)
10 ವರ್ಷಗಳ ಕಾಲ ಇಪಿಎಫ್ಒಗೆ ಕೊಡುಗೆ ನೀಡುವ ಉದ್ಯೋಗಿಗಳು ನಿವೃತ್ತಿಯ ನಂತರ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಇಪಿಎಫ್ಒ ಬೇರೆ ಬೇರೆ ವಿಭಿನ್ನ ಸನ್ನಿವೇಶಗಳಿಗೆ ಅನುಗುಣವಾಗಿ ವಿಭಿನ್ನ ರೀತಿಯ ಪಿಂಚಣಿಗಳನ್ನು ನೀಡುತ್ತದೆ. ಆದರೆ, ಬಹುತೇಕ ಪಿಎಫ್ ಸದಸ್ಯರಿಗೂ ಈ ಬಗ್ಗೆ ಮಾಹಿತಿ ಇಲ್ಲ. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಖಾಸಗಿ ವಲಯದ ಕಾರ್ಮಿಕರು 58 ವರ್ಷ ವಯಸ್ಸನ್ನು ತಲುಪಿದ ನಂತರ ಇಪಿಎಸ್ ಪಿಂಚಣಿಗೆ ಅರ್ಹರಾಗುತ್ತಾರೆ. ಇಪಿಎಸ್ ಅಡಿಯಲ್ಲಿ 7 ವಿಧದ ಪಿಂಚಣಿ ಸಿಗುತ್ತದೆ.
ನೌಕರರ ಭವಿಷ್ಯ ನಿಧಿ ಸಂಸ್ಥೆ 58ನೇ ವಯಸ್ಸಿನಲ್ಲಿ ನಿವೃತ್ತಿಯ ನಂತರ ಉದ್ಯೋಗಿಗಳಿಗೆ EPS ಮೂಲಕ ಪಿಂಚಣಿ ನೀಡುತ್ತದೆ. ಪಿಂಚಣಿ ಮೊತ್ತವು ಪಿಂಚಣಿ ನಿಧಿಗೆ ನೀಡುವ ಒಟ್ಟು ಕೊಡುಗೆಯನ್ನು ಅವಲಂಬಿಸಿರುತ್ತದೆ. ಉದ್ಯೋಗಿ ಬಯಸಿದರೆ, 60ನೇ ವಯಸ್ಸಿನಲ್ಲಿಯೂ ಪಿಂಚಣಿ ಪಡೆಯಬಹುದು. ಆಗ ವರ್ಷಕ್ಕೆ 4% ಹೆಚ್ಚಿನ ಪಿಂಚಣಿಯನ್ನು ಪಡೆಯಬಹುದು.
ಆರಂಭಿಕ ಪಿಂಚಣಿ :10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ 50 ವರ್ಷಕ್ಕಿಂತ ಮೇಲ್ಪಟ್ಟ ನೌಕರರಿಗೆ ಆರಂಭಿಕ ಪಿಂಚಣಿ ನೀಡಲಾಗುತ್ತದೆ. ಇಪಿಎಫ್ಒ ಅವಧಿಪೂರ್ವ ನಿವೃತ್ತಿಗೂ ವ್ಯವಸ್ಥೆ ಮಾಡಿದೆ. ಆದರೆ, ಆರಂಭಿಕ ಪಿಂಚಣಿಯಲ್ಲಿ, ಇಪಿಎಫ್ಒ ಸದಸ್ಯರಿಗೆ ನೀಡಲಾಗುವ ಪಿಂಚಣಿಯನ್ನು ಪ್ರತಿ ವರ್ಷ ಶೇಕಡಾ 4 ರಷ್ಟು ಕಡಿಮೆ ಮಾಡಲಾಗುತ್ತದೆ.
ವಿಧವೆ ಅಥವಾ ಮಕ್ಕಳ ಪಿಂಚಣಿ : ಇಪಿಎಫ್ಒ ಚಂದಾದಾರರ ಮರಣದ ನಂತರ, ಅವರ ಪತ್ನಿ ಮತ್ತು 25 ವರ್ಷದೊಳಗಿನ ಇಬ್ಬರು ಮಕ್ಕಳು ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಮೂರನೇ ಮಗುವಿಗೂ ಪಿಂಚಣಿ ಅರ್ಹತೆ ಇರುತ್ತದೆ. ಆದರೆ, ಮೊದಲ ಮಗುವಿನ ಪಿಂಚಣಿ 25ನೇ ವಯಸ್ಸಿನಲ್ಲಿ ನಿಂತಾಗ, ಮೂರನೇ ಮಗುವಿನ ಪಿಂಚಣಿ ಪ್ರಾರಂಭವಾಗುತ್ತದೆ. ಇಪಿಎಫ್ಒ ಚಂದಾದಾರರು ಮರಣ ಹೊಂದಿದಲ್ಲಿ 10 ವರ್ಷಗಳ ನಿವೃತ್ತಿ ನಿಯಮ ಅನ್ವಯಿಸುವುದಿಲ್ಲ.
ಅಂಗವಿಕಲ ಪಿಂಚಣಿ : ಕೆಲಸದ ಸಮಯದಲ್ಲಿ ತಾತ್ಕಾಲಿಕ ಅಥವಾ ಶಾಶ್ವತ ಅಂಗವೈಕಲ್ಯ ಉಂಟಾದರೆ, ಈ ಪಿಂಚಣಿಯನ್ನು ನೀಡಲಾಗುತ್ತದೆ. ಇಲ್ಲಿಯೂ ವಯಸ್ಸು ಮತ್ತು 10 ವರ್ಷಗಳ ಕೊಡುಗೆಯ ಷರತ್ತು ಇದಕ್ಕೆ ಅನ್ವಯಿಸುವುದಿಲ್ಲ.
ಅನಾಥ ಪಿಂಚಣಿ : ಇಪಿಎಫ್ಒ ಚಂದಾದಾರರು ಸಾವನ್ನಪ್ಪಿ ಅವರ ಸಂಗಾತಿಯೂ ಮೃತಪಟ್ಟಿದ್ದರೆ 25 ವರ್ಷದೊಳಗಿನ ಇಬ್ಬರು ಮಕ್ಕಳಿಗೆ ಪಿಂಚಣಿ ಸಿಗುತ್ತದೆ. ಈ ಮೂಲಕ ಇಪಿಎಫ್ಒ ಅನಾಥ ಪಿಂಚಣಿಯನ್ನು ಒದಗಿಸುತ್ತದೆ.
ನಾಮಿನಿ ಪಿಂಚಣಿ: ಇಪಿಎಫ್ಒ ಸದಸ್ಯರಿಗೆ ಸಂಗಾತಿ ಅಥವಾ ಮಗು ಇಲ್ಲದಿದ್ದರೆ, ಇಪಿಎಫ್ಒ ಸದಸ್ಯರ ಮರಣದ ನಂತರ, ಈ ಪಿಂಚಣಿಯನ್ನು ಅವರು ನಾಮನಿರ್ದೇಶನ ಮಾಡಿದ ನಾಮಿನಿಗೆ ಪಾವತಿಸಲಾಗುತ್ತದೆ.
ಅವಲಂಬಿತ ಪೋಷಕರ ಪಿಂಚಣಿ: ಇಪಿಎಫ್ಒ ಅಡಿಯಲ್ಲಿ, ಇಪಿಎಫ್ಒ ಚಂದಾದಾರರು ಮರಣಹೊಂದಿದರೆ, ಅವರ ಅವಲಂಬಿತ ತಂದೆಯನ್ನು ಪಿಂಚಣಿಗೆ ಅರ್ಹರೆಂದು ಪರಿಗಣಿಸಲಾಗುತ್ತದೆ. ತಂದೆ ಸತ್ತರೆ, ಚಂದಾದಾರರ ತಾಯಿ ಪಿಂಚಣಿ ಪಡೆಯುತ್ತಾರೆ. ಆಗ ಅವರಿಗೆ ಜೀವನಪರ್ಯಂತ ಪಿಂಚಣಿ ಸಿಗುತ್ತದೆ.