ನೀವ್ಯಾರೂ ರಾಜಕಾರಣಕ್ಕೆ ಬರೋದು ಬೇಡ ಎಂದು ಸಿದ್ದರಾಮಯ್ಯ ಹೇಳಿದ್ದು ಯಾಕಂತ ಗೊತ್ತಾ!

ರಾಜಕಾರಣದಲ್ಲಿ ಹುಷಾರಾಗಿರಬೇಕು. ಇಲ್ಲಾಂದ್ರೆ ಮುಗಿಸಿ ಬಿಡ್ತಾರೆ- ಮಾಜಿ ಸಿಎಂ ಸಿದ್ದರಾಮಯ್ಯ

Last Updated : Aug 20, 2018, 01:29 PM IST
ನೀವ್ಯಾರೂ ರಾಜಕಾರಣಕ್ಕೆ ಬರೋದು ಬೇಡ ಎಂದು ಸಿದ್ದರಾಮಯ್ಯ ಹೇಳಿದ್ದು ಯಾಕಂತ ಗೊತ್ತಾ! title=
Pic: Twitter@siddaramaiah

ಬೆಂಗಳೂರು: ಕರ್ನಾಟಕ ಪ್ರದೇಶ ಕುರುಬರ ಸಂಘ ಭಾನುವಾರ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ತಮ್ಮ ಸಮುದಾಯದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ನೀವ್ಯಾರು ರಾಜಕಾರಣಕ್ಕೆ ಬರೋದು ಬೇಡ ಎಂದು ಹೇಳಿದರು.

ನಾನು ಗಣಿತ ವಿಷಯದಲ್ಲಿ ಶೇ. 90 ಅಂಕ ಪಡೆದಿದ್ದೆ ಉಳಿದ ವಿಷಯಗಳಲ್ಲಿ 50, 60 ಅಂಕ ಮಾತ್ರ ಪಡೆದಿದ್ದೆ. ಒಂದು ಬಾರಿ ಫೇಲ್ ಆದೆ. ಡಾಕ್ಟರ್ ಆಗಬೇಕು ಅನ್ನೋ ಕನಸಿತ್ತು. ಆದ್ರೆ ಆಗಲೇ ಇಲ್ಲ ‌ಎಂದ ಸಿದ್ದರಾಮಯ್ಯ, ಬಳಿಕ ಕಾನೂನು ಪದವಿ ಮುಗಿಸಿ ರಾಜಕಾರಣಕ್ಕೆ ಬಂದೆ ಹಾಗೂ ಮುಖ್ಯ ಮಂತ್ರಿಯೂ ಆದೇ. ಡಾಕ್ಟರ್ ಆಗಿದ್ರೆ ಇದೆಲ್ಲಾ ಆಗುತ್ತಿರಲಿಲ್ಲ. ನೀವ್ಯಾರು ರಾಜಕಾರಣಕ್ಕೆ ಬರೋದು ಬೇಡ... ಇಂಜಿನಿಯರ್, ಡಾಕ್ಟರ್ , ಐಎಎಸ್, ಕೆಎಎಸ್ ಪಾಸ್ ಮಾಡಿ  ಎಂದು ಸಲಹೆ ನೀಡಿದರು.

ರಾಜಕಾರಣದಲ್ಲಿ ಹುಷಾರಾಗಿರಬೇಕು, ಇಲ್ಲಾಂದ್ರೆ ಮುಗಿಸಿ ಬಿಡ್ತಾರೆ!
ರಾಜಕಾರಣದಲ್ಲಿ ಹುಷಾರಾಗಿರಬೇಕು. ಇಲ್ಲಾಂದ್ರೆ ಮುಗಿಸಿ ಬಿಡ್ತಾರೆ. ಎಲ್ಲ ಜಾತಿ, ಸಮುದಾಯಗಳಿಗೆ ಕಾರ್ಯಕ್ರಮಗಳನ್ನ ರೂಪಿಸಿದೆ. ಆದ್ರೂ ಜಾತಿ ಒಡೆಯುತ್ತಿದ್ದಾನೆ. ಧರ್ಮ ಒಡೆಯುತ್ತಿದ್ದಾನೆ ಅಂತಾ ಗುಲ್ಲೆಬ್ಬಿಸಿಯೇ ಬಿಟ್ರು. ಅಲ್ಲದೆ ಸೋಲಿಸಿಯೂ ಬಿಟ್ಟರು ಎಂದು ನೆರೆದಿದ್ದವರೊಂದಿಗೆ ತಮ್ಮ ರಾಜಕೀಯ ಅನುಭವ ಹಂಚಿಕೊಂಡ ಸಿದ್ದರಾಮಯ್ಯ,  ತಳ ಸಮುದಾಯದವರು ಬಾಯಿ ಬಿಡಲೇ ಇಲ್ಲ. ನೀವು ಜಾಸ್ತಿ ಬಾಯಿ ಬಿಡಿ ಅಂದ್ರೆ ಬಿಡಲೇ ಇಲ್ಲ. ಎಲ್ಲರೂ ಶಿಕ್ಷಣ ಪಡೆಯಿರಿ. ಇದ್ರಿಂದ ಸ್ವಾಭಿಮಾನ, ಜ್ಞಾನ ಸೇರಿ ಎಲ್ಲವೂ ನಿಮ್ಮನ್ನ ಹುಡುಕಿಕೊಂಡು ಬರುತ್ತೆ ಎಂದು ತಿಳಿಸಿದರು.

ಮುಂದಿನ ಪ್ರಧಾನಿ ನೀವೇ ಎಂದ ಸಭಿಕರನ್ನ ಗದರಿದ ಸಿದ್ದರಾಮಯ್ಯ ಸುಮ್ನೆ ಇರಯ್ಯ, ಅದೊಂದು ಬೇರೆ. ಹೀಗೆ ನೀವು ಹೇಳಿದ್ರೆ ಮತ್ತೇ ಶತ್ರುಗಳು ಜಾಸ್ತಿ ಆಗ್ತಾರೆ. ವೈರಿಗಳನ್ನ ಹುಟ್ಟು ಹಾಕ್ಬೇಡಿ. ಮುಗಿಸಿ ಬಿಡ್ತಾರೆ ಸುಮ್ಮನಿರಿ ಎಂದರು.

ಕುರುಬ ಸಮುದಾಯವನ್ನ ಎಸ್ ಟಿ ಗೆ ಸೇರಿಸುವುದು ತಾಂತ್ರಿಕವಾಗಿ ಅಸಾಧ್ಯ:
ಕುರುಬ ಸಮುದಾಯವನ್ನ ಎಸ್ ಟಿ ಸೇರಿಸ ಬೇಕು ಅನ್ನೋ ವಿಚಾರದ ಬಗ್ಗೆ ಇದೇ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಇದು ತಾಂತ್ರಿಕವಾಗಿ ಆಗದ ಮಾತು ಎಂದು ಸ್ಪಷ್ಟವಾಗಿ ತಿಳಿಸಿದರು. ಕುರುಬ ಸಮುದಾಯವನ್ನ ಎಸ್ ಟಿ ಗೆ ಸೇರಿಸಬೇಕು ಎಂದು ಸುಮ್ಮನೆ ಹೇಳಿ ಜನರ ಹಾದಿ ತಪ್ಪಿಸೋದು ಬೇಡ ಎಂದು ಪರಿಷತ್ ಸದಸ್ಯ ಮಲ್ಕಾಪುರೆಗೆ ಹೇಳಿದ ಸಿದ್ದರಾಮಯ್ಯ, ಅಗಸರನ್ನ, ತಿಗಳರನ್ನ, ಸವಿತ ಸಮಾಜದವರನ್ನ ಎಸ್ಟಿಗೆ ಸೇರಿಸಿ ಅಂತಾ ಯಾಕ ಹೇಳಲ್ಲ. ಕುರುಬರನ್ನ ಮಾತ್ರ ಸೇರಿಸಿ ಅಂದ್ರೆ ಹೇಗೆ? ಕೇಂದ್ರ ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದರು.

ಪದೇ ಪದೇ ಕುರುಬ ಸಮಾಜವನ್ನು ಎಸ್ ಟಿ ಗ್ರೂಪ್ ಗೆ ಸೇರಿಸಿ ಅಂತಿದ್ರು, ಸಂವಿಧಾನ ಗೊತ್ತಿಲ್ದೆ ಮಾತನಾಡೋಕೆ ಹೋಗಬಾರದು. ಅದನ್ನು ಮೊದಲು ಅರಿತು ಮಾತನಾಡಬೇಕು. ನನಗೆ ಸಂವಿಧಾನ ಗೊತ್ತಿದೆ. ನಾನು ಸಾಮಾಜಿಕ ನ್ಯಾಯಕ್ಕೆ ಬದ್ದನಾಗಿದ್ದೇನೆ ಹೊರತು ಸಮಾಜದ ನ್ಯಾಯಕ್ಕೆ, ಅಧಿಕಾರಕ್ಕೆ ಹಿಂದೆ ಬಿದ್ದವನಲ್ಲ. ಎಸ್ಟಿಗೆ ಸೇರಿದರೆ ನಮಗೆ ಲಾಭವಿಲ್ಲ. ನಮ್ಮ ಜೊತೆ ಇತರೆ ಕೆಲ ಸಮುದಾಯಗಳನ್ನು ಎಸ್ಟಿಗೆ ಸೇರಿ ಅಂತಾ ಒತ್ತಾಯ ಮಾಡಬೇಕು. ಸಮುದಾಯ ಒಗ್ಗಟ್ಟಾಗಿರಬೇಕು ಎಂದು ಹೇಳಿದರು.

ಇನ್ನೊಂದು ಸಾರಿ ಮತ್ತೆ ನಾನೇ ಮುಖ್ಯಮಂತ್ರಿ ಆಗಿದ್ರೆ..?
ನಾನೇ ಮತ್ತೊಂದು ಬಾರಿ ಸಿಎಂ ಆಗಿದ್ರೆ ಮೀಸಲಾತಿ ಹೆಚ್ಚಿಸಲು ಚಿಂತನೆ ಮಾಡಿದ್ದೆ. ತಮಿಳುನಾಡು ಮಾದರಿಯಲ್ಲಿ ಮೀಸಲಾತಿ ಹೆಚ್ಚಿಸಲು ತೀರ್ಮಾನಿಸಿದ್ದೆ. ಹಿಂದುಳಿದ ವರ್ಗಕ್ಕೆ 70% ಮೀಸಲಾತಿ ನೀಡುತ್ತಿದ್ದೆ ಎಂದು ಸಿದ್ದರಾಮಯ್ಯ ಹೇಳಿದರು.

ನನ್ನನ್ನು ಕಾಂಗ್ರೆಸ್ ಗೆ ಸೇರಿಸಿದವರು ಪೀರನ್ ಮತ್ತು ಅಹಮ್ಮದ್ ಪಟೇಲ್
ಸಿದ್ದರಾಮಯ್ಯನನ್ನ ನಾನೇ ಕಾಂಗ್ರೆಸ್ ಗೆ ಕರೆದುಕೊಂಡು ಬಂದೆ ಅಂತಾ ಹೇಳ್ಕೊಂಡು ಓಡಾಡ್ತಾರೆ. ಸುಳ್ಳು ಸುಳ್ಳು ಹೇಳಬಾರದು ಅಂತಾ ಪರೋಕ್ಷವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ವಿರುದ್ಧ ವಾಗ್ಧಾಳಿ ನಡೆಸಿದ ಸಿದ್ದರಾಮಯ್ಯ, ನನ್ನನ್ನ ಪೀರನ್ ಹಾಗೂ ಅಹಮ್ಮದ್ ಪಟೇಲ್ ಕಾಂಗ್ರೆಸ್ ಸೇರಿಸಿದ್ದು. ಮತ್ತಾರೂ ಅಲ್ಲ ಎಂದು ಹೇಳಿದರು.

Trending News