)
EPFO Latest News: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಸದ್ದಿಲ್ಲದೇ ಹೊಸ ಅಪ್ಡೇಟ್ ಬಿಡುಗಡೆ ಮಾಡಿದ್ದು ಇಪಿಎಫ್ಒ 3.0 (EPFO 3.0) ಅನ್ನು ಪರಿಷ್ಕರಿಸಿದೆ. ಈ ಹೊಸ ನವೀಕರಣವು ಅತಿದೊಡ್ಡ ಡಿಜಿಟಲ್ ಅಪ್ಡೇಟ್ ಆಗಿದ್ದು ಇದು ಪಿಎಫ್ ಹಿಂಪಡೆಯುವಿಕೆ ಪ್ರಕ್ರಿಯೆಯನ್ನು ವೇಗ ಹಾಗೂ ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸಲಿದೆ. ಹೊಸ ಇಪಿಎಫ್ಒ 3.0ದಲಿ ಹೊಸತೇನಿದೆ. ಇದನ್ನು ಬಳಸುವುದು ಹೇಗೆ? ಇಲ್ಲಿದೆ ಫುಲ್ ಡೀಟೇಲ್ಸ್...
ಏನಿದು ಇಪಿಎಫ್ಒ 3.0:
ಇಪಿಎಫ್ಒದ ಹೊಸ ಡಿಜಿಟಲ್ ವ್ಯವಸ್ಥೆಯ ಪುನರ್ ನಿರ್ಮಾಣವೇ ಇಪಿಎಫ್ಒ 3.0. ಇದು ನಿಧಾನಗತಿಯ ಹಸ್ತಚಾಲಿತ ಡೆಸ್ಕ್ನಿಂದ ಸ್ಮಾರ್ಟ್, ಸಂಪೂರ್ಣ ಸ್ವಯಂಚಾಲಿತ ಡ್ಯಾಶ್ಬೋರ್ಡ್ಗೆ ಪರಿವರ್ತನೆಯಾಗಿದೆ.
ಇಪಿಎಫ್ಒ 3.0ದಲ್ಲಿ ಏನೆಲ್ಲಾ ಸಿಗಲಿದೆ?
ಇಪಿಎಫ್ಒ 3.0 ಭವಿಷ್ಯ ನಿಧಿಯ ಚಂದಾದಾರರ ದಾಖಲೆಗಳನ್ನು ಸ್ವಯಂ ಪರಿಶೀಲನೆ ನಡೆಸುತ್ತದೆ. ಅಲ್ಲದೆ, ತ್ವರಿತ ಕೆವೈಸಿ ದೃಢೀಕರಣ, ಸುಗಮ ಆಧಾರ್ ಲಿಂಕ್ ನಂತಹ ಕೆಲಸಗಳಲ್ಲಿ ವಾರಗಳಲ್ಲಲ್ಲ, ಒಂದೆರಡು ದಿನಗಳಲ್ಲಿ ಪೂರ್ಣಗೊಳಿಸುವ ವೇಗವಾದ ಕ್ಲೈಮ್ ಎಂಜಿನ್ ಆಗಿ ಕೆಲಸ ಮಾಡಲಿದೆ. ಮೊಬೈಲ್ ಅಪ್ಲಿಕೇಶನ್'ನಲ್ಲಿ ಇಪಿಎಫ್ಒ 3.0 24×7 ಪ್ರವೇಶ ಲಭ್ಯವಿರುವುದರಿಂದ ಇಪಿಎಫ್ ಸದಸ್ಯರಿಗೆ ಒಂದು ದೊಡ್ಡ ಪರಿಹಾರ ಎಂತಲೇ ಹೇಳಬಹುದಾಗಿದೆ.
ಪಿಎಫ್ ಹಿಂಪಡೆಯುವಿಕೆಯ ಹಂತ ಹಂತದ ಪ್ರಕ್ರಿಯೆ:
ಇಪಿಎಫ್ಒ 3.0 ಅಡಿಯಲ್ಲಿ ಪಿಎಫ್ ಹಣವನ್ನು ಹಿಂಪಡೆಯುವ ಪ್ರಕ್ರಿಯೆಯೂ ತುಂಬಾ ಸರಳವಾಗಿದೆ. ಫಸ್ಟ್ ಟೈಮ್ ಪಿಎಫ್ ಕ್ಲೈಮ್ ಮಾಡುವವರೂ ಕೂಡ ಆನ್ಲೈನ್ನಲ್ಲಿ ಈ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಬಹುದು. ಇದಕ್ಕಾಗಿ ಹಂತ-ಹಂತದ ಪ್ರಕ್ರಿಯೆ ಇಲ್ಲಿದೆ.
ಹಂತ 1: ಮೊದಲಿಗೆ ಇಪಿಎಫ್ಒ ಅಧಿಕೃತ epfindia.gov.in ವೆಬ್ಸೈಟ್ಗೆ ಭೇಟಿ ನೀಡಿ.
ಹಂತ 2: ನಿಮ್ಮ ಯುಎಎನ್ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿರಿ.
ಹಂತ 3: ಕ್ಲೈಮ್ ವಿಭಾಗದಲ್ಲಿ ಹೋಗಿ ಕ್ಲೈಮ್ (ಫಾರ್ಮ್-31, 19, 10C) ನಿಮಗೆ ಅಗತ್ಯವಿರುವ ಕ್ಲೈಮ್ ಮೇಲೆ ಕ್ಲಿಕ್ ಮಾಡಿ.
ಹಂತ 4: ನಿಮ್ಮ ಕೆವೈಸಿ ಮತ್ತು ಬ್ಯಾಂಕ್ ವಿವರಗಳನ್ನು ಪರಿಶೀಲಿಸಿ. ಸಿಸ್ಟಮ್ ಹೆಚ್ಚಿನ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪರಿಶೀಲಿಸುತ್ತದೆ.
ಹಂತ 5: ಪಿಎಫ್ ಹಿಂಪಡೆಯುವಿಕೆಗೆ ಕಾರಣವನ್ನು (ಪೂರ್ಣ ಹಿಂಪಡೆಯುವಿಕೆ, ಭಾಗಶಃ ಹಿಂಪಡೆಯುವಿಕೆ, ಉದ್ಯೋಗ ಬದಲಾವಣೆ, ಮದುವೆ, ವೈದ್ಯಕೀಯ, ಇತ್ಯಾದಿ) ಆರಿಸಿ. ಸಲ್ಲಿಸಿ.
ಹಂತ 6: ಪಿಎಫ್ ಖಾತೆದಾರರು ಮೇಲ್ಕಂಡ ಹಂತಗಳನ್ನು ಅನುಸರಿಸಿ ಕ್ಲೈಮ್ ಸಲ್ಲಿಸಿದ ಬಳಿಕ ಅನುಮೋದನೆ ಪಡೆದ ನಂತರ 3–5 ಕೆಲಸದ ದಿನಗಳಲ್ಲಿ ಪಿಎಫ್ ಮೊತ್ತವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಕಳುಹಿಸಲಾಗುತ್ತದೆ.
ಉದ್ಯೋಗಿಗಳಿಗೆ ಇಪಿಎಫ್ಒ 3.0 ಏಕೆ ಮುಖ್ಯ?
ಪಿಎಫ್ ಸಂಬಂಧಿತ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುವುದಿಲ್ಲ ಎಂಬ ದೂರುಗಳು ಸರ್ವೇ ಸಾಮಾನ್ಯ. ಸಾಮಾನ್ಯವಾಗಿ ಹಸ್ತಚಾಲಿತ ಪರಿಶೀಲನೆಯಿಂದಾಗಿ ಕ್ಲೈಮ್ಗಳನ್ನು ಇತ್ಯರ್ಥಗೊಳಿಸುವುದು ವಿಳಂಬವಾಗುತ್ತದೆ. ಆದರೆ, ಇಪಿಎಫ್ಒ 3.0 ಈ ಅಡಚಣೆಯನ್ನು ಸಂಪೂರ್ಣವಾಗಿ ಸರಿಪಡಿಸುತ್ತದೆ. ಇದರಲ್ಲಿ ಕ್ಲೈಮ್ ಗಳನ್ನು ಇತ್ಯರ್ಥಗೊಳಿಸಲು ಭೌತಿಕ ದಾಖಲೆಗಳ ಅಗಯ್ತವಿಲ್ಲ. ಪದೇ ಪದೇ ಬ್ಯಾಂಕ್ ಅಥವಾ ಪಿಎಫ್ ಕಚೇರಿಗೆ ಭೇಟಿ ನೀಡುವ ಅಗತ್ಯವಿರುವುದಿಲ್ಲ. ಇದರಲ್ಲಿ ಪಾರದರ್ಶಕ ಕ್ಲೈಮ್ ಟ್ರ್ಯಾಕಿಂಗ್ ವ್ಯವಸ್ಥೆ ಲಭ್ಯವಿದ್ದು, ಆಗಾಗ್ಗೆ ಕೆಲಸ ಬದಲಾಯಿಸುವ ಅಥವಾ ಬಹು ಪಿಎಫ್ ಕ್ಲೈಮ್ಗಳನ್ನು ಮಾಡುವ ಇಪಿಎಫ್ ಸದಸ್ಯರಿಗೆ ಈ ನವೀಕರಣವು ದೊಡ್ಡ ಪರಿಹಾರವಾಗಿದೆ.
ಹೊಸ ಇಪಿಎಫ್ಒ 3.0 ವ್ಯವಸ್ಥೆಯನ್ನು ಯಾರು ಬಳಸಬಹುದು?
ಸಕ್ರಿಯ ಇಪಿಎಫ್ ಖಾತೆಯನ್ನು ಹೊಂದಿರುವ ಪ್ರತಿಯೊಬ್ಬ ಇಪಿಎಫ್ ಸದಸ್ಯರು (ಸರ್ಕಾರಿ ಅಥವಾ ಖಾಸಗಿ ಉದ್ಯೋಗಿ) ಈ ಸೇವೆಯನ್ನು ಬಳಸಬಹುದಾಗಿದೆ. ನಿಮ್ಮ ಯುಎಎನ್ ಆಧಾರ್ಗೆ ಲಿಂಕ್ ಆಗಿದ್ದರೆ ಮತ್ತು ನಿಮ್ಮ ಕೆವೈಸಿ ನವೀಕರಿಸಿದ್ದರೆ ನೀವು ತಕ್ಷಣ ಇಪಿಎಫ್ಒ 3.0 ಅನ್ನು ಬಳಸಬಹುದು.