YouTuber Sameer MD : ಧರ್ಮಸ್ಥಳ ಕ್ಷೇತ್ರದ ಬಗ್ಗೆ ತಪ್ಪು ಮಾಹಿತಿ ನೀಡಿ ಸಾರ್ವಜನಿಕರನ್ನು ಪ್ರಚೋದಿಸಿದ್ದಾರೆ ಎಂಬ ಆರೋಪ ಹಿನ್ನೆಲೆ ಯೂಟ್ಯೂಬರ್ ಎಂ. ಡಿ. ಸಮೀರ್ ಅವರ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಇಂದು ಬೆಳ್ತಂಗಡಿ ಪೊಲೀಸರು ಸಮೀರ್ ಮನೆ ಶೋಧ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ದಕ್ಷಿಣ ಕನ್ನಡ : ಧರ್ಮಸ್ಥಳ ವಿಚಾರವಾಗಿ AI ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದ ಯೂಟ್ಯೂಬರ್ ಎಂ ಡಿ ಸಮೀರ್ ಗೆ ಖಾಕಿ ಶಾಕ್ ನೀಡಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹುಲ್ಲಹಳ್ಳಿ ಸಮೀಪದ ರಾಯಲ್ ರೆಸಿಡೆನ್ಸಿ ಬಡಾವಣೆಯಲ್ಲಿನ ಸಮೀರ್ ಬಾಡಿಗೆ ಮನೆಯಲ್ಲಿ ಇಡೀ ದಿನ ಸ್ಥಳ ಮಹಜರ್ ನಡೆಸಿದ್ದಾರೆ.
ಬೆಳ್ತಂಗಡಿ ಸಿವಿಲ್ ನ್ಯಾಯಾಲಯದಿಂದ ಸರ್ಚ್ ವಾರಂಟ್ ತಂದಿದ್ದ ಬೆಳ್ತಂಗಡಿ ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಪಕ್ಕಾ ತಯಾರಿ ಮಾಡಿಕೊಂಡು ಕಾರ್ಯಾಚರಣೆಗೆ ಇಳಿದಿದ್ದರು. ಐವರು ಸಿಬ್ಬಂದಿ ಇಬ್ಬರು ಪಂಚರ ಜೊತೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪೊಲೀಸರು ಸಮೀರ್ ಮನೆ ಬಡಿದಿದ್ದಾರೆ. ಯಾವುದೇ ರಿಪ್ಲೆ ಇಲ್ಲದಿದ್ದಾಗ ಸಮೀರ್ ಗೆ ಕರೆ ಮಾಡಿ ಕೋರ್ಟ್ ಸರ್ಚ್ ವಾರಂಟ್ ಇದ್ದು, ಸಹಕಾರಕ್ಕೆ ಸೂಚಿಸಿದ್ದಾರೆ.
ಇನ್ನೂ ಕೆಲ ಹೊತ್ತಿನಲ್ಲಿಯೇ ಹಾಜರಾದ ಸಮೀರ್ ಮನೆಯಲ್ಲಿ ಪೊಲೀಸರು ಮತ್ತು ಸೋಕೋ ಟೀಮ್ ಸ್ಪಾಟ್ ಮಹಜರ್ ನಡೆಸಿದ್ದಾರೆ. ಧರ್ಮಸ್ಥಳ AI ಆಡಿಯೋ ಕ್ರಿಯೇಟ್ ಮಾಡಿದ ಸ್ಥಳ. ಬಳಸಿದ ಎಲೆಕ್ಟ್ರಾನಿಕ್ ಡಿವೈಸಸ್, ಆ್ಯಪ್ಗಳು, ಲ್ಯಾಪ್ಟಾಪ್, ಕಂಪ್ಯೂಟರ್, ಹಾರ್ಡ್ ಡಿಸ್ಕ್, ಮೊಬೈಲ್ ಸೇರಿದಂತೆ ಇನ್ನೂ ಅನೇಕ ಸಾಕ್ಷ್ಯಗಳನ್ನು ಸೋಕೋ ಪತ್ತೆ ಮಾಡಿದ್ದು, ಪಂಚರ ಸಮ್ಮುಖದಲ್ಲಿ ಸೀಜ್ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಧರ್ಮಸ್ಥಳ ಸಂಬಂಧ AI ವಿಡಿಯೋ ಸೃಷ್ಟಿಗೆ ಮಾಹಿತಿ ನೀಡಿ ಸಹಕರಿಸಿದ ವ್ಯಕ್ತಿಗಳು, ಅವರು ನೀಡಿದ ವಿಡಿಯೋ, ಆಡಿಯೋ, ಪೋಟೋ ಸೇರಿದಂತೆ ದಾಖಲೆಗಳ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಇದೆಲ್ಲದಕ್ಕೂ ಮುಖ್ಯವಾಗಿ ಎಲೆಕ್ಟ್ರಾನಿಕ್ ಉಪಕರಣಗಳ ಖರೀದಿ, ವಿಡಿಯೋ ಸೃಷ್ಟಿಗೆ ಕೆಲಸ ಮಾಡಿದವರ ಸಂಬಳದ ಮೂಲ ಸೇರಿದಂತೆ ಅಕ್ಕಪಕ್ಕದ ಮನೆಯವರ ಬಳಿಯು ಪೊಲೀಸರು ಯೂಟ್ಯೂಬರ್ ಸಮೀರ್ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಸಾಲದಕ್ಕೆ ವ್ಯಕ್ತಿಯೊಬ್ಬನನ್ನು ಕರೆತಂದು ವಿಚಾರಣೆ ಕೂಡ ನಡೆಸಿದ್ದಾರೆ.
ಇದನ್ನೂ ಓದಿ:ಸೆಪ್ಟಂಬರ್ 5 ರಂದು ಶಾಲೆಗಳಿಗೆ ರಜೆ ಘೋಷಣೆ
ಒಟ್ನಲ್ಲಿ ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಧರ್ಮಸ್ಥಳ AI ವಿಡಿಯೋ ಬುಡಕ್ಕೆ ಬೆಳ್ತಂಗಡಿ ಪೊಲೀಸರು ಕೈ ಹಾಕಿದ್ದು, ಇವತ್ತಿನ ಸ್ಥಳ ಮಹಜರ್ ವೇಳೆ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ತನಿಖೆ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.