ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆ ಮತಎಣಿಕೆ ಆರಂಭ

ಬೆಂಗಳೂರು: ಜೂನ್ 8 ರಂದು ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತಎಣಿಕೆ ಕಾರ್ಯ ಇಂದು ಮೈಸೂರು, ಬೆಂಗಳೂರು ಮತ್ತು ಗುಲ್ಬರ್ಗಾ ಜಿಲ್ಲಾ ಕೇಂದ್ರಗಳಲ್ಲಿ ಆರಂಭವಾಗಿದೆ. 

ಚುನಾವಣಾಧಿಕಾರಿ ಹೇಮಲತಾ ಅವರ ನೇತೃತ್ವದಲ್ಲಿ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತಎಣಿಕೆ ಕಾರ್ಯ ಆರಂಭವಾಗಿದ್ದು, ಒಂದೇ ಹಾಲ್‌‌ನಲ್ಲಿ ಮೂರು ವಿಭಾಗಗಳನ್ನಾಗಿ ಮಾಡಿ ಮೂರು ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾತ್ರಿಯ ವೇಳೆಗೆ ಪ್ರಕಟವಾಗುವ ಸಾಧ್ಯತೆಯಿದೆ. ನೈರುತ್ಯ ಪದವೀಧರ ಕ್ಷೇತ್ರದ ಫಲಿತಾಂಶ ಮಧ್ಯರಾತ್ರಿ ಅಥವಾ ನಾಳೆ ಬೆಳಗಿನ ಜಾವ ಪ್ರಕಟವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳನ್ನೊಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಲಕ್ಷ್ಮಣ್, ಜೆಡಿಎಸ್ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ, ಬಿಜೆಪಿ ಅಭ್ಯರ್ಥಿಯಾಗಿ ನಿರಂಜನಮೂರ್ತಿ ಹಾಗೂ ಪಕ್ಷೇತರರಾಗಿ ಎ.ಹೆಚ್.ಗೋಪಾಲಕೃಷ್ಣ, ಡಿ.ಕೆ.ತುಳಸಪ್ಪ, ಡಾ.ಎಸ್.ಬಿ.ಎಂ. ಪ್ರಸನ್ನ, ಡಾ.ಮಹಾದೇವ, ಎಂ.ಎನ್ ರವಿಶಂಕರ್, ಪಿ.ಎ.ಶರತ್ ರಾಜ್ ಸ್ಪರ್ಧಿಸಿದ್ದಾರೆ.

ಕಲಬುರ್ಗಿಯಲ್ಲೂ ಮತ ಎಣಿಕೆ: ಈಶಾನ್ಯ ಪದವೀಧರ ಕ್ಷೇತ್ರದ ಮತ ಎಣಿಕೆ ಕಾರ್ಯ ಗುಲ್ಬರ್ಗಾ ವಿಶ್ವವಿದ್ಯಾಲಯಯದ ಗಣಿತ ವಿಭಾಗದಲ್ಲಿ ಆರಂಭಗೊಂಡಿದೆ. ಚುನಾವಣಾಧಿಕಾರಿ ಪಂಕಜಕುಮಾರ್ ಪಾಂಡೆ ನೇತೃತ್ವದಲ್ಲಿ ಮತಎಣಿಕೆ ಕಾರ್ಯ ಆರಂಭವಾಗಿದ್ದು, ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. 600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 

ಬಿಜೆಪಿಯ ಕೆ.ಬಿ.ಶ್ರೀನಿವಾಸ್, ಕಾಂಗ್ರೆಸ್‌‌ನ ಡಾ. ಚಂದ್ರಶೇಖರ ಬಿ. ಪಾಟೀಲ, ಜೆಡಿಎಸ್‌‌‌ನ ಎನ್.ಪ್ರತಾಪ್ ರೆಡ್ಡಿ, ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್, ಪಕ್ಷೇತರರಾದ ನಿಂಗಯ್ಯ ಮಠ, ಅಶೋಕ್ ಕುಮಾರ್ ಮಾನುರ್ಪೆ, ಡಾ. ರಜಾಕ್ ಉಸ್ತಾದ, ರಮೇಶ್ ಶಾಸ್ತ್ರಿ, ಡಾ. ರಾಹುಲ್ ಹಾಗೂ ಎಲ್.ಪಿ.ಸುಭಾಷ್ ಚಂದ್ರ ನಾಯಕ ಸೇರಿ ಒಟ್ಟು 10 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಇನ್ನು ಕ್ಷೇತ್ರದಾದ್ಯಂತ ಶೇ. 67.50 ರಷ್ಟು ಮತದಾನ ನಡೆದಿತ್ತು. 55,384 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ಬೆಂಗಳೂರಿನಲ್ಲೂ ಮತಎಣಿಕೆ : ಬೆಂಗಳೂರಿನ ಆರ್.ಸಿ. ಕಾಲೇಜಿನಲ್ಲಿ ಪದವೀಧರ ಕ್ಷೇತ್ರ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರಗಳ ಮತ ಎಣಿಕೆ ಆರಂಭಗೊಂಡಿದೆ. ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಿದೆ. ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ವೈ.ಎ.ನಾರಾಯಣಸ್ವಾಮಿ, ಜೆಡಿಎಸ್ ಅಭ್ಯರ್ಥಿಯಾಗಿ ರಮೇಶ್ ಬಾಬು, ಕಾಂಗ್ರೆಸ್ನಿಂದ ಎಂ.ರಾಮಪ್ಪ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರದಲ್ಲಿ 19,402 ಮತಗಳು ಚಲಾವಣೆಯಾಗಿವೆ. 

ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ರಾಮನಗರ ಜಿಲ್ಲಾ ವ್ಯಾಪ್ತಿಯನ್ನೊಳಗೊಂಡ ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅ. ದೇವೆಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಮೋಜಿಗೌಡ, ಜೆಡಿಎಸ್ ಅಭ್ಯರ್ಥಿಯಾಗಿ ಅಚ್ಚೆಗೌದ ಶಿವಣ್ಣ ಹಾಗೂ ಇತರ 19 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಈ ಕ್ಷೇತ್ರದಲ್ಲಿ ಒಟ್ಟು 65,354 ಮತದಾರರು ಮತದಾನ ಮಾಡಿದ್ದರು.

Section: 
English Title: 
Counting of votes for Teachers and Graduates constituency election begin
News Source: 
Home Title: 

ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆ ಮತಎಣಿಕೆ ಆರಂಭ

ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆ ಮತಎಣಿಕೆ ಆರಂಭ
Yes
Is Blog?: 
No
Facebook Instant Article: 
Yes
Mobile Title: 
ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆ ಮತಎಣಿಕೆ ಆರಂಭ