ಚು ಉಪ್ಪು ಸೇವನೆ : ಅತಿ ಹೆಚ್ಚು ಉಪ್ಪು ಸೇವನೆಯಿಂದ ರಕ್ತದೊತ್ತಡ ಹೆಚ್ಚಾಗಿ ಕಿಡ್ನಿ ಹಾನಿಗೆ ದಾರಿ ಮಾಡಿಕೊಡುತ್ತದೆ. 

6. ನಿದ್ದೆ ಮಾಡದಿರುವುದು : ಕೆಲವರಿಗೆ ನಿದ್ದೆ ಎಂದರೆ ಅಲರ್ಜಿ. ಯಾವಾಗಲೂ ಮೊಬೈಲ್ನಲ್ಲಿ ಬಿಜಿ ಆಗಿರುತ್ತಾ ನಿದ್ದೆ ಮಾಡುವುದೇ ಇಲ್ಲ. ಹೀಗೆ ಕಡಿಮೆ ನಿದ್ದೆಯಿಂದಾಗಿ ಕಿಡ್ನಿಯಲ್ಲಿನ ಟಿಶ್ಯೂಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಹಾಗಾಗಿ ಕನಿಷ್ಠ 7 ತಾಸುಗಳ ನಿದ್ದೆ ಮಾಡಿದರೆ ಒಳಿತು. 

7. ಪೌಷ್ಠಿಕ ಆಹಾರ ಸೇವಿಸದಿರುವುದು : ಕೆಲವರಿಗೆ ಸೊಪ್ಪು, ತರಕಾರಿ, ಹಣ್ಣುಗಳೆಂದರೆ ಅಲರ್ಜಿ. ಹಾಗಾದರೆ ದೇಹಕ್ಕೆ ಅಗತ್ಯವಾದ ಪೌಷ್ಠಿಕಾಂಶಗಳು ದೊರೆಯುವುದು ಹೇಗೆ? ಅಲ್ಲದೆ Mg ಮತ್ತು B6 ಪೌಷ್ಠಿಕಾಂಶಗಳು ದೇಹದಲ್ಲಿ ಕಡಿಮೆಯಾದಂತೆ ಕಿಡ್ನಿ ಕ್ರಮೇಣ ನಿಷ್ಕ್ರಿಯಗೊಳ್ಳುತ್ತಾ ಹೋಗುತ್ತದೆ. ಹಾಗಾಗಿ ಅತಿ ಹೆಚ್ಚು ನಾರು, ವಿಟಮಿನ್, ಪ್ರೋಟಿನ್ ಅಂಶಗಳಿರುವ ಪದಾರ್ಥಗಳನ್ನು ಸೇವಿಸುವುದು ಒಳಿತು.

8. ಅತಿ ಹೆಚ್ಚು ಕಾಫಿ ಸೇವನೆ : ತಲೆ ನೋವು ಎಂದೋ, ಚಳಿ ಎಂದೋ ಕಾರಣಗಳನ್ನು ನೀಡಿ ಅತಿ ಹೆಚ್ಚು ಕಾಫಿ ಕುಡಿಯುವ ಅಭ್ಯಾಸ ಹಲವರಿಗಿದೆ. ಆದರೆ, ನೀವು ಕುಡಿಯುವ ಅತಿಯಾದ ಕಾಫಿ ನಿಮ್ಮ ಕಿಡ್ನಿಯ ಮೇಲೆ ಹೆಚ್ಚು ಒತ್ತಡವನ್ನು ಹಾಕುತ್ತದೆ ಎಂಬುದನ್ನು ಮರೆಯಬೇಡಿ. 

9. ಮದ್ಯಪಾನ : ಮದ್ಯಪಾನ ಮಾಡುವುದರಿಂದ ಅದು ಕಿಡ್ನಿಗಳಿಗೆ ಹಾನಿ ಉಂಟುಮಾಡುತ್ತದೆ ಅಲ್ಲದೆ, ವ್ಯತಿರಿಕ್ತ ಪರಿಣಾಮ ಬೀರಿ, ಕಿಡ್ನಿ ನಿಷ್ಕ್ರಿಯಗೊಳ್ಳುವ ಸಂಭವವೇ ಹೆಚ್ಚು. ಈ ಅಭ್ಯಾಸವಿದ್ದರೆ ಈಗಲೇ ಬಿಟ್ಟುಬಿಡಿ. 

10. ನೋವು ನಿವಾರಕ ಮಾತ್ರೆಗಳ ಸೇವನೆ : ಸ್ವಲ್ಪ ಮೈಕೈ ನೋವು ಕಾಣಿಸಿಕೊಂಡರೂ ತಕ್ಷಣ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವವರೇ ಹೆಚ್ಚು. ನೀವೂ ಕೂಡ ಈ ಅಭ್ಯಾಸ ಇರುವವರ ಪಟ್ಟಿಯಲ್ಲಿದ್ದರೆ ಆದಷ್ಟು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿ. ಏಕೆಂದರೆ, ಅದರಲ್ಲಿರುವ ರಾಸಾಯನಿಕಗಳು ಮತ್ತು ಅದರಿಂದಾಗುವ ಸೈಡ್ ಎಫೆಕ್ಸ್'ನಿಂದಾಗಿ ಲಿವರ್ ಮತ್ತು ಕಿಡ್ನಿಗಳು ಸಂಪೂರ್ಣ ಹಾನಿಗೊಳಗಾಗುತ್ತವೆ.