ನ್ಯಾಯಾಂಗ ಸ್ವಾತಂತ್ರ್ಯವಿಲ್ಲದೆ ಪ್ರಜಾಪ್ರಭುತ್ವ ಸಾಧ್ಯವಿಲ್ಲ : ಸುಪ್ರೀಂ ಮುಖ್ಯ ನ್ಯಾಯಮೂರ್ತಿ ವಿರುದ್ಧ ನ್ಯಾಯಾಧೀಶರ ಅಸಮಾಧಾನ

ದೇಶದ ಇತಿಹಾಸಲ್ಲೇ ಮೊದಲಬಾರಿಗೆ ಸುಪ್ರೀಂ ಕೋರ್ಟ್ನ ನಾಲ್ವರು ನ್ಯಾಯಾಧೀಶರು ಸುದ್ದಿಗೋಷ್ಠಿ ನಡೆಸಿದ್ದು, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಅಸಮಧಾನ ಹೊರಹಾಕಿದ್ದಾರೆ. 

Last Updated : Jan 12, 2018, 03:07 PM IST
  • ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ನಾಲ್ವರು ನ್ಯಾಯಾಧೀಶರ ಅಸಮಧಾನ.
  • ನ್ಯಾಯಾಧೀಶ ಜೆ.ಚೆಲಮೇಶ್ವರ್, ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ರಂಜನ್ ಗೊಗೊಯ್ ಮತ್ತು ಮದನ್ ಲೋಕೂರ್ ಅವರಿಂದ ನ್ಯಾಯಾಲಯ ಆವರಣದಲ್ಲಿ ಸುದ್ದಿಗೋಷ್ಠಿ.
  • ಕೆಲವು ಬಾರಿ ಸುಪ್ರೀಂ ಕೋರ್ಟ್‌ನಲ್ಲಿ ಬಯಸದ ಘಟನೆಗಳು ನಡೆಯುತ್ತಿವೆ. ಕೋರ್ಟ್‌ ಬೆಳವಣಿಗೆಗಳು ಸರಿಯಿಲ್ಲ ಎಂದು ಆರೋಪ.
ನ್ಯಾಯಾಂಗ ಸ್ವಾತಂತ್ರ್ಯವಿಲ್ಲದೆ ಪ್ರಜಾಪ್ರಭುತ್ವ ಸಾಧ್ಯವಿಲ್ಲ : ಸುಪ್ರೀಂ ಮುಖ್ಯ ನ್ಯಾಯಮೂರ್ತಿ ವಿರುದ್ಧ   ನ್ಯಾಯಾಧೀಶರ ಅಸಮಾಧಾನ title=

ನವದೆಹಲಿ: ದೇಶದ ಇತಿಹಾಸಲ್ಲೇ ಮೊದಲಬಾರಿಗೆ ಸುಪ್ರೀಂ ಕೋರ್ಟ್ನ ನಾಲ್ವರು ನ್ಯಾಯಾಧೀಶರು ಸುದ್ದಿಗೋಷ್ಠಿ ನಡೆಸಿದ್ದು, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಅಸಮಧಾನ ಹೊರಹಾಕಿದ್ದಾರೆ. 

ಈ ಸುದ್ದಿಗೋಷ್ಠಿ ಮುಗಿದ ಕೆಲವೇ ಕ್ಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಈ ವಿಷಯದ ಕುರಿತು ಚರ್ಚೆ ನಡೆಸಲು ಆದೇಶಿಸಿದ್ದಾರೆ.

ನ್ಯಾಯಾಲಯದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನ್ಯಾಯಾಧೀಶ ಜೆ.ಚೆಲಮೇಶ್ವರ್, ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ರಂಜನ್ ಗೊಗೊಯ್ ಮತ್ತು ಮದನ್ ಲೋಕೂರ್ ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗಳ ಕುರಿತು ಸಿಜೆಐಗೆ ಸಹಿ ಪತ್ರವೊಂದನ್ನು ನೀಡಿದ್ದೆವು. ಆದರೆ ನಮ್ಮ ಕಾಳಜಿ ಅವರಿಗೆ ಮನವರಿಕೆಯಾಗಲಿಲ್ಲ ಎಂದರು. 

"ಕೆಲವು ಬಾರಿ ಸುಪ್ರೀಂ ಕೋರ್ಟ್‌ನಲ್ಲಿ ಬಯಸದ ಘಟನೆಗಳು ನಡೆಯುತ್ತಿವೆ. ಕೋರ್ಟ್‌ ಬೆಳವಣಿಗೆಗಳು ಸರಿಯಿಲ್ಲ. ಅಂತಹ ಘಟನೆಗಳ ಬಗ್ಗೆ ಸಿಜೆಐ ಅವರಿಗೆ ಪತ್ರ ಬರೆದು ತಿಳಿಸಿದ್ದೇವೆ. ಆದರೆ  ಫ‌ಲ ಸಿಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ದೇಶದ ಜನರ ಮುಂದೆ ಬಂದಿದ್ದೇವೆ. ಈ ಪರಿಹಾರ ಕ್ರಮಗಳನ್ನು ಜಾರಿಗೊಳಿಸದಿದ್ದರೆ ಈ ದೇಶದಲ್ಲಿ ಅಥವಾ ಯಾವುದೇ ದೇಶದಲ್ಲಿ ಪ್ರಜಾಪ್ರಭುತ್ವವು ಬದುಕುಳಿಯಲು ಸಾಧ್ಯವಿಲ್ಲ" ಎಂದು ಚೆಲಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಇದೆ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಪತ್ರದಲ್ಲಿ, "ಪ್ರಕರಣಗಳನ್ನು ಆಯ್ದ ನಿಯೋಜಿಸಲಾಗುತ್ತಿದೆ ಮತ್ತು ಕೆಲವು ಪ್ರಕರಣಗಳನ್ನು ಆದ್ಯತೆಯ ಮೇರೆಗೆ ಪೀಠಗಳಿಗೆ ಹಂಚಲಾಗುತ್ತಿದೆ" ಎಂದು ನ್ಯಾಯಾಧೀಶರು ಆರೋಪಿಸಿದ್ದಾರೆ.

20 ವರ್ಷದ ನಂತರ ನಾವು ನಾಲ್ವರು ನ್ಯಾಯಾಧೀಶರು ನಮ್ಮ ಆತ್ಮ ಮಾರಿಕೊಂಡಿದ್ದೇವೆಂದು ಯಾರೂ ಹೇಳಬಾರದು. ಹೀಗಾಗಿ ನ್ಯಾಯಾಲಯದ ಘನತೆಯನ್ನು ಎತ್ತಿ ಹಿಡಿಯುವ ಸಲುವಾಗಿ ಅನಿವಾರ್ಯವಾಗಿ ನಾವು ಸುದ್ದಿಗೋಷ್ಠಿ ನಡೆಸುತ್ತಿದ್ದೇವೆಂದು ಚೆಲಮೇಶ್ವರ್ ತಿಳಿಸಿದ್ದಾರೆ. 

 

 

ಈ ವಿಚಾರದ ಕುರಿತು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮಾಧ್ಯಮಗಳನ್ನು ಉದ್ದೀಶಿಸಿ ಮಾತನಾಡುವ ಸಂಭವವಿದೆ. 

Trending News