ಚುನಾವಣೆ ಕಸರತ್ತು; ನಾಳೆ ಸ್ಲಂ ಪ್ರದೇಶದಲ್ಲಿ ಬಿಎಸ್​ವೈ ವಾಸ್ತವ್ಯ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೊಳಗೇರಿ(ಸ್ಲಂ) ವಾಸ್ತವ್ಯಕ್ಕೆ ಮುಂದಾಗಿದ್ದಾರೆ.

Updated: Feb 9, 2018 , 03:24 PM IST
ಚುನಾವಣೆ ಕಸರತ್ತು; ನಾಳೆ ಸ್ಲಂ ಪ್ರದೇಶದಲ್ಲಿ ಬಿಎಸ್​ವೈ ವಾಸ್ತವ್ಯ

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲ ರಾಜಕೀಯ ಪಕ್ಷಗಳು ಮತದಾರರ ಗಮನಸೆಳೆಯಲು ವಿವಿಧ ರೀತಿಯ ಕಸರತ್ತುಗಳನ್ನು ನಡೆಸುತ್ತಿವೆ. ಇದರಿಂದ ಬಿಜೆಪಿಯೇನೂ ಹೊರತಾಗಿಲ್ಲ. 

ರಾಜ್ಯಾದ್ಯಂತ ಪರಿವರ್ತನಾ ಸಮಾವೇಶ ನಡೆಸಿ, ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿದ ನಂತರ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೊಳಗೇರಿ(ಸ್ಲಂ) ವಾಸ್ತವ್ಯಕ್ಕೆ ಮುಂದಾಗಿದ್ದಾರೆ. 

ದಿನೇಶ್ ಗುಂಡೂರಾವ್ ಪ್ರತಿನಿಧಿಸುವ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸ್ಲಂವೊಂದರಲ್ಲಿ ಯಡಿಯೂರಪ್ಪ ನಾಳೆ ವಾಸ್ತವ್ಯ ಹೂಡಲಿದ್ದು, ರಾಜ್ಯದ 2800 ಸ್ಲಂಗಳಲ್ಲಿ ಆಯಾ ಜಿಲ್ಲೆಯ ಬಿಜೆಪಿ ಮುಖಂಡರು ವಾಸ್ತವ್ಯ ಹೂಡಲಿದ್ದಾರೆ. ನಂತರ ಮಾರ್ಚ್ ತಿಂಗಳಿನಲ್ಲಿ ಸ್ಲಂ ನಿವಾಸಿಗಳ ಸಮಾವೇಶ ನಡೆಯಲಿದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ. 

ಚುನಾವಣೆಯಲ್ಲಿ ರಾಜ್ಯದ ಸ್ಲಂ ನಿವಾಸಿಗಳ ಮತ ಗಳಿಸುವ ಉದ್ದೇಶದಿಂದ ಬಿಜೆಪಿ ಈ ಪ್ಲಾನ್ ಮಾಡಿದ್ದು, ವಾಸ್ತವ್ಯದ ನಂತರ ರಾಜ್ಯದ ಸ್ಲಂ ಗಳ ಪರಿಸ್ಥಿತಿ ‌ಕುರಿತು ವರದಿಯೊಂದನ್ನು ಬಿಡುಗಡೆ ಮಾಡುವುದಾಗಿ ತಿಳಿದುಬಂದಿದೆ.