)
BPL Card Cancel: ಪಡಿತರ ಚೀಟಿ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಮಹತ್ವದ ಮಾರ್ಗಸೂಚಿಯನ್ನು ಹೊರಡಿಸಿದೆ. ಇದರ ಅನ್ವಯ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಮತ್ತು ಅವರನ್ನು ಎಪಿಎಲ್ ಕಾರ್ಡ್ ವರ್ಗಕ್ಕೆ ವರ್ಗಾಯಿಸಲು ಸೂಚಿಸಲಾಗಿದೆ. ಬಿಪಿಎಲ್ ಕಾರ್ಡ್ ರದ್ದಾದರೆ, ಸರ್ಕಾರಿ ಯೋಜನೆಗಳನ್ನು ಪಡೆಯುವಲ್ಲಿಯೂ ತೊಂದರೆ ಆಗುವುದರಿಂದ ಸರ್ಕಾರದ ಈ ನಿರ್ಧಾರ ಬಡವರ ನಿದ್ದೆಗೆಡಿಸಿದೆ. ಏತನ್ಮಧ್ಯೆ, ರಾಜ್ಯ ಆಹಾರ ನಾಗರೀಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ನೆಮ್ಮದಿಯ ಸುದ್ದಿಯನ್ನು ನೀಡಿದ್ದಾರೆ.
ವಾಸ್ತವವಾಗಿ, ಹೆಸರೇ ಸೂಚಿಸುವಂತೆ ಬಿಪಿಎಲ್ ಕಾರ್ಡ್ 'ಬಡತನ ರೇಖೆಗಿಂತ ಕೆಳಗಿನವರಿಗೆ' ನೀಡುವ ಪಡಿತರ ಚೀಟಿ. ಆದರೆ, ಕೆಲವರು, ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದು, ಅಂತಹವರ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ ಮಹತ್ವದ ಮಾರ್ಗಸೂಚಿಯನ್ನು ಹೊರಡಿಸಿದೆ. ಇದರ ಪ್ರಕಾರ, ಅನರ್ಹರ ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಿ, ಅವರಿಗೆ ಎಪಿಎಲ್ ಕಾರ್ಡ್ (ಬಡತನ ರೇಖೆಗಿಂತ ಮೇಲಿನವರು) ನೀಡಬೇಕೆಂದು ಸರ್ಕಾರ ಸೂಚಿಸಿದೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ಕರ್ನಾಟಕದಲ್ಲಿ ಸುಮಾರು 7-12 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಲಾಗುವುದು ಎನ್ನಲಾಗುತ್ತಿದೆ.
ಪಡಿತರ ಚೀಟಿ ಪರಿಷ್ಕರಣೆಯ ಉದ್ದೇಶ?
ಪಡಿತರ ಚೀಟಿ ಪರಿಷ್ಕರಣೆಯ ಮುಖ್ಯ ಉದ್ದೇಶ ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುವುದಾಗಿದೆ. ಅನರ್ಹರಿಗೆ ಬಿಪಿಎಲ್ ಕಾರ್ಡ್ ರದ್ದುಗೊಳಿಸಿ, ಅರ್ಹರಿಗೆ ಬಿಪಿಎಲ್ ಕಾರ್ಡ್ ಸೌಲಭ್ಯ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಈ ಮೂಲಕ, ನಿಜಕ್ಕೂ ಅಗತ್ಯವಿರುವವರಿಗೆ ಬಿಪಿಎಲ್ ಕಾರ್ಡ್ ಒದಗಿಸಿ, ಅಂತಹವರಿಗೆ ಸರ್ಕಾರದ ಸಬ್ಸಿಡಿ ಸೌಲಭ್ಯಗಳು ತಲುಪುವಂತೆ ಮಾಡುವುದಾಗಿದೆ. ಆದಾಗ್ಯೂ, ನಿಮ್ಮ ಬಿಪಿಎಲ್ ಕಾರ್ಡ್ ತಪ್ಪಾಗಿ ಕ್ಯಾನ್ಸಲ್ ಆಗಿದ್ದರೆ ಇದನ್ನು ಪರಿಹಾರ ನೀಡಿದೆ.
ತಪ್ಪಾಗಿ ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್ಗೆ ವರ್ಗಾಯಿಸಿದರೆ ಏನು ಮಾಡಬೇಕು?
ಬಿಪಿಎಲ್ ರದ್ದತಿ ಕುರಿತಂತೆ ಜನಸಾಮಾನ್ಯರು ಆತಂಕಗೊಳ್ಳುವ ಅಗತ್ಯವಿಲ್ಲ. ಒಂದೊಮ್ಮೆ ನಿಮ್ಮ ಬಿಪಿಎಲ್ ಕಾರ್ಡ್ ತಪ್ಪಾಗಿ ಎಪಿಎಲ್ಗೆ ವರ್ಗಾವಣೆಗೊಂಡಿದ್ದರೆ ಅಂತಹ ಫಲಾನುಭವಿಗಳು ಕೂಡಲೇ ಆಹಾರ ಇಲಾಖೆಗೆ ಈ ಬಗ್ಗೆ ವರದಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಆಹಾರ ನಾಗರೀಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಿದ 24ಗಂಟೆಗಳೊಳಗೆ ಸಿಗುತ್ತೆ ಈ ಸೌಲಭ್ಯ:
ಅರ್ಹ ಫಲಾನುಭವಿಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುವುದನ್ನು ತಪ್ಪಿಸಲು ಮತ್ತು ಪಡಿತರ ಪರಿಷ್ಕರಣೆಯಿಂದ ಅರ್ಹರಿಗೆ ಯಾವುದೇ ರೀತಿಯ ತೊಂದರೆ ಆಗುವುದನ್ನು ತಡೆಯಲು ಸರ್ಕಾರ ಕಾಳಜಿವಹಿಸಿದೆ. ಬಿಪಿಎಲ್ ಕಾರ್ಡ್ ರದ್ದಾಗಿ ಎಪಿಎಲ್ಗೆ ವರ್ಗಾವಣೆಗೊಂಡಿದ್ದರೆ ಅಂತಹವರು ಅರ್ಜಿ ಸಲಿಸಿದ 24 ಗಂಟೆಗಳ ಒಳಗೆ ಕಾರ್ಡ್ ಸರಿಪಡಿಸಿ, ದವಸ ಧಾನ್ಯಗಳನ್ನು ಪೂರೈಸಲಾಗುವುದು. ಆದಾಗ್ಯೂ, ಇದಕ್ಕಾಗಿ ನಿಗದಿತ ಮಾನದಂಡಗಳನ್ನೂ ಪೂರೈಸುವುದು ಅಗತ್ಯವಾಗಿದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ.