ಇಂದಿನಿಂದ ಪ್ಯಾಲೆಸ್ಟೀನ್‌, ಯುಎಇ ಮತ್ತು ಒಮಾನ್‌ ರಾಷ್ಟ್ರಗಳಿಗೆ ಮೋದಿ ಪ್ರವಾಸ

ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಮೂರು ದಿನಗಳ ಪಶ್ಚಿಮ ಏಷ್ಯಾದ ಮೂರು ರಾಷ್ಟ್ರಗಳಾದ ಪ್ಯಾಲೆಸ್ಟೀನ್‌, ಯುಎಇ ಮತ್ತು ಒಮಾನ್‌ ಪ್ರವಾಸ ಕೈಗೊಂಡಿದ್ದಾರೆ.

Updated: Feb 9, 2018 , 12:45 PM IST
ಇಂದಿನಿಂದ ಪ್ಯಾಲೆಸ್ಟೀನ್‌, ಯುಎಇ ಮತ್ತು ಒಮಾನ್‌ ರಾಷ್ಟ್ರಗಳಿಗೆ ಮೋದಿ ಪ್ರವಾಸ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಮೂರು ದಿನಗಳ ಪಶ್ಚಿಮ ಏಷ್ಯಾದ ಮೂರು ರಾಷ್ಟ್ರಗಳಾದ ಪ್ಯಾಲೆಸ್ಟೀನ್‌, ಯುಎಇ ಮತ್ತು ಒಮಾನ್‌ ಪ್ರವಾಸ ಕೈಗೊಂಡಿದ್ದು, ಪ್ಯಾಲೆಸ್ಟೀನ್ ನತ್ತ ಪ್ರಯಾಣ ಬೆಳೆಸಿದ್ದಾರೆ.

ಭೇಟಿ ವೇಳೆ ಆ ರಾಷ್ಟ್ರಗಳ ಮುಖಂಡರೊಂದಿಗೆ ನಡೆಸುವ ಮಾತುಕತೆಯಲ್ಲಿ ರಕ್ಷಣೆ, ಭದ್ರತೆ ಮತ್ತು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಪರಸ್ಪರ ಸಹಕಾರ ನೀಡುವ ವಿಚಾರ ಪ್ರಮುಖವಾಗಿ ಚರ್ಚೆಗೆ ಬರಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವನೀಶ್ ಕುಮಾರ್  ತಿಳಿಸಿದ್ದಾರೆ. 

ಇದು ಪ್ರಧಾನಿ ಮೋದಿ ಅವರು ಯುಎಇ ಗೆ 2ನೇ ಬಾರಿ ಭೇಟಿ ನೀಡುತ್ತಿದ್ದಾರೆ, ಒಮಾನ್ ಗೆ ಮೊದಲ ಭೇಟಿಯಾಗಲಿದೆ. ಹಾಗೆಯೇ ಪ್ಯಾಲೆಸ್ಟೈನ್ ಗೆ ಭೇಟಿ ನೀಡುತ್ತಿರುವ ಮೊಟ್ಟ ಮೊದಲ ಭಾರತದ ಪ್ರಧಾನಿ ಎಂಬ ಕೀರ್ತಿಗೂ ಮೋದಿ ಭಾಜನರಾಗಲಿದ್ದಾರೆ.

ಮೂರೂ ದಿನಗಳ ಪ್ರವಾದದಲ್ಲಿ ಫೆ.11ರಂದು ದುಬೈನಲ್ಲಿ ನಡೆಯಲಿರುವ 6ನೇ ವಿಶ್ವ ಸರಕಾರಿ ಸಮ್ಮೇಳನ (ವರ್ಲ್ಡ್ ಗವರ್ನ್ ಮೆಂಟ್‌ ಸಮಿಟ್‌)ನಲ್ಲಿ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ. 

ಒಮಾನ್ ನ ಭೇಟಿಯಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಒಮಾನ್ ದೇಶದ ಉಪ ಪ್ರಧಾನಿಗಳಾದ ಎಚ್.ಎಚ್. ಫಹಾದ್ ಬಿನ್ ಮಹಮೂದ್ ಅಲ್ ಸಯೀದ್ ಮತ್ತು ಎಚ್.ಎಚ್. ಸಯೀದ್ ಅಸ್ಸಾದ್ ರವರನ್ನು ಮೋದಿ ಭೇಟಿ ಮಾಡಲಿದ್ದಾರೆ. ಭೇಟಿಯ ಸಮಯದಲ್ಲಿ ಉಭಯ ದೇಶಗಳ ನಡುವಿನ ರಕ್ಷಣಾ ಒಪ್ಪಂದ, ವ್ಯಾಪಾರ ಸಂಬಂಧಗಳ ಕುರಿತು ಚರ್ಚೆ ನಡೆಯಲಿದೆ.