ಸಮ್ಮಿಶ್ರ ಸರ್ಕಾರ ಉಳಿಸಲು ದೇವರ ಮೊರೆ ಹೋದ ದೇವೇಗೌಡ್ರು

ಸಮ್ಮಿಶ್ರ ಸರ್ಕಾರ ಉಳಿಸಲು ದೇವರ ಅನುಗ್ರಹ, ಗುರುಗಳ ಅನುಗ್ರಹ ಪಡೆಯಲು ದೇವಸ್ಥಾನಕ್ಕೆ ಹೋಗಿದ್ದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ  ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ. 

Updated: Sep 14, 2018 , 03:41 PM IST
ಸಮ್ಮಿಶ್ರ ಸರ್ಕಾರ ಉಳಿಸಲು ದೇವರ ಮೊರೆ ಹೋದ ದೇವೇಗೌಡ್ರು

ಶಿವಮೊಗ್ಗ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉರುಳಲಿದೆ ಎಂದು ಹಲವು ವದಂತಿಗಳು ಹಬ್ಬಿದ ಬೆನ್ನಲ್ಲೇ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ದೇವಾಲಯಕ್ಕೆ ಭೇಟಿ ನೀಡಿದ್ದಾಗಿ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಉರುಳಿಸಲು ಕೆಲವು ದುಷ್ಟ ಶಕ್ತಿಗಳು ಪ್ರಯತ್ನಿಸುತ್ತಿವೆ. ಹಾಗಾಗಿ ಸಮ್ಮಿಶ್ರ ಸರ್ಕಾರ ಉಳಿಸಲು ದೇವರ ಅನುಗ್ರಹ, ಗುರುಗಳ ಅನುಗ್ರಹ ಪಡೆಯಲು ದೇವಸ್ಥಾನಕ್ಕೆ ಹೋಗಿದ್ದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ. 

ಮುಂದುವರೆದು ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ಸಿಎಂ ಕುಮಾರಸ್ವಾಮಿ ಅವರು ರೈತರ 48 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಸಹಕಾರ ಪಡೆದು ಸಾಲ ಮನ್ನಾ ಮಾಡಲಾಗಿದೆ. ಇಷ್ಟು ದೊಡ್ಡ ಮೊತ್ತದ ಸಾಲ ಮನ್ನಾ ಮಾಡಿದಾಗ ರಾಜ್ಯದ ಅಭಿವೃದ್ಧಿ ಕುಂಠಿತವಾಗಬಾರದು. ಅದನ್ನು ಸರಿದೂಗಿಸಿಕೊಂಡು ಹೋಗಬೇಕು ಎಂದು ಹೇಳಿದ ದೇವೇಗೌಡರು, ರಾಜ್ಯದಲ್ಲಿ 14 ಗಂಟೆಗಳ ಕಾಲ ಜನತಾ ದರ್ಶನ ಮಾಡಲು ಮುಖ್ಯಮಂತ್ರಿಯಿಂದ ಸಾಧ್ಯವಿಲ್ಲ. ಆ ಕೆಲಸವನ್ನು ಕುಮಾರಸ್ವಾಮಿಯವರು ಮಾಡುತ್ತಿದ್ದಾರೆ  ಎಂದು ದೇವೇಗೌಡರು ಹೇಳಿದರು.

ಕಳೆದ ಮೂರು ತಿಂಗಳಿಂದ ಸಮ್ಮಿಶ್ರ ಸರ್ಕಾರ ಬೀಳಲಿದೆ ಎಂದು ಹಲವು ಕಾಯುತ್ತಿದ್ದಾರೆ.  ಮೈತ್ರಿ ಸರ್ಕಾರದಲ್ಲಿ ಸಣ್ಣಪುಟ್ಟ ಗೊಂದಲವಿದೆ. ಆದರೆ ಅದನ್ನು ಅವರೇ ಬಗೆಹರಿಸಿಕೊಳ್ಳಲಿದ್ದಾರೆ. ಸದ್ಯದಲ್ಲೇ ಸರ್ಕಾರ ಬೀಳಲಿದೆ ಎಂದು ಮುಹೂರ್ತ ದಿನಾಂಕ ಫಿಕ್ಸ್ ಮಾಡಿರುವವರಿಗೆ ನಿರಾಸೆ ಕಾದಿದೆ ಎಂದು ಹೆಚ್.ಡಿ.ದೇವೇಗೌಡರು ಹೇಳಿದರು. 

By continuing to use the site, you agree to the use of cookies. You can find out more by clicking this link

Close