)
Ganesh Chaturthi: ಬಾಲ ಗಂಗಾಧರ ತಿಲಕರು ಆರಂಭಿಸಿದ ಗಣೇಶೋತ್ಸವ ಈಗ ದೇಶಾದ್ಯಂತ ಆಚರಿಸಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ಕಿತ್ತಾಡುವವರ ನಡುವೆ ಈ ಗ್ರಾಮ ಎಲ್ಲರಿಗೂ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರುತ್ತದೆ. ಈ ಗ್ರಾಮದ ಜನರು ಅಲ್ಲಾಬಕ್ಷನ ಕೈಯಲ್ಲಿ ಅರಳಿದ ಗಣೇಶ ಮೂರ್ತಿಗಳನ್ನಷ್ಟೇ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಅಯ್ಯೋ, ಅಲ್ಲಾಸಾಬೀಗೂ ಗಣೇಶೋತ್ಸವಕ್ಕೂ ಏನು ಸಂಭಂದ ಅಂತ ಯೋಚಿಸುತ್ತಿದ್ದೀರಾ... ಈ ಸುದ್ದಿಯನ್ನು ನೀವು ಒಮ್ಮೆ ಓದಲೇಬೇಕು...
ಹೌದು, ಹೀಗೆ ಕೈಯಲ್ಲಿ ಬ್ರಶ್ ಶ್ರದ್ಧೆಯಿಂದ ಗಣಪನ ಮೂರ್ತಿಯನ್ನು ತಯಾರಿಸುತ್ತಿರುವ ಮುಸ್ಲೀಂ ಬಾಂಧವರು. ಮುಸ್ಲೀಮರ ಮನೆಯಲ್ಲಿ ತಯಾರಿಸಿದ ಗಣಪನನ್ನೆ ಇಲ್ಲಿನ ಹಿಂದೂಗಳು ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಗ್ರಾಮಸ್ಥರ ಇಂತಹದೊಂದು ಹಿಂದೂ ಮುಸ್ಲೀಂ ಸಹೊದರತ್ವ ಕಂಡು ಬರೊದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿವಾಡಿ ಗ್ರಾಮದಲ್ಲಿ.
ಈ ವೀಡಿಯೋದಲ್ಲಿ ತೋರಿಸಿರುವಂತೆ ಕೈಯಲ್ಲಿ ಬ್ರಶ್ ಹಿಡಿದು ಗಣೇಶ ಮೂರ್ತಿಗೆ ರೂಪ ನೀಡುತ್ತಿರುವ ಇವರ ಹೆಸರು ಅಲ್ಲಾಬಕ್ಷ ಅಂತ. ಇವರ ತಾತ ಮುತ್ತಾತನ ಕಾಲದಿಂದಲೂ ಈ ಕುಟುಂಬ ಗಣೇಶ ಮೂರ್ತಿಗಳನ್ನ ತಯಾರಿಸುತ್ತ ಬಂದಿದೆ. ಮಾಂಜರಿವಾಡಿ ಸೇರಿದಂತೆ ಸುತ್ತಲು ಗ್ರಾಮಸ್ಥರು ಇವರ ಮನೆಯಲ್ಲಿ ತಯಾರಿಸಿದ ಗಣೇಶನನ್ನೆ ತಂದು ಪ್ರತಿಷ್ಠಾಪಿಸುತ್ತಾ ಬಂದಿದ್ದಾರೆ. ಇಡಿ ಮಾಂಜರಿವಾಡಿ ಗ್ರಾಮದಲ್ಲಿ ಹಿಂದು ಮುಸ್ಲಿಮ್ ಬಾಂಧವ್ಯ ಗಟ್ಟಿಗೊಂಡಿರುವುದಕ್ಕೆ ಇದೆ ಸಾಕ್ಷಿಯಾಗಿದೆ.
ಇನ್ನೂ ಹೀಗೆ ಕೈಯಲ್ಲಿ ಅಷ್ಟವಿನಾಯಕನನ್ನ ಅರಳಿಸುವ ಅಲ್ಲಾಭಕ್ಷ ಜಮಾದಾರ ವೃತ್ತಿಯಿಂದ ಶಿಕ್ಷಕರಾಗಿದ್ದು ತಮ್ಮ ಬಿಡುವಿನ ವೇಳೆಯಲ್ಲಿ ಗಣಪನನ್ನ ತಯಾರಿಸಿದರೇ ಅವರ ಕುಟುಂಬದ ಉಳಿದ ಸದಸ್ಯರು ಇನ್ನುಳಿದ ಕೆಲಸ ಮಾಡುತ್ತಾರೆ. ಹೀಗೆ ವಿವಿಧ ಆಕಾರಗಳಲ್ಲಿ ಸಿದ್ದಗೊಂಡ ಅಷ್ಟವಿನಾಯಕನನ್ನ ಹಿಂದೂ ಕುಟುಂಬಗಳು ಯಾವುದೇ ಭೇದ ಭಾವವಿಲ್ಲದೆ ಖರೀದಿಸುವದು ಮತ್ತು ಪೂಜಿಸುವದು ಕಂಡು ಸಹೋದರತ್ವದ ಸಂಕೋಲೆಯಾದ ಬಗ್ಗೆ ತಮಗೆ ಹೆಮ್ಮೆ ಅನ್ನಿಸುತ್ತೆ ಅನ್ನುತ್ತಾರೆ ಅಲ್ಲಾಭಕ್ಷ ಜಮಾದಾರ.
ಇನ್ನು ಕಳೆದ 80 ವರ್ಷಗಳಿಂದ ಜಮಾದಾರ ಕುಟುಂಬ ನೈಸರ್ಗಿಕ ಗಣೇಶನನ್ನ ತಯಾರಿಸುತ್ತಿದ್ದು ಪರಿಸರಕ್ಕೆ ಪೂರಕವಾದ ಗಣೇಶನ ಮೂರ್ತಿಗಳು ಅಲ್ಲಾಭಕ್ಷ ಜಮಾದಾರರ ಕೈಯಲ್ಲಿ ಅರಳುತ್ತಿದ್ದು ಈ ಬಗ್ಗೆ ಅಲ್ಲಿನ ಗ್ರಾಮಸ್ಥರು ಕೂಡ ಹೆಮ್ಮೆ ಪಡುತ್ತಾರೆ. ಅಷ್ಟೆ ಅಲ್ಲದೇ ಗಣೇಶೋತ್ಸವದ ಮುನ್ನಾ ದಿನವೇ ಮೂರ್ತಿಗಳನ್ನ ನೊಂದಾಯಿಸಿ ಹೋಗುವ ಪರಿಪಾಟವೂ ಗ್ರಾಮದಲ್ಲಿ ಇರುವದರಿಂದ ಅಲ್ಲಾಭಕ್ಷ ಜಮಾದಾರ ಭಕ್ತರ ಬೇಡಿಕೆ ಆಧರಿಸಿ ಮೂರ್ತಿಗಳನ್ನ ತಯಾರಿಸುತ್ತಾರೆ. ಇನ್ನು ಈ ಗ್ರಾಮದ ಜನರಷ್ಟೇ ಅಲ್ಲಾ ಸುತ್ತಮುತ್ತಲಿನ ಗ್ರಾಮದ ಜನರು ಕೂಡಾ ಅಲ್ಲಾಭಕ್ಷ ಅವರ ಮನೆಯಿಂದಲೆ ಗಣೇಶ ಮೂರ್ತಿಗಳನ್ನ ತಮ್ಮ ಗ್ರಾಮಗಳಿಗೆ ಒಯ್ಯುತ್ತಾರೆ. ಇನ್ನು ಈ ಹಿಂದು ಮುಸ್ಲಿಂ ಭಾವೈಕ್ಯತೆ ಕಂಡು ತಮ್ಮ ಗ್ರಾಮದ ಬಗ್ಗೆ ಹೆಮ್ಮೆ ಅನ್ನಿಸುತ್ತದೆ ಅಂತಾರೆ ಇಲ್ಲಿಯ ಸ್ಥಳೀಯರು.
ಜಾತಿ ಹೆಸರಲ್ಲಿ ಜಗಳ ಆಡೋರಿಗೆ ಚಿಕ್ಕೋಡೀ ತಾಲ್ಲೂಕಿನ ಮಾಂಜರಿವಾಡಿ ಗ್ರಾಮ ಆದರ್ಶವಾಗಿ ನಿಲ್ಲುತ್ತೆ. ಈ ಗ್ರಾಮದಲ್ಲಿ ಇರುವಂತ ಸೌಹಾರ್ದತೆ ಮತ್ತು ಸಹೋದರತ್ವ ಎಲ್ಲೆಡೆ ಅರಳಲಿ ಅನ್ನೋದೆ ನಮ್ಮ ಆಶಯ.