)
Small Traders GST Tax Notice: ಪ್ರಸ್ತುತ, ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್ ನೊಟೀಸ್ ಬರುತ್ತಿರುವ ವಿಚಾರ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರಿಂದಾಗಿ ಕೆಲವು ವರ್ತಕರು ಡಿಜಿಟಲ್ ಪಾವತಿಯಿಂದ ಹಿಂದೆ ಸರಿಯುತ್ತಿದ್ದು ಮತ್ತೆ ನಗದು ವಹಿವಾಟಿನತ್ತ ಮುಖ ಮಾಡುತ್ತಿದ್ದಾರೆ. ಏತನ್ಮಧ್ಯೆ, ಹಾಲಿನ ವ್ಯಾಪಾರಿಗೂ ಜಿಎಸ್ಟಿ ಟ್ಯಾಕ್ಸ್ ನೋಟೀಸ್ ಕಳುಹಿಸಲಾಗಿದ್ದು ಈ ನೋಟೀಸ್ ಕಂಡು ಹಾಲಿನ ವ್ಯಾಪಾರಿ ದಿಗ್ಭ್ರಮೆಗೆ ಒಳಗಾಗಿದ್ದಾರೆ. ಕಾರಣ ಇದು ಸಾವಿರ ಅಲ್ಲ... ಲಕ್ಷ ಅಲ್ಲ.... ಒಂದು ಕೋಟಿಗೂ ಹೆಚ್ಚು ಮೊತ್ತದ ಟ್ಯಾಕ್ಸ್ ನೋಟೀಸ್...
ಹೌದು, ಉಳ್ಳಾಲದ ಮಿಲ್ಕ್ ಬೂತ್ ಮಾಲೀಕರಾದ ರವಿ ಅನ್ನೋ ವ್ಯಕ್ತಿಗೆ ಬರೋಬ್ಬರಿ ಒಂದು ಕೋಟಿ ಮೂರು ಲಕ್ಷ ರೂಪಾಯಿಯ ಟ್ಯಾಕ್ಸ್ ನೋಟೀಸ್ ಕಳುಹಿಸಲಾಗಿದ್ದು ಈ ಜಿಎಸ್ಟಿ ಟ್ಯಾಕ್ಸ್ ನೋಟೀಸ್ ಕಂಡು ಅವರು ಶಾಕ್ ಆಗಿದ್ದಾರೆ.
ಉಳ್ಳಾಲ ರಸ್ತೆಯಲ್ಲಿ ಹಾಲಿನ ಬೂತ್ ನಡೆಸುತ್ತಿರುವ ರವಿ ಎಂಬ ಹಾಲಿನ ವ್ಯಾಪಾರಿಗೆ ನಾಲ್ಕು ವರ್ಷಕ್ಕೆ ಬರೋಬ್ಬರಿ ಒಂದು ಕೋಟಿ ಮೂರು ಲಕ್ಷ ರೂಪಾಯಿ ಮೊತ್ತದ ಜಿಎಸ್ಟಿ ನೋಟೀಸ್ ಕಳುಹಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾನು ಹಾಲು ಮಾರುವವನು. ಜಿಎಸ್ಟಿ ನೋಟೀಸ್'ಗೆ ಏನೆಂದು ಉತ್ತರ ನೀಡಲಿ. ಬೆಳಿಗ್ಗೆ ಬಂದು ಹಾಲು ಮಾರಿ, ಬಂದ ಹಣವನ್ನು ಬ್ಯಾಂಕಿಗೆ ಕಟ್ಟುತ್ತೇನೆ. ಬಳಿಕ ಫೋನ್ ಪೇ ಮಾಡಿ ಮತ್ತೆ ಹಾಲಿಗೆ ಇಂಡೆಂಟ್ ಹಾಕುತ್ತೇನೆ. ಆದಾಯ ತೆರಿಗೆ ಇಲಾಖೆಯಿಂದ ಫೋನ್ ಪೇ, ಪೇಟಿಎಂ ನಲ್ಲಿ ನಡೆಸಲಾದ ವಹಿವಾಟಿಗೆ ಕೋಟಿ ಮೊತ್ತದ ನೋಟೀಸ್ ಜಾರಿ ಮಾಡಿದ್ದಾರೆ. ಇದಕ್ಕೆ 10 ರಿಂದ 18% ಜಿಎಸ್ಟಿ ಕಟ್ಟಲು ಹೇಳುತ್ತಾರೆ. ಇದನ್ನು ನಾನು ಹೇಗೆ ಭರಿಸಲಿ ಎಂದವರು ಪ್ರಶ್ನಿಸಿದ್ದಾರೆ.
ನೋಟೀಸ್ ಬಂದಿದೆ... ಆದರೆ ವಿಳಾಸವೂ ಸರಿಯಿಲ್ಲ..
ಜಿಎಸ್ಟಿ ನೊಟೀಸ್ ವಿಚಾರವಾಗಿ ಇದುವರೆಗೂ ಆದಾಯ ತೆರಿಗೆ ಅಧಿಕಾರಿಗಳು ತಮ್ಮನ್ನು ಸಂಪರ್ಕಿಸಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿರುವ ಹಾಲಿನ ವ್ಯಾಪಾರಿ ರವಿ ಅವರು, ಜಿಎಸ್ಟಿ ಟ್ಯಾಕ್ಸ್ ನೊಟೀಸ್ ಅನ್ನು ಕಳುಹಿಸಲಾಗಿದೆ. ಈ ಬಗ್ಗೆ ಮೊಬೈಲ್ ಸಂದೇಶವೂ ಬಂದಿದೆ. ಆದರೆ, ಕೇವಲ ಸಂಖ್ಯೆಯನ್ನು ಆಧರಿಸಿ ನೊಟೀಸ್ ನೀಡಲಾಗಿದೆಯೇ ಹೊರತು, ನಮ್ಮ ಮನೆಯ ಸರಿಯಾದ ವಿಳಾಸವನ್ನೂ ಸಹ ಇದರಲ್ಲಿ ನಮೂದಿಸಲಾಗಿಲ್ಲ ಎಂದಿದ್ದಾರೆ.
ಹಾಲು ಮಾರಿ ನಾವು ಜಿಎಸ್ಟಿ ಪಾವತಿಸಲು ಸಾಧ್ಯವೇ?
ನೊಟೀಸ್ ಕಂಡು ಕಂಗಾಲಾದ ಹಾಲು ಮಾರಾಟಗಾರ ರವಿ, ಹಾಲಲ್ಲಿ ಸಿಗೋದು ಕೇವಲ ಒಂದೆರಡು ಪರ್ಸೆಂಟ್ ಲಾಭ ಅಷ್ಟೇ, ಅದರಲ್ಲಿ ಯಾವ ರೀತಿಯಲ್ಲಿ ನಾವು ಟ್ಯಾಕ್ಸ್ ಕಟ್ಟೋದು ಎಂದು ಅಳಲು ತೋಡಿಕೊಂಡಿದ್ದಾರೆ.
ಜಿಎಸ್ಟಿ ಟ್ಯಾಕ್ಸ್ ನೋಟೀಸ್ ಸ್ವೀಕರಿಸಿರುವ ಬಗ್ಗೆ ಹಾಲಿನ ವ್ಯಾಪಾರಿ ರವಿ ಅವರು ಹೇಳಿದ್ದೇನು? ಈ ವಿಡಿಯೋ ವೀಕ್ಷಿಸಿ...