)
8th Pay Commission: 8ನೇ ವೇತನ ಆಯೋಗದ ಶಿಫಾರಸುಗಳು ಜಾರಿಯಾಗುವ ವಿಷಯದಲ್ಲಿ ಬೇರೆಲ್ಲಾ ಸರ್ಕಾರಿ ನೌಕರರಿಗಿಂತ ಭಾರತೀಯ ರೈಲ್ವೆ ನೌಕರರ ವೇತನ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎನ್ನುವ ಮಾಹಿತಿಗಳು ಈಗ ಕೇಂದ್ರ ಸರ್ಕಾರದ ಕಡೆಯಿಂದ ದೊರೆಯುತ್ತಿವೆ. ಏಕೆಂದರೆ 8ನೇ ವೇತನ ಆಯೋಗದ ಶಿಫಾರಸುಗಳು ಜಾರಿಯಾದ ಮೇಲೆ ರೈಲ್ವೆ ವೆಚ್ಚದಲ್ಲಿ ಗಮನಾರ್ಹ ಬದಲಾವಣೆಗಳಾಗಬಹುದು. ರೈಲ್ವೆ ಇಲಾಖೆಯು ತನ್ನ ಹಣಕಾಸು ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಯಾವ್ಯಾವ ವಿಷಯದಲ್ಲಿ ವೆಚ್ಚ ಕಮ್ಮಿ ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡುವುದು ಹಾಗು ಯಾವ್ಯಾವ ವಿಷಯದಲ್ಲಿ ಉಳಿತಾಯ ಮಾಡಲು ಸಾಧ್ಯವೋ ಅದೆಲ್ಲದರಲ್ಲಿ ಉಳಿತಾಯ ಮಾಡಲು ಮುಂದಾಗುತ್ತಿದೆ. ಇದರ ಹೆಚ್ಚಿನ ಲಾಭ ರೈಲ್ವೆ ನೌಕರರಿಗೆ ಸಂಬಳ ಹೆಚ್ಚಳದ ಮೂಲಕ ಸಿಗಲಿದೆ ಎಂದು ತಿಳಿದುಬಂದಿದೆ.
ವರದಿ ಸಲ್ಲಿಸಲು ಬೇಕು 18 ತಿಂಗಳು!
2025ರ ಜನವರಿಯಲ್ಲಿ 8ನೇ ವೇತನ ಆಯೋಗವನ್ನು ರಚನೆ ಮಾಡಲಾಗಿದೆ. ಆದರೆ ಈ ಆಯೋಗ ವರದಿಯನ್ನು ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು 18 ತಿಂಗಳುಗಳ ಕಾಲಾವಕಾಶ ನೀಡಲಾಗಿದೆ. ಈ ನಡುವೆ 2026ರವೇಳೆಗೆ ರೈಲ್ವೆ ಇಲಾಖೆಯು ತನ್ನ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು ಎಂಬ ಕಾಲಮಿತಿಯನ್ನು ಹಾಕಿಕೊಂಡಿದೆ. 7ನೇ ವೇತನ ಆಯೋಗದ ಶಿಫಾರಸುಗಳಿಂದ ರೈಲ್ವೆ ಇಲಾಖೆ ಪಾಠ ಕಲಿತಿದೆ. 2016ರಲ್ಲಿ ಏಳನೇ ವೇತನ ಆಯೋಗ ಜಾರಿಗೆ ಬಂದಾಗ ನೌಕರರ ಸಂಬಳವು ಶೇಕಡಾ 14 ರಿಂದ 26ರಷ್ಟು ಹೆಚ್ಚಾಗಿತ್ತು. ಇದರಿಂದ ನೌಕರರ ಸಂಬಳ ಮತ್ತು ಪಿಂಚಣಿ ನೀಡಲು ರೈಲ್ವೆ ಇಲಾಖೆ ವರ್ಷಕ್ಕೆ ಸುಮಾರು 22 ಸಾವಿರ ಕೋಟಿ ರೂಪಾಯಿ ಹೊರೆ ಹೊರಬೇಕಾಯಿತು. ಈಗ 8ನೇ ವೇತನ ಆಯೋಗದ ಶಿಫಾರಸು ಜಾರಿಯಾದರೆ ಸುಮಾರು 30 ಸಾವಿರ ಕೋಟಿ ರೂಪಾಯಿ ಹೊರೆಯಾಗಬಹುದು.
ಎಚ್ಚೆತ್ತುಕೊಂಡಿರುವ ರೈಲ್ವೆ!
8ನೇ ವೇತನ ಆಯೋಗದ ಶಿಫಾರಸು ಜಾರಿಯಾದರೆ ರೈಲ್ವೆ ಇಲಾಖೆ ತನ್ನ ನೌಕರರಿಗೆ ಸಂಬಳ ಮತ್ತು ಪಿಂಚಣಿ ನೀಡಲು ಬೇಕಾಗುವ ಹೆಚ್ಚುವರಿ ಹಣದ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ ಎನ್ನಲಾಗುತ್ತಿದೆ. ಹೆಚ್ಚುವರಿ ಹೊರೆಗಳನ್ನು ಸಮರ್ಥವಾಗಿ ನಿರ್ವಹಿಸಲು ಈಗಾಗಲೇ ಇಲಾಖೆಯ ಮುಂದೆ ಸಮಗ್ರವಾದ ಯೋಜನೆ ಸಿದ್ಧವಿದೆ ಎಂದು ಕೂಡ ತಿಳಿದುಬರುತ್ತಿದೆ. ಆಂತರಿಕ ಸಂಪನ್ಮೂಲಗಳು, ಕಾರ್ಯಾಚರಣೆಯ ದಕ್ಷತೆ ಮತ್ತು ಸರಕು ಸಾಗಣೆ ಆದಾಯವನ್ನು ಹೆಚ್ಚಿಸುವುದು ಸದ್ಯದ ರೈಲ್ವೆ ಇಲಾಖೆಯ ಗುರಿಗಳಂತೆ.
ಟಾರ್ಗೆಟ್ ಜಾಸ್ತಿ ಮಾಡಿಕೊಂಡ ಇಲಾಖೆ:
2024-25ನೇ ಆರ್ಥಿಕ ವರ್ಷದಲ್ಲಿ ರೈಲ್ವೆ ಇಲಾಖೆಯ ಕಾರ್ಯಾಚರಣಾ ಅನುಪಾತ ಶೇಕಡಾ 98.90ರಷ್ಟಿದ್ದು 1,341.31 ಕೋಟಿ ರೂಪಾಯಿ ನಿವ್ವಳ ಲಾಭ ಮಾಡಿದೆ. 2025-26ನೇ ಆರ್ಥಿಕ ವರ್ಷದಲ್ಲಿ ಕಾರ್ಯಾಚರಣಾ ಅನುಪಾತವನ್ನು ಶೇಕಡಾ 98.43ಕ್ಕೆ ಸುಧಾರಿಸಿ ನಿವ್ವಳ ಆದಾಯವನ್ನು 3,041.31 ಕೋಟಿ ರುಪಾಯಿಗೆ ಹೆಚ್ಚು ಮಾಡುವ ನಿರೀಕ್ಷೆಯನ್ನು ಹೊಂದಿದೆ.
ಉಳಿತಾಯಕ್ಕೆ ಆದ್ಯತೆ!
ರೈಲ್ವೆ ಇಲಾಖೆ ವಿದ್ಯುತ್ ಉಳಿತಾಯದ ಕಡೆಗೆ ಹೆಚ್ಚಿನ ಗಮನ ಹರಿಸಿದೆ. ಇದರಿಂದ ಅಪಾರ ಪ್ರಮಾಣದ ಹಣ ಉಳಿತಾಯ ಮಾಡುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ರೈಲು ಜಾಲದ ವಿದ್ಯುದೀಕರಣದಿಂದ ವಾರ್ಷಿಕವಾಗಿ ಸುಮಾರು 5,000 ಕೋಟಿ ರೂಪಾಯಿ ಉಳಿತಾಯ ಮಾಡುವ ನಿರೀಕ್ಷೆಯನ್ನು ಹೊಂದಿದೆ. ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಬಂಡವಾಳ ವೆಚ್ಚದ ಗಮನಾರ್ಹ ಭಾಗವನ್ನು ಬಜೆಟ್ ಬೆಂಬಲದ ಮೂಲಕ ನಿಧಿಸಲಾಗಿರುವುದರಿಂದ ರೈಲ್ವೆ ಹಣಕಾಸು ನಿಗಮಕ್ಕೆ (IRFC) ಪಾವತಿಗಳು 2027-28ರ ಹಣಕಾಸು ವರ್ಷದಿಂದ ಕಡಿಮೆಯಾಗುತ್ತವೆ. ಇದರಲ್ಲೂ ಉಳಿತಾಯ ಮಾಡಬೇಕಂದು ರೈಲ್ವೆ ಇಲಾಖೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಇವೆಲ್ಲ ಬೆಳವಣಿಗೆಗಳ ನಡುವೆ ರೈಲ್ವೆ ನೌಕರರ ಸಂಘಗಳ ಬೇಡಿಕೆಗಳು ರೈಲ್ವೆ ಇಲಾಖೆಗೆ ಸವಾಲುಗಳನ್ನು ತಂದಿಡಬಹುದು. 7ನೇ ವೇತನ ಆಯೋಗ 2.57 ಫಿಟ್ಮೆಂಟ್ ಅಂಶ ಜಾರಿಗೆ ತಂದಿತ್ತು. ಒಕ್ಕೂಟಗಳು ಈಗ 2.86 ಫಿಟ್ಮೆಂಟ್ ಅಂಶವನ್ನು ನೀಡುವಂತೆ ಆಗ್ರಹಿಸುತ್ತಿವೆ. ಈ ಬೇಡಿಕೆಗೆ ಒಪ್ಪಿಕೊಂಡರೆ ವೇತನ ವೆಚ್ಚ ಶೇಕಡಾ 22ಕ್ಕಿಂತ ಜಾಸ್ತಿಯಾಗಲಿದೆ. ಅದು ಇಲಾಖೆಗೆ ಹೊರೆಯಾಗಿ ಪರಿಣಮಿಸಲಿದೆ.