)
Crime News: ಸುಡುವ ಕಾದ ಎಣ್ಣೆಯನ್ನು ಗಂಡನ ತಲೆ ಮೇಲೆ ಸುರಿದು ಹೆಂಡತಿಯೇ ಆತನ ಕೊ*ಲೆಗೆ ಯತ್ನಿಸಿರುವ ಘಟನೆ ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದ ರಾಮನಗರದಲ್ಲಿ ನಡೆದಿದೆ. ಪತಿ ಸುಭಾಷ ಪಾಟೀಲ್(55) ಎಂಬಾತನ ಮೇಲೆ ಕಾದ ಎಣ್ಣೆ ಸುರಿದು ವಿಕೃತಿ ಮೆರೆದಿರುವ ಮಹಿಳೆಯನ್ನು ರಾಮನಗರದ ನಿವಾಸಿ ವೈಶಾಲಿ ಪಾಟೀಲ್ (48) ಎಂದು ಗುರುತಿಸಲಾಗಿದೆ.
ಸುಡುವ ಕಾದ ಎಣ್ಣೆ ತಲೆಯ ಮೇಲೆ ಹಾಕಿದ್ದರಿಂದ ಪತಿ ಸುಭಾಷ ಪಾಟೀಲ್(55) ದೇಹ 60ರಷ್ಟು ಸುತ್ತು ಹೋಗಿದ್ದು ಆತನಿಗೆ ಬೆಳಗಾವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಕಾರಣ?
ವೈಶಾಲಿ ಪಾಟೀಲ್ ಗಂಡ ಸುಭಾಷ್ ಪಾಟೀಲನಿಗೆ ಬೇರೆ ಹೆಂಗಸಿನೊಂದಿಗೆ ಸಂಬಂಧವಿದೆ ಎಂದು ಸಂಶಯಪಟ್ಟು, ಇದೇ ಕಾರಣಕ್ಕೆ ಹಲವಾರು ಬಾರಿ ಮನೆಯಲ್ಲಿ ಇಬ್ಬರ ನಡುವೆ ಗಲಾಟೆಯೂ ಆಗುತ್ತಿತ್ತು. ಇದೀಗ, ಪರಸ್ತ್ರೀ ಸಹವಾಸದ ವಿಚಾರವಾಗಿಯೇ ಗಂಡ ಹೆಂಡತಿಯ ನಡುವಿನ ಜಗಳ ತಾರಕಕ್ಕೇರಿ ಪತಿಯ ತಲೆ ಮೇಲೆ ಕಾದ ಎಣ್ಣೆಯನ್ನು ಸುರಿಯಲಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಕಳೆದ ಇಪ್ಪತ್ತು ವರ್ಷಗಳಿಂದ ಗ್ಯಾಸ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿರುವ ಸುಭಾಷ್ ಪಾಟೀಲ್, ಎಂದಿನಂತೆ ಗ್ಯಾಸ್ ಸಪ್ಲೈ ಕೆಲಸ ಮುಗಿಸಿ ಮನೆಗೆ ಬಂದು ಕುಳಿತಿದ್ದಾನೆ. ಈ ಮಧ್ಯೆ, ಗಂಡ-ಹೆಂಡಿರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪತಿ ಬೇರೆ ಹೆಂಗಸಿನೊಂದಿಗೆ ಸಂಬಂಧ ಹೊಂದಿದ್ದಾನೆಂದು ಸಂಶಯ ವ್ಯಕ್ತಪಡಿಸಿ ಕಾದ ಎಣ್ಣೆಯನ್ನೇ ತಲೆಯ ಮೇಲೆ ಹಾಕಿದ್ದಾಳೆ.
ಗಾಯಗೊಂಡ ಸುಭಾಷನನ್ನು ಸದ್ಯ ಸ್ಥಳೀಯರ ಸಹಾಯದೊಂದಿಗೆ ಬಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಸುಭಾಷ್ ಪಾಟೀಲ ರವಾನಿಸಲಾಗಿದೆ. ಈ ಘಟನೆ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.