ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಬಂಧನ ವಾರಂಟ್

ನಾಯ್ಡು ಸೇರಿದಂತೆ ಎಲ್ಲಾ ಆರೋಪಿಗಳನ್ನು ಸೆಪ್ಟೆಂಬರ್ 21ರಂದು ವಿಚಾರಣೆಗೆ ಖುದ್ದು ಹಾಜರು ಪಡಿಸುವಂತೆ ಆದೇಶ ನೀಡಿದ ಮಹಾರಾಷ್ಟ್ರ ಕೋರ್ಟ್.  

Updated: Sep 14, 2018 , 10:15 AM IST
ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಬಂಧನ ವಾರಂಟ್

ಅಮರಾವತಿ: ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಸೇರಿದಂತೆ 15 ಮಂದಿ ವಿರುದ್ಧ ಮಹಾರಾಷ್ಟ್ರ ನ್ಯಾಯಾಲಯ ಬಂಧನ ವಾರಂಟ್ ಜಾರಿ ಮಾಡಿದೆ. 2010ರಲ್ಲಿ ಬಾಬ್ಲಿ ಅಣೆಕಟ್ಟು ನಿರ್ಮಾಣ ವಿರೋಧಿಸಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ  ವಾರಂಟ್ ಜಾರಿ ಮಾಡಲಾಗಿದೆ.

ನಾಂದೇಡ್ ಜಿಲ್ಲೆಯ ಧರ್ಮಾಬಾದ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟ್, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ 15 ಮಂದಿ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿದ್ದು, ಸೆಪ್ಟೆಂಬರ್ 21ರೊಳಗೆ ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿದೆ.

ಎನ್. ಚಂದ್ರಬಾಬು ನಾಯ್ಡು ಪ್ರತಿಪಕ್ಷದಲ್ಲಿದ್ದಾಗ ಮಹಾರಾಷ್ಟ್ರ ಸರ್ಕಾರ ಗೋದಾವರಿ ನದಿಗೆ ಅಡ್ಡವಾಗಿ ನಿರ್ಮಿಸುತ್ತಿರುವ ಬಾಬ್ಲಿ ಅಣೆಕಟ್ಟು ಯೋಜನೆಯನ್ನು ವಿರೋಧಿಸಿ ಆಂಧ್ರಪ್ರದೇಶದ ಗಡಿ ಜಿಲ್ಲೆ ನಾಂದೇಡ್‌ ನ ಧರ್ಮಾಬಾದ್ ನಲ್ಲಿ ಪ್ರತಿಭಟನೆ ನಡೆಸಿದ್ದರು. ನಾಯ್ಡು ಅಲ್ಲದೆ, ಜಲಸಂಪನ್ಮೂಲ ಸಚಿವ ದೇವಿನೇನಿ ಉಮಾ ಮಹೇಶ್ವರ ರಾವ್, ಸಮಾಜ ಕಲ್ಯಾಣ ಸಚಿವ ಎನ್ ಆನಂದ್ ಬಾಬು, ಮಾಜಿ ಶಾಸಕ ಜಿ ಕಮಲಾಕರ್ ಹಾಗೂ ಇನ್ನಿತರ ತೆಲುಗು ದೇಶಂ ಪಾರ್ಟಿಯ ಕಾರ್ಯಕರ್ತರನ್ನು ಅಂದು ಬಂಧಿಸಲಾಗಿತ್ತು. ಪ್ರತಿಭಟನೆ ವೇಳೆ ಬಂಧನಕ್ಕೊಳಗಾಗಿದ್ದ ನಾಯ್ಡು ಅವರನ್ನು ಪುಣೆ ಜೈಲಿಗೆ ಕಳಿಸಲಾಗಿತ್ತು.