ಸಮ್ಮಿಶ್ರ ಸರ್ಕಾರ ಉರುಳಿಸಲು ಯತ್ನಿಸುವವರು ನಾಶವಾಗುತ್ತಾರೆ: ವೀರಪ್ಪ ಮೊಯ್ಲಿ

 ಕಾಂಗ್ರೆಸ್ ಪಕ್ಷವನ್ನು ಬ್ರಿಟಿಷರಿಗೇ ಒಡೆಯಲು ಸಾಧ್ಯವಾಗಲಿಲ್ಲ. ಇನ್ನು, ಬಿಜೆಪಿಯಿಂದ ಅದು ಸಾಧ್ಯವೇ ಎಂದು ಎಂ.ವೀರಪ್ಪ ಮೊಯ್ಲಿ ಟೀಕಿಸಿದ್ದಾರೆ.

Updated: Sep 14, 2018 , 05:18 PM IST
ಸಮ್ಮಿಶ್ರ ಸರ್ಕಾರ ಉರುಳಿಸಲು ಯತ್ನಿಸುವವರು ನಾಶವಾಗುತ್ತಾರೆ: ವೀರಪ್ಪ ಮೊಯ್ಲಿ

ಹಾಸನ: ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸಲು ಯತ್ನಿಸುವವರಿಗೆ ಖಂಡಿತಾ ಒಳ್ಳೆಯದಾಗುವುದಿಲ್ಲ, ನಾಶವಾಗಿಹೋಗ್ತಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿ ಕಿಡಿಕಾರಿದ್ದಾರೆ.

ಹಾಸನದ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕ ವಿಸರ್ಜನಾ ವಿಧಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಉರುಳಲಿದೆ ಎಂದು ಹಲವರು ವದಂತಿ ಹಬ್ಬಿಸುತ್ತಿದ್ದಾರೆ. ಬಿಜೆಪಿಯವರು ವಾಮಾಚಾರ ಮತ್ತು ದುರಾಸೆಯಿಂದ  ಕೆಲಸ ಮಾಡುತ್ತಿದ್ದಾರೆ. ಇದರಿಂದ ಯಡಿಯೂರಪ್ಪಗೆ ಮತ್ತು ಬಿಜೆಪಿಗೆ ಕೆಟ್ಟ ಹೆಸರು ಬರುತ್ತದೆ. ಒಂದು ವೇಳೆ ವಾಮಾಚಾರದಿಂದ ಏನಾದರೂ ಸರ್ಕಾರ ಉರುಳಿಸಲು ಯತ್ನಿಸಿದರೆ ಅವರಿಗೆ ಶಾಪ ತಟ್ಟುತ್ತದೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ ಮೊಯ್ಲಿ, ಕಾಂಗ್ರೆಸ್ ಪಕ್ಷವನ್ನು ಬ್ರಿಟಿಷರಿಗೇ ಒಡೆಯಲು ಸಾಧ್ಯವಾಗಲಿಲ್ಲ. ಇನ್ನು, ಬಿಜೆಪಿಯಿಂದ ಅದು ಸಾಧ್ಯವೇ ಎಂದು ಟೀಕಿಸಿದರು.

ಮುಂದುವರೆದು ಮಾತಾನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೆಚ್​.ಡಿ.ಕುಮಾರಸ್ವಾಮಿಯವರೇ 5 ವರ್ಷ ಮುಖ್ಯಮಂತ್ರಿ ಆಗಿರಲಿ ಎಂದು ಹೇಳಿದ್ದಾರೆ. ಅದರಂತೆ 5 ವರ್ಷವೂ ಸರ್ಕಾರ ಸುಭಾದ್ರವಾಗಿರಲಿದೆ. ಇದನ್ನು ಉರುಳಿಸಲು ಯಾರಿಗೂ ಸಾಧ್ಯವಿಲ್ಲ. ಯಾರೋ ಒಂದಿಬ್ಬರು ಸರಕಾರ ಉರುಳುತ್ತೆ, ಉರುಳುತ್ತೆ ಅಂದ್ರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಎಂ.ವೀರಪ್ಪ ಮೊಯ್ಲಿ ಹೇಳಿದರು.