ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ; ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿ
ಇಂದು ಸಂಜೆ 6 ಗಂಟೆಯಿಂದ 13ರ ಸಂಜೆ 6 ಗಂಟೆಯವರೆಗೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ 72 ಗಂಟೆಗಳ ನಿಷೇಧಾಜ್ಞೆ ಜಾರಿಯಾಗಲಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಮೇ 12ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಜತೆಗೆ ಇಂದು ಸಂಜೆ 6 ಗಂಟೆಯಿಂದ 13ರ ಸಂಜೆ 6 ಗಂಟೆಯವರೆಗೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ 72 ಗಂಟೆಗಳ ನಿಷೇಧಾಜ್ಞೆ ಜಾರಿಯಾಗಲಿದೆ.
ಕಳೆದ ಒಂದು ತಿಂಗಳಿಂದಲೂ ರಾಜ್ಯಾದ್ಯಂತ ವಿಧಾನಸಭೆ ಚುನಾವಣೆ ಘೋಷಣೆ ಆದಾಗಿನಿಂದಲೂ ಎಲ್ಲಾ ಕ್ಷೇತ್ರದಲ್ಲಿ ಚುನಾವಣಾ ಕಾವು ಏರಿತ್ತು. ಎಲ್ಲೆಡೆ ಸಮಾವೇಶ, ರೋಡ್ ಶೋ, ಬೈಕ್ ರಾರಯಲಿಗಳನ್ನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಕೈಗೊಂಡಿದ್ದವು. ತಂಡೋಪತಂಡವಾಗಿ ಕಾರ್ಯಕರ್ತರು ಕೂಡ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದರು. ಅಷ್ಟೇ ಏಕೆ, ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸಾಕಷ್ಟು ಬಹಿರನಗ ಸಮಾವೇಶಗಳನ್ನು ನಡೆಸಿದ್ದರು. ಆದರೆ, ಇಂದು ಸಂಜೆಯಿಂದ ಅದಕ್ಕೆಲ್ಲಾ ತೆರೆ ಬೀಳಲಿದೆ.
ನಿಷೇಧಾಜ್ಞೆ ಸಂದರ್ಭದಲ್ಲಿ ಯಾವುದಕ್ಕೆಲ್ಲಾ ನಿರ್ಬಂಧ?
* ಇಂದು ಸಂಜೆ 5 ಗಂಟೆಯ ಬಳಿಕ 48 ಗಂಟೆಗಳ ವರೆಗೆ ರಾಜಕೀಯ ನಾಯಕರು ತಮ್ಮ ಕ್ಷೇತ್ರವನ್ನು ಹೊರತುಪಡಿಸಿ ಇತರ ಕ್ಷೇತ್ರಗಳಲ್ಲಿ ಮತಯಾಚನೆ ಮಾಡುವಂತಿಲ್ಲ. ತಮ್ಮ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆಗೆ ಮಾತ್ರ ಅವಕಾಶ.
* ಶಸ್ತ್ರ, ಕುಡುಗೋಲು, ಖಡ್ಗ, ಚೂರಿ, ಬಂದೂಕು ಹಾಗೂ ಸ್ಫೋಟಕ ವಸ್ತುಗಳನ್ನು ಸಾಗಾಟ ಮಾಡಬಾರದು.
* ಜನರು ಗುಂಪುಗೂಡಿ ನಿಲ್ಲುವಂತಿಲ್ಲ. ಯಾವುದೇ ಗಲಾಟೆ ನಡೆಸುವಂತಿಲ್ಲ.
* ರಾಜಕೀಯ ಪಕ್ಷಗಳು, ಧಾರ್ಮಿಕ ಪಂಗಡಗಳು ಮೆರವಣಿಗೆ ಹಾಗೂ ಪ್ರತಿಭಟನೆ ಮಾಡಬಾರದು.
* ಮದುವೆ, ಧಾರ್ಮಿಕ ಆಚರಣೆ, ಶವಸಂಸ್ಕಾರಗಳಿಗೆ ಹಾಗೂ ಅನುಮತಿ ಪಡೆದ ಸಮಾರಂಭಗಳಿಗೆ ನಿಷೇಧಾಜ್ಞೆ ಅನ್ವಯಿಸುವುದಿಲ್ಲ.