)
EPFO News: ಪ್ರತಿ ಉದ್ಯೋಗಿಗೂ ಲಭ್ಯವಾಗುವ ಇಪಿಎಫ್ಒ ಖಾತೆಯಲ್ಲಿ ನೌಕರರ ಭವಿಷ್ಯ ನಿಧಿ (ಇಪಿಎಫ್) ಖಾತೆಯು ತುಂಬಾ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ಉದ್ಯೋಗಿ ಜೀವನವಿಡೀ ಕಷ್ಟಪಟ್ಟು ಸಂಪಾದಿಸಿ ಹಣವನ್ನು ಉಳಿತಾಯ ಮಾಡುವುದಲ್ಲದೆ ಭವಿಷ್ಯಕ್ಕೆ ಅದರಲ್ಲೂ ನಿವೃತ್ತಿ ಜೀವನಕ್ಕೆ ಆರ್ಥಿಕ ಬುನಾದಿಯನ್ನು ಹಾಕುತ್ತದೆ. ಆದರೆ, ಇಪಿಎಫ್ಒ ಖಾತೆಯಲ್ಲಿ ನೀವು ಮಾಡುವ ಕೆಲವು ತಪ್ಪುಗಳು ನಿಮ್ಮ ನಿವೃತ್ತಿ ನಿಧಿಯ ಮೊತ್ತವನ್ನು ಕಡಿಮೆ ಮಾಡಬಹುದು. ಅಂತಹ ಐದು ಪ್ರಮುಖ ತಪ್ಪುಗಳ ಬಗ್ಗೆ ತಿಳಿಯಲು ಮುಂದೆ ಓದಿ...
1. ನಾಮಿನಿ ಅಪ್ಡೇಟ್ ಮಾಡದಿರುವುದು:
ನೌಕರರ ಭವಿಷ್ಯ ನಿಧಿ ಸಂಸ್ಥೆ-ಇಪಿಎಫ್ಒ ಖಾತೆ ತೆರೆಯುವಾಗ, ಇಲ್ಲವೇ, ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಉದ್ಯೋಗ ಬದಲಾಯಿಸುವಾಗ ತಪ್ಪದೇ ನಾಮಿನಿ ಮಾಹಿತಿಯನ್ನು ನವೀಕರಿಸಿ. ಇದು ನಿಮ್ಮ ಕುಟುಂಬಕ್ಕೆ ಭವಿಷ್ಯದಲ್ಲಿ ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಆಕಸ್ಮಿಕ ಸಂದರ್ಭಗಳಲ್ಲಿ ನೀವು ಕೂಡಿಟ್ಟ ಹಣ ಯಾವುದೇ ತೊಂದರೆಯಿಲ್ಲದೆ ನಿಮ್ಮ ನಿಧಿ ನಿಮ್ಮ ಅವಲಂಬಿತರ ಕೈ ಸೇರುತ್ತದೆ. ಒಂದೊಮ್ಮೆ ಇಪಿಎಫ್ ಖಾತೆದಾರರು ತಮ್ಮ ಖಾತೆಯಲ್ಲಿ ನಾಮಿನಿ ಅಪ್ಡೇಟ್ ಮಾಡದಿದ್ದರೆ ಹಾಗೂ ಅವರು ಅಕಾಲಿಕ ಮರಣಕ್ಕೀಡಾದರೆ ಅಂತಹ ಸಂದರ್ಭದಲ್ಲಿ ಅವರ ಕುಟುಂಬ ಪಿಎಫ್ ಹಣ ಹಿಂಪಡೆಯುವಲ್ಲಿ ತೊಂದರೆ ಎದುರಿಸಬೇಕಾಗಬಹುದು.
2. ಇಪಿಎಫ್ ಖಾತೆಗಳನ್ನು ಲಿಂಕ್ ಮಾಡದಿರುವುದು:
ಇದು ಉದ್ಯೋಗಿಗಳು ಮಾಡುವ ಸಾಮಾನ್ಯ ತಪ್ಪು. ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಉದ್ಯೋಗ ಬದಲಾಯಿಸಿದಾಗ ಹೆಚ್ಚಿನವರು ತಮ್ಮ ಇಪಿಎಫ್ ಖಾತೆಯನ್ನು ಹೊಸ ಖಾತೆಯೊಂದಿಗೆ ವರ್ಗಾಯಿಸಲು ಅಥವಾ ವಿಲೀನಗೊಳಿಸಲು ಮರೆತುಬಿಡುತ್ತಾರೆ. ಇದರ ಪರಿಣಾಮವಾಗಿ ಒಬ್ಬ ಉದ್ಯೋಗಿಯ ಹೆಸರಿನಲ್ಲಿ ಬಹು ಇಪಿಎಫ್ ಖಾತೆಗಳಿರುತ್ತವೆ. ಪ್ರತಿ ಖಾತೆಯೂ ವಿಭಿನ್ನ ಬಡ್ಡಿದರ ಹೊಂದಿರುವುದರಿಂದ ಹಾಗೂ ನಿಗದಿತ ಅವಧಿಯ ಬಳಿಕ ಕೆಲ ಇಪಿಎಫ್ ಖಾತೆಗೆಳು ನಿಷ್ಕ್ರಿಯಗೊಂಡು ಅದಕ್ಕೆ ಬಡ್ಡಿ ದೊರೆಯದೇ ಇರುವುದರಿಂದ ಇದು ಗಮನಾರ್ಹ ನಷ್ಟವನ್ನು ಉಂಟು ಮಾಡುವುದರ ಜೊತೆಗೆ ನಿಮ್ಮ ನಿವೃತ್ತಿ ನಿಧಿಯ ಮೇಲೆ ನೇರ ಪರಿಣಾಮ ಉಂಟು ಮಾಡುತ್ತದೆ.
3. ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್) ಸಕ್ರಿಯಗೊಳಿಸದಿರುವುದು:
ಇಪಿಎಫ್ ಸಂಬಂಧಿತ ಯಾವುದೇ ರೀತಿಯ ಆನ್ಲೈನ್ ಸೇವೆಗಳನ್ನು ಪಡೆಯಲು ಯುಎಎನ್ ಸಂಖ್ಯೆ ಸಕ್ರಿಯವಾಗಿರುವುದು ಅತ್ಯಗತ್ಯ. ಅದು ಪಿಎಫ್ ಬ್ಯಾಲೆನ್ಸ್ ಪರಿಶೀಲನೆ ಇರಲಿ, ಅಥವಾ ಹಣ ಹಿಂಪಡೆಯುವಿಕೆಯೇ ಇರಲಿ ಯುಎಎನ್ ಸಕ್ರಿಯವಾಗಿಲ್ಲದಿದ್ದಾಗ ಅದು ಸಾಧ್ಯವಾಗುವುದಿಲ್ಲ. ಹಾಗಾಗಿ ನೀವಿನ್ನೂ ನಿಮ್ಮ ಯುಎಎನ್ ಸಕ್ರಿಯಗೊಳಿಸದಿದ್ದರೆ ಕೂಡಲೇ ಅದನ್ನು ಆಕ್ಟಿವ್ ಮಾಡಿ.
4. ತಪ್ಪಾದ ಕೆವೈಸಿ ಮಾಹಿತಿ:
ಇಪಿಎಫ್ ಗ್ರಾಹಕರು ಮಾಡುವ ಮತ್ತೊಂದು ಪ್ರಮುಖ ತಪ್ಪೆಂದರೆ ತಪ್ಪಾದ ಬ್ಯಾಂಕ್ ಖಾತೆ ಸಂಖ್ಯೆ, ಇಲ್ಲವೇ ಸದ್ಯ ಚಾಲ್ತಿಯಲ್ಲಿಲ್ಲದ ತಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ನೀಡಿರುತ್ತಾರೆ. ಇಲ್ಲವೇ, IFSC ಕೋಡ್ ತಪ್ಪಾಗಿದ್ದರೆ ಅದನ್ನು ಸರಿಪಡಿಸಿರುವುದಿಲ್ಲ. ಇದು ಇಪಿಎಫ್ ಖಾತೆಯಿಂದ ಹಣ ಹಿಂಪಡೆಯುವಲ್ಲಿ ಅಡಚಣೆ ಉಂಟು ಮಾಡುತ್ತದೆ. ಇದನ್ನು ತಪ್ಪಿಸಲು ನಿಮ್ಮ ಸರಿಯಾದ ಬ್ಯಾಂಕ್ ವಿವರಗಳ ಜೊತೆಗೆ ನಿಮ್ಮ ಆಧಾರ್, ಪ್ಯಾನ್ ಅಥವಾ ಬ್ಯಾಂಕ್ ವಿವರಗಳನ್ನು ಲಿಂಕ್ ಮಾಡದಿದ್ದರೆ ಅವುಗಳನ್ನು ಸರಿಪಡಿಸಿ ನಿಮ್ಮ ಕೆವೈಸಿ ಮಾಹಿತಿಯನ್ನು ಅಪ್ಡೇಟ್ ಮಾಡಿ.
5. ನಿಯಮಿತವಾಗಿ ಇಪಿಎಫ್ ಪಾಸ್ಬುಕ್ ಪರಿಶೀಲಿಸದಿರುವುದು:
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಖಾತೆ ಹೊಂದಿರುವವರು ನಿಯಮಿತವಾಗಿ ತಮ್ಮ ಇಪಿಎಫ್ ಪಾಸ್ಬುಕ್ ಪರಿಶೀಲಿಸುತ್ತಿರಬೇಕು. ಇಲ್ಲವಾದರೆ, ನಿಮ್ಮ ಖಾತೆಗೆ ಯಾವಾಗ ಹಣ ಬಂದಿದೆ? ಎಷ್ಟು ಹಣ ಬಂದಿದೆ. ಉದ್ಯೋಗದಾತರು ಸರಿಯಾಗಿ ತಮ್ಮ ಕೊಡುಗೆಗಳನ್ನು ಜಮಾ ಮಾಡುತ್ತಿದ್ದಾರೆಯೇ ಎಂಬಿತ್ಯಾದಿ ಮಾಹಿತಿಗಳ ಬಗ್ಗೆ ನಿಮಗೆ ಅರಿವಿರುವುದಿಲ್ಲ. ಇವುಗಳನ್ನು ಸರಿಯಾದ ಸಮಯದಲ್ಲಿ ಸರಿಪಡಿಸದೇ ಇದ್ದಲ್ಲಿ ಭವಿಷ್ಯದಲ್ಲಿ ಇದರಿಂದ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ.