ನೀರು ಬಿಡುಗಡೆಗೆ ಸಿದ್ಧ ಎಂದು ಗೋವಾ ಮುಖ್ಯಮಂತ್ರಿ ನ್ಯಾಯ ಮಂಡಳಿಗೆ ಪತ್ರ ಬರೆಯಲಿ : ಸಿದ್ದರಾಮಯ್ಯ

ಡಿಸೆಂಬರ್ 15ರೊಳಗೆ ಮಹಾದಾಯಿ ನದಿಯಿಂದ ನೀರು ಹರಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದರು. 

Updated: Jan 2, 2018 , 10:27 AM IST
ನೀರು ಬಿಡುಗಡೆಗೆ ಸಿದ್ಧ ಎಂದು ಗೋವಾ ಮುಖ್ಯಮಂತ್ರಿ ನ್ಯಾಯ ಮಂಡಳಿಗೆ ಪತ್ರ ಬರೆಯಲಿ : ಸಿದ್ದರಾಮಯ್ಯ

ಬೆಂಗಳೂರು : ಮಹಾದಾಯಿ ವಿಚಾರದಲ್ಲಿ ತಮ್ಮೊಂದಿಗೆ ಮಾತುಕತೆ ನಡೆಸಲು ಇಷ್ಟ ಇಲ್ಲದಿದ್ದರೆ ನೀರು ಬಿಡುಗಡೆ ಮಾಡಲು ಸಿದ್ಧ ಎಂದು ಗೋವಾ ಮುಖ್ಯಮಂತ್ರಿಯವರು ನೇರವಾಗಿ ನ್ಯಾಯ ಮಂಡಳಿಗೇ ಪತ್ರ ಬೆರೆದು ತಿಳಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ ಡಾ. ಬಿ.ಕೆ. ರವಿ ಅವರ ಪುಸ್ತಕ ಬಿಡುಗಡೆ ಮಾಡಿದ ಬಳಿಕ ಮುಖ್ಯಮಂತ್ರಿಯವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. 

ಡಿಸೆಂಬರ್ 15ರೊಳಗೆ ಮಹಾದಾಯಿ ನದಿಯಿಂದ ನೀರು ಹರಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದರು. ಹುಬ್ಬಳ್ಳಿಯಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಗೋವಾ ಮುಖ್ಯಮಂತ್ರಿಯವರು ಬರೆದ ಪತ್ರವನ್ನೂ ಓದಿದರು. ಮರು ದಿನವೇ ಗೋವಾ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಮಾತುಕತೆಗೆ ಸಿದ್ಧ ಎಂದು ತಿಳಿಸಿದ್ದೇನೆ. ಆದರೆ ಅವರಿಂದ ಯಾವುದೇ ಉತ್ತರ ಬರಲಿಲ್ಲ. ತಾವು ಬರೆದ ಎರಡು ಪತ್ರಗಳಿಗೂ ಪ್ರತಿಕ್ರಿಯೆ ಸಿಕ್ಕಿಲ್ಲ. ಬದಲಿಗೆ ಆ ರಾಜ್ಯದ ಜಲ ಸಂಪನ್ಮೂಲ ಸಚಿವರು ಮುಖ್ಯಮಂತ್ರಿ ಪರಿಕ್ಕರ್ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಟಕವಾಡಿದ್ದಾರೆ ಎಂದಿದ್ದಾರೆ ಎಂದು ಟೀಕಿಸಿದರು.

ಬಿಜೆಪಿಯದ್ದು ಜನತೆಯ ದಾರಿ ತಪ್ಪಿಸುವ ಪ್ರಯತ್ನ 
ಹೋದ ಕಡೆ ಜನ ಪ್ರಶ್ನೆ ಮಾಡುತ್ತಾರೆ ಎಂಬ ಕಾರಣಕ್ಕೆ ಯಡಿಯೂರಪ್ಪ ಅವರು ಪರಿಕ್ಕರ್ ಅವರ ಬರೆದ ಓದಿಬಿಟ್ಟಿದ್ದಾರೆ. ಈ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮುಂದುವರೆದು ಮಾತನಾಡಿದ ಅವರು ಈ ಮಧ್ಯೆ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಅವರು ಪರಿಕ್ಕರ್ ಅವರು ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರವನ್ನೇ ರಾಜ್ಯ ಸರ್ಕಾರ ನ್ಯಾಯ ಮಂಡಳಿ ಮುಂದೆ ಇಡಲಿ ಎಂದು ಹೇಳಿಕೆ ಕೊಟ್ಟಿದ್ದಾರೆ. ಇದಕ್ಕಿಂತ ನಗೆಪಾಟಲಿನ ವಿಚಾರ ಮತ್ತೊಂದಿಲ್ಲ. ಶೆಟ್ಟರ್ ಅವರು ವಕೀಲರು. ಒಬ್ಬ ಮುಖ್ಯಮಂತ್ರಿ ಮತ್ತೊಬ್ಬ ಮುಖ್ಯಮಂತ್ರಿಗೆ ಪತ್ರ ಬರೆಯಬೇಕು. ಈ ವಿಚಾರವೂ ಶೆಟ್ಟರ್ ಅವರಿಗೆ ತಿಳಿದಿಲ್ಲ ಎಂದು ವ್ಯಂಗ್ಯವಾಡಿದರು.