ಮೊದಲ ಬಾರಿಗೆ ಸಾವಯವ ಕೃಷಿ ನೀತಿ ಘೋಷಣೆ ಮಾಡಿದ ರಾಜ್ಯ ನಮ್ಮದು- ಸಿದ್ದರಾಮಯ್ಯ

ಕೃಷಿಯ ವಾಸ್ತವಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಅದನ್ನು ಅಭಿವೃದ್ಧಿಪಡಿಸುವುದು, ಯುವಕರ ವಲಸೆ ತಪ್ಪಿಸುವುದು, ಕೃಷಿ ಅವಲಂಬನೆಯನ್ನು ಹೆಚ್ಚಿಸುವುದರ ಕಡೆಗೆ ಹೆಚ್ಚಿನ ಗಮನ ಹರಿಸುವ ಸನ್ನಿವೇಶ ಈಗ ನಿರ್ಮಾಣವಾಗಿದೆ.

Last Updated : Jan 19, 2018, 05:12 PM IST
ಮೊದಲ ಬಾರಿಗೆ ಸಾವಯವ ಕೃಷಿ ನೀತಿ ಘೋಷಣೆ ಮಾಡಿದ ರಾಜ್ಯ ನಮ್ಮದು- ಸಿದ್ದರಾಮಯ್ಯ title=
Pic: Twitter@CMofKarnataka

ಬೆಂಗಳೂರು : ಭಾರತ ಕೃಷಿ ಪ್ರಧಾನವಾದ ದೇಶ. ನಮ್ಮ ದೇಶದಲ್ಲಿ ವೈವಿಧ್ಯಮಯ ಹವಾಮಾನವಿದೆ. ಅದೇ ರೀತಿ ವಿವಿಧ ಬೆಳೆಗಳನ್ನೂ ನಾವು ಬೆಳೆಯುತ್ತೇವೆ. ಮೊದಲ ಬಾರಿಗೆ ಸಾವಯವ ಕೃಷಿ ನೀತಿ ಘೋಷಣೆ ಮಾಡಿದ ರಾಜ್ಯ ನಮ್ಮದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೃಷಿ ಇಲಾಖೆ ವತಿಯಿಂದ ಬೆಂಗಳೂರು ಅರಮನೆ ಆವರಣದಲ್ಲಿ ಆಯೋಜಿಸಿರುವ ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕೃಷಿಯ ವಾಸ್ತವಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಅದನ್ನು ಅಭಿವೃದ್ಧಿಪಡಿಸುವುದು, ಯುವಕರ ವಲಸೆ ತಪ್ಪಿಸುವುದು, ಕೃಷಿ ಅವಲಂಬನೆಯನ್ನು ಹೆಚ್ಚಿಸುವುದರ ಕಡೆಗೆ ಹೆಚ್ಚಿನ ಗಮನ ಹರಿಸುವ ಸನ್ನಿವೇಶ ಈಗ ನಿರ್ಮಾಣವಾಗಿದೆ. ಕರ್ನಾಟಕ ಪದೇ ಪದೇ ಬರಗಾಲಕ್ಕೆ ತುತ್ತಾಗುವ ರಾಜ್ಯವಾಗಿದೆ. ಕಳೆದ ಹದಿನಾರು ವರ್ಷದಲ್ಲಿ ಹದಿಮೂರು ವರ್ಷ ಬರಗಾಲ ಇತ್ತು. ಕಳೆದ ಮೂರು ವರ್ಷವಂತೂ ಭೀಕರ ಬರಗಾಲವನ್ನು ನಾವು ಎದುರಿಸಿದ್ದೇವೆ. ಇದರಿಂದ ಅಂತರ್ಜಲ ಮಟ್ಟವೂ ಕುಸಿದಿದೆ. ಹೀಗಾಗಿಯೇ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲು ನಾವು ನಿರ್ಧರಿಸಿದ್ದೇವೆ. 'ದೇಶದಲ್ಲೇ ಮೊದಲ ಬಾರಿಗೆ ಸಾವಯವ ಕೃಷಿ ನೀತಿ ಘೋಷಣೆ ಮಾಡಿದ ರಾಜ್ಯ ನಮ್ಮದು'. 2017ರಲ್ಲಿ ಪರಿಷ್ಕೃತ ನೀತಿಯನ್ನು ಜಾರಿಗೊಳಿಸಿದ್ದೇವೆ ಎಂದು ತಿಳಿಸಿದರು.

ಆಹಾರ ಪದಾರ್ಥಗಳ ರಫ್ತಿಗಾಗಿ ಕೃಷಿಯಲ್ಲಿ ಹಳೆಯ ಪದ್ಧತಿಯನ್ನು ಬಿಟ್ಟು ಹೊಸ ಪದ್ಧತಿಯೆಡೆಗೆ ಸಾಗುತ್ತಿದ್ದೇವೆ. ನಾವು ಸಣ್ಣವರಿದ್ದಾಗ ಕೃಷಿಯಲ್ಲಿ ರಾಸಾಯನಿಕಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿರಲಿಲ್ಲ. ಈಗ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಆದರೆ, ನಮ್ಮ ಪೂರ್ವಿಕರು ಹೆಚ್ಚಾಗಿ ಸಾವಯವ ಕೃಷಿಯನ್ನೇ ಮಾಡುತ್ತಿದ್ದರು. ಇಳುವರಿ ಹೆಚ್ಚಿಸಲು ಹೆಚ್ಚಾಗಿ ರಾಸಾಯನಿಕಗಳನ್ನು ಬಳಸಲಾಯಿತು. ಇದರಿಂದ ನಾವು ಆಹಾರದ ಭದ್ರತೆ ಸಾಧಿಸಿದ್ದೇವೆ. ಮಣ್ಣಿನ ಫಲವತ್ತತೆ, ಪರಿಸರ ಹಾಗೂ ಮನುಷ್ಯರ ಆರೋಗ್ಯವೂ ಇದರಿಂದ ಕೆಟ್ಟಿದೆ. ರಾಸಾಯನಿಕಗಳ ಬಳಕೆಯಿಂದ ಅನೇಕ ದುಷ್ಪರಿಣಾಮಗಳನ್ನು ನಾವು ಕಾಣುತ್ತಿದ್ದೇವೆ. ಹಾಗೆಯೇ ಅದರಿಂದ ಆದ ದುಷ್ಪರಿಣಾಮಗಳ ಕಡೆಗೂ ನಾವು ಗಮನಹರಿಸಬೇಕು. ಆ ಕುರಿತು ಗಂಭೀರವಾಗಿ ಆಲೋಚಿಸುವ ಸ್ಥಿತಿಗೆ ಬಂದಿದ್ದೇವೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. 

Trending News