ಇತ್ತೀಚಿಗೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗಳು ಅಂದ್ರೆ ಯಮನ ರೂಪದಲ್ಲಿ ಜನರ ಕಣ್ಣಿಗೆ ಬಿಂಬಿತವಾಗ್ತಿವೆ. ದಿನಕ್ಕೊಂದು ಅಪಘಾತ, ತಿಂಗಳಿಗೆರಡು ಸಾವಿಗೆ ಕಾರಣ ಆಗ್ತಿವೆ. ಸಚಿವರು ಎಷ್ಟೇ ಪಾಸಿಟಿವ್ ಕೆಲಸ ಮಾಡಿದ್ರೂ, ಈ ಬಸ್ ಗಳ ಚಾಲಕರು ಮಾತ್ರ ನಾವು ನಡೆದಿದ್ದೇ ದಾರಿ ಅನ್ನೋ ತರ ಮೈಮರೆತಿದ್ದಾರೆ. ಇದೇ ಕಾರಣಕ್ಕೆ ಇದೀಗ ಎಲೆಕ್ಟ್ರಿಕ್ ಬಸ್ ಗಳ ಚಾಲಕರ ನಡೆಯನ್ನು ಅಧಿಕಾರಿಗಳು ಭೇದಿಸಲು ಹೊರಟಿದ್ದಾರೆ.
ಹೌದು, ದಿನನಿತ್ಯ ಸಿಲಿಕಾನ್ ಸಿಟಿಯಲ್ಲಿ ಲಕ್ಷಾಂತರ ಪ್ರಯಾಣಿಕರು ಬಿಎಂಟಿಸಿಯಲ್ಲಿ ಪ್ರಯಾಣಿಸುತ್ತಾರೆ. ಆದರೆ ಈಗಂತೂ ಪ್ರಯಾಣಿಕರ ಜೀವಕ್ಕೆ ಗ್ಯಾರಂಟಿ ಇಲ್ಲ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಬಸ್ಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗಳ ಸರಣಿ ಅಪಘಾತಗಳಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದರ ನಡುವೆ ಕೆಲ ಪ್ರಯಾಣಿಕರು ಬಸ್ಸಿನಲ್ಲಿ ಸಂಚಾರ ಮಾಡೋದಕ್ಕೆ ಆತಂಕ ಪಡುವಂತ ಸ್ಥಿತಿ ನಿರ್ಮಾಣಗೊಂಡಿದೆ.
ಇದನ್ನೂ ಓದಿ : ನವೆಂಬರ್ 1 ರಿಂದ 100 ದಿನಗಳ ಕಾಲ ‘ಎ’ ಖಾತಾ ಅಭಿಯಾನ: ಡಿಸಿಎಂ ಡಿಕೆ ಶಿವಕುಮಾರ್
ಅದರಲ್ಲೂ ಎಲೆಕ್ಟ್ರಿಕ್ ಬಸ್ಗಳಲ್ಲಿ ಪ್ರಯಾಣಿಸುವವರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುತ್ತಿದ್ದಾರೆ. ಕೇವಲ ಬಸ್ನಲ್ಲಿ ಪ್ರಯಾಣಿಸುವವರಷ್ಟೇ ಅಲ್ಲದೇ, ಪಾದಚಾರಿಗಳು ಕೂಡ ಭಯದಿಂದ ಓಡಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಇದಕ್ಕೆ ಮುಖ್ಯ ಕಾರಣವೇ ಬಿಎಂಟಿಸಿ ಚಾಲಕರ ಅತಿವೇಗದ ಚಾಲನೆ. ಬೆಂಗಳೂರಿಗರ ಪಾಲಿಗೆ ಬಿಎಂಟಿಸಿ ಬಸ್ಗಳು ಯಮನಂತೆ ಕಾಣುತ್ತಿದೆ. ಒಂದು ತಿಂಗಳ ಅಂತರದಲ್ಲಿ ಬಿಎಂಟಿಸಿ ಅಪಘಾತದಲ್ಲಿ ಏಳೆಂಟು ಮಂದಿ ಜೀವಬಿಟ್ಟಿದ್ದಾರೆ.
ಇದೆಲ್ಲಾ ಮನಗಂಡ ಬಿಎಂಟಿಸಿ ಅಧಿಕಾರಿಗಳು ಎಲೆಕ್ಟ್ರಿಕ್ ಬಸ್ ಚಾಲಕರ ನಡೆಯನ್ನ ಭೇದಿಸಲು ಮುಂದಾದಾಗ ಅಧಿಕಾರಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಗುತ್ತಿಗೆ ಆಧಾರಲ್ಲಿರೋ ಈ ಎಲೆಕ್ಟ್ರಿಕ್ ಬಸ್ ಚಾಲಕರನ್ನ ಹೇಳೋರು ಕೇಳೋರು ಯಾರು ಇಲ್ಲ ಅನ್ನೋ ಭೀತಿರಹಿತ ಮನಸ್ಥಿತಿ ಇದ್ದು, ಕೆಲಸಕ್ಕೆ ಬರುವಾಗ ಮದ್ಯಪಾನ ಮಾಡಿ ಬರೋದು ಸಾಬೀತಾಗಿದೆ. ಹೀಗಾಗಿ ಅಂತಹ ಚಾಲಕರನ್ನು ಕೂಡಲೇ ಗುತ್ತಿಗೆ ಪಡೆದ ಕಂಪನಿಗೆ ನೋಟೀಸ್ ನೀಡಿ, ಮದ್ಯ ಸೇವಿಸಿ ಕೆಲಸಕ್ಕೆ ಬಂದ ಚಾಲಕನ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ : ಬಿ ಖಾತೆಯಿಂದ ಎ-ಖಾತೆ ನೀಡಲು ಆನ್‌ಲೈನ್ ವೈವಸ್ಥೆಗೆ ಚಾಲನೆ
ಒಟ್ಟಾರೆ... ಶಕ್ತಿ ಯೋಜನೆಯ ಯಶಸ್ಸು ಇಂತಹ ಎಲೆಕ್ಟ್ರಿಕ್ ಬಸ್ ಚಾಲಕರಿಂದಲೇ ಹಾಳಾಗುತ್ತಿದೆ ಎಂದು ಬಿಎಂಟಿಸಿ ಅರಿತುಕೊಂಡಿದೆ. ಎಣ್ಣೆ ಹೊಡೆದು ಕೆಲಸ ಮಾಡೋ ಚಾಲಕರಿಗೆ ತಕ್ಕ ಶಾಸ್ತಿ ನೀಡಿ ಅಮಾನತು ಭಾಗ್ಯ ಕಲ್ಪಿಸಿ ಗೇಟ್ ಪಾಸ್ ಕೊಡ್ತಿದೆ.









