Labour News: ಯುವಕರಿಗೆ ಉದ್ಯೋಗವನ್ನೂ ನೀಡದೆ, ಇರುವ ಸ್ಥಳೀಯ ನೌಕರರಿಗೆ ಕನಿಷ್ಠ ವೇತನವನ್ನೂ ಪಾವತಿಸದೆ, ಭೂಮಿ ನೀಡಿದ್ರೆ ಉದ್ಯೋಗ ಕೊಡ್ತಿವಿ ಅಂತ ನೀಡಿದ್ದ ಭರವಸೆಯನ್ನೂ ಈಡೇರಿಸದ ಕಾರ್ಖಾನೆ ಭೂಮಿ ಕೊಟ್ಟ ರೈತರಿಗೆ ಶಾಕ್ ನೀಡಿರುವ ಘಟನೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ತವರು ಜಿಲ್ಲೆಯಲ್ಲಿ ನಡೆದಿದೆ.
ವಿಜಯನಗರದ ಹೊಸಪೇಟೆ ತಾಲೂಕಿನ ಹಾರುವನಹಳ್ಳಿ ಗ್ರಾಮದಲ್ಲಿರುವ ಸಾಯಿ ವಿಜಯ ಪ್ರಗತಿ ಸ್ಟೀಲ್ ಉದ್ಯೊಗ ಪ್ರೈ.ಲಿ.ಕಂಪನಿ, ಸ್ಥಳೀಯ 28 ಕಾರ್ಮಿಕರನ್ನ ಕೆಲಸದಿಂದ ವಜಾ ಮಾಡಿದ್ದು, ಇದೀಗ ಈ ಸ್ಥಾನಕ್ಕೆ ಹೊರ ರಾಜ್ಯದ ಬಿಹಾರದಿಂದ ಕಾರ್ಮಿಕರನ್ನ ಕರೆ ತಂದಿದೆ. ಸ್ಥಳೀಯ ಉದ್ಯೋಗಿಗಳನ್ನ ಕೆಲಸದಿಂದ ವಜಾ ಗೊಳಿಸಿರುವ ಪರಿಣಾಮ, ಉದ್ಯೋಗದ ಆಶಾಭಾವನೆಯಿಂದ ಕಾರ್ಖಾನೆ ನಿರ್ಮಾಣಕ್ಕೆ ಭೂಮಿ ಕೊಟ್ಟ ರೈತರಿಗೆ ಆಘಾತವಾಗಿದೆ.
ಕನಿಷ್ಠ ವೇತನವೂ ಇಲ್ಲ:
ಕಾರ್ಮಿಕ ಕಾಯ್ದೆ ನಿಯಮವನ್ನೂ ಗಾಳಿಗೆ ತೂರಿರುವ ಸಾಯಿ ವಿಜಯ ಪ್ರಗತಿ ಸ್ಟೀಲ್ ಉದ್ಯೊಗ ಪ್ರೈ.ಲಿ.ಕಂಪನಿ, ಕಳೆದ 10-11 ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನೂ ನೀಡುತ್ತಿಲ್ಲ. ಇಲ್ಲಿ ನೌಕರರಿಗೆ ತಿಂಗಳಿಗೆ ಕೇವಲ 8-9 ಸಾವಿರ ರೂ. ಮಾತ್ರ ವೇತನ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಾಯಿ ವಿಜಯ ಪ್ರಗತಿ ಸ್ಟೀಲ್ ಉದ್ಯೊಗ ಪ್ರೈ.ಲಿ.ಕಂಪನಿಯಲ್ಲಿ ಈ ಸಂಬಂಧ ಯಾರು ಪ್ರಶ್ನೆ ಮಾಡುತ್ತಾರೋ ಅಂತವರನ್ನ ಟಾರ್ಗೆಟ್ ಮಾಡಿ ಕೆಲಸದಿಂದ ವಜಾಗೊಳಿಸುವ ಶಿಕ್ಷೆ ನೀಡಲಾಗುತ್ತಿದೆ. ಕಂಪನಿಯ ನಡೆ ವಿರುದ್ಧ ಅಕ್ರೋಶ ಹೊರಹಾಕಿರುವ ರೈತರು ಕೂಡಲೇ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಇಲ್ಲಾಂದ್ರೆ ಕಾರ್ಖಾನೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ರೈತರ ಜಮೀನಿನ ಸನಿಹದಲ್ಲೇ ಕಾರ್ಖಾನೆ ಇರುವುದರಿಂದ ಕಾರ್ಖಾನೆಯಿಂದ ಹೊರಬರುವ ಧೂಳಿನಿಂದಾಗಿ ಅಕ್ಕ-ಪಕ್ಕದ ರೈತರ ಜಮೀನುಗಳಿಲ್ಲಿರುವ ಬೆಳೆಗಳಿಗ ಹಾನಿಯಾಗುತ್ತಿದೆ. ಆದರೂ, ಕೆಲಸ ಸಿಗುವ ಭರವಸೆಯಿಂದ ಈ ಕಾರ್ಖಾನೆಗೆ ಭೂಮಿ ನೀಡಲಾಗಿತ್ತು. ಆದರೆ, ಇತ್ತ ಸ್ಥಳೀಯರಿಗೆ ಕೆಲಸವನ್ನೂ ನೀಡದೆ, ಕನಿಷ್ಠ ವೇತನವನ್ನೂ ಪಾವತಿಸದೆ ಕಂಪನಿ ಭಾರೀ ಅನ್ಯಾಯ ಎಸಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಗ್ರಾ.ಪಂ ಸದಸ್ಯ ಕೃಷ್ಣಮೂರ್ತಿ ಎಚ್ಚರಿಸಿದ್ದಾರೆ.









