ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ: ಸುಪ್ರೀಂ ತೀರ್ಪು

ಎಸ್‌ಸಿ, ಎಸ್‍ಟಿ ಬಡ್ತಿಯಲ್ಲಿ ಮೀಸಲಾತಿ 2006ರ ತೀರ್ಪು ಮರುಪರಿಶೀಲನೆ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

Last Updated : Sep 26, 2018, 01:38 PM IST
ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ: ಸುಪ್ರೀಂ ತೀರ್ಪು title=

ನವದೆಹಲಿ: ಎಸ್‌ಸಿ/ಎಸ್‍ಟಿ ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ಕೋರಿ ಕೇಂದ್ರ ಸರ್ಕಾರ ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್​ ತಿರಸ್ಕರಿಸಿದ್ದು, ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ ಎಂದು ಹೇಳಿದೆ. ಅಲ್ಲದೆ, ಎಂ. ನಾಗರಾಜ್ ಪ್ರಕರಣದ ತೀರ್ಪನ್ನು ಏಳು ನ್ಯಾಯಮೂರ್ತಿಗಳ ನ್ಯಾಯಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲ ಎಂದಿದೆ. 

ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ನೇತೃತ್ವದ ನ್ಯಾ.ಕುರಿಯನ್ ಜೋಸೆಫ್, ಆರ್​.ಎಫ್​.ನಾರಿಮನ್, ಎಸ್​.ಕೆ.ಕೌಲ್ ಮತ್ತು ಇಂಧು ಮಲ್ಹೋತ್ರಾ ಅವರಿದ್ದ ಸಾಂವಿಧಾನಿಕ ಪಂಚಸದಸ್ಯ ನ್ಯಾಯಪೀಠ ಆ.30ರಂದು ತೀರ್ಪು ಕಾಯ್ದಿರಿಸಿತ್ತು. ಈ ಕುರಿತು ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್‌ನ ಪಂಚ ಸದಸ್ಯರ ಸಂವಿಧಾನಿಕ ಪೀಠ, 2006ರ ಎಂ.ನಾಗರಾಜು ಅವರ ತೀರ್ಪಿನ ಮರು ಪರಿಶೀಲನೆ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಎಂ.ನಾಗರಾಜ್ ಪ್ರಕರಣದ ತೀರ್ಪನ್ನು ಏಳು ನ್ಯಾಯಮೂರ್ತಿಗಳ ನ್ಯಾಯಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲ. ಎಸ್‌ಸಿ, ಎಸ್‌ಟಿ ನೌಕರರ ಮುಂಬಡ್ತಿ ಕುರಿತು ಎಂ ನಾಗರಾಜ್ ಪ್ರಕರಣದ ಮರು ಪರಿಶೀಲನೆ ಅಗತ್ಯವಿಲ್ಲ ಎಂದು ನ್ಯಾ. ನಾರಿಮನ್ ಸ್ಪಷ್ಟಪಡಿಸಿದ್ದಾರೆ. ಹಿಂದುಳಿದವರು ಎಂದು ಹೇಳಲು ಮಾಹಿತಿ  ಸಂಗ್ರಹ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಅಸಮರ್ಪಕ ಪ್ರತಿನಿಧಿಗಳಿಗೆ ಬಡ್ತಿ ನೀಡಿದರೆ ಸರ್ಕಾರದ ಆಡಳಿತದಲ್ಲಿ ದಕ್ಷತೆ ಕುಸಿಯುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ದೀರ್ಘ ಕಾಲದಿಂದ ಶೋಷಣೆಗೆ ಒಳಗಾಗಿರುವ ಈ ಸಮುದಾಯಗಳಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಲೇಬೇಕು. ಎಸ್ಸಿ, ಎಸ್ಟಿ ಸಮುದಾಯದವರು ಬಹುಹಿಂದಿನಿಂದಲೂ ಜಾತಿ ತಾರತಮ್ಯ ಎದುರಿಸುತ್ತಿದ್ದಾರೆ. ಹಿಂದುಳಿದ ಆಧಾರದ ಮೇಲೆ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಕೇಂದ್ರದ ಪರ ಅಟಾರ್ನಿ ಜನರಲ್​ ಕೆ.ಕೆ. ವೇಣುಗೋಪಾಲ್ ಅವರು ಎಸ್ಸಿ, ಎಸ್ಟಿ ಉದ್ಯೋಗಿಗಳ ಪರ ಬಲವಾಗಿ ವಾದ ಮಂಡಿಸಿದ್ದರು. 

ಎಸ್‌ಸಿ ಮತ್ತು ಎಸ್‌ಟಿ ಸಮುದಾಯವು ಒಮ್ಮೆ ಉದ್ಯೋಗಕ್ಕೆ ಸೇರಿದ ಮೇಲೆ ಅವರ ಹಿಂದುಳಿದಿರುವಿಕೆ ನಿವಾರಣೆಯಾಗಿರುತ್ತದೆ. ದರ್ಜೆ-3 ಮತ್ತು ದರ್ಜೆ-4ರ ಹುದ್ದೆಗಳಿಗೆ ಮಾತ್ರ ಬಡ್ತಿ ಮೀಸಲಾತಿ ನೀಡಬಹುದು. ಉನ್ನತ ಹುದ್ದೆಗಳಲ್ಲಿರುವವರಿಗೆ ಬಡ್ತಿ ಮೀಸಲು ಸೌಲಭ್ಯ ಕಲ್ಪಿಸಬಾರದು ಎಂದು ಉದ್ಯೋಗದಲ್ಲಿ ಬಡ್ತಿ ಮೀಸಲು ವಿರೋಧಿಸುತ್ತಿರುವ ಅರ್ಜಿದಾರರ ಪರ ಹಿರಿಯ ವಕೀಲ ರಾಕೇಶ್‌ ದ್ವಿವೇದಿ ವಾದಿಸಿದ್ದರು. 
 

Trending News