EPFO Pensioners Digital Life Certificate: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಸಹಯೋಗದೊಂದಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಲಕ್ಷಾಂತರ ಪಿಂಚಣಿದಾರರಿಗೆ ಅನುಕೂಲವಾಗುವಂತೆ ಹೊಸ ಸೇವೆಯನ್ನು ಆರಂಭಿಸಿದೆ. ನೌಕರರ ಪಿಂಚಣಿ ಯೋಜನೆ, 1995 (EPS'95) ಅಡಿಯಲ್ಲಿ ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (DLCs) ಸಲ್ಲಿಸುವುದು ಕಡ್ಡಾಯವಾಗಿದ್ದು, ಇನ್ನು ಮುಂದೆ ಪಿಂಚಣಿದಾರರು ಇದಕ್ಕಾಗಿ ಹೆಚ್ಚು ಶ್ರಮ ಪಡುವ ಅಗತ್ಯವೇ ಇರುವುದಿಲ್ಲ. ಬದಲಿಗೆ ಈ ಸೇವೆ ಪಿಂಚಣಿದಾರರ ಮನೆ ಬಾಗಿಲಿಗೆ ಬರಲಿದೆ.
ಏನಿದು ಡಿಜಿಟಲ್ ಲೈಫ್ ಸರ್ಟಿಫಿಕೇಟ್?
ಪಿಂಚಣಿದಾರರಿಗೆ ನೀಡಲಾಗುವ ಆಧಾರ್ ಆಧಾರಿತ ಬಯೋಮೆಟ್ರಿಕ್ ಪ್ರಮಾಣಪತ್ರವೇ 'ಡಿಜಿಟಲ್ ಲೈಫ್ ಸರ್ಟಿಫಿಕೇಟ್'. ಪ್ರತಿಯೊಂದು ಪ್ರಮಾಣಪತ್ರವು ಪ್ರಮಾಣ್-ಐಡಿ ಎಂಬ ವಿಶಿಷ್ಟ ಗುರುತನ್ನು ಹೊಂದಿರುತ್ತದೆ.
ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಪಿಂಚಣಿದಾರರು ಇನ್ನು ಮುಂದೆ ಕಾಗದದ ಪ್ರಮಾಣಪತ್ರಗಳನ್ನು ಸಲ್ಲಿಸಲು ಅಥವಾ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಮಾಡಿಸಲು ಬ್ಯಾಂಕುಗಳು ಅಥವಾ ಇಪಿಎಫ್‌ಒ ಕಚೇರಿಗಳಿಗೆ ಭೇಟಿ ನೀಡಬೇಕಾಗಿಲ್ಲ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಸಹಯೋಗದೊಂದಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ ಹೊಸ ಪಾಲುದಾರಿಕೆಯು ಇಪಿಎಫ್‌ಒ ಪಿಂಚಣಿದಾರರು ತಮ್ಮ ಡಿಜಿಟಲ್ ಲೈಫ್ ಪ್ರಮಾಣಪತ್ರಗಳನ್ನು ಮನೆಯಿಂದಲೇ ಸಲ್ಲಿಸಲು ಸಹಾಯ ಮಾಡುತ್ತದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ತನ್ನ 1.65 ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿಗಳು ಮತ್ತು 3 ಲಕ್ಷಕ್ಕೂ ಹೆಚ್ಚು ಅಂಚೆ ಸೇವಾ ಪೂರೈಕೆದಾರರ ಜಾಲದ ಮೂಲಕ ಈ ಸೇವೆಯನ್ನು ಒದಗಿಸಲಿದೆ. ಐಪಿಪಿಬಿ ಸಿಬ್ಬಂದಿ ಮುಖ ಮತ್ತು ಬೆರಳಚ್ಚು ದೃಢೀಕರಣವನ್ನು ಬೆಂಬಲಿಸುವ ಸಾಧನದೊಂದಿಗೆ ಪಿಂಚಣಿದಾರರ ಮನೆಗೆ ಭೇಟಿ ನೀಡಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ತಯಾರಿಸಲು ಹಾಗೂ ಅದನ್ನು ಸಲ್ಲಿಸಲು ಅಗತ್ಯ ನೆರವು ನೀಡಲಿದ್ದಾರೆ.
ಇದನ್ನೂ ಓದಿ- 8th Pay Commission: ಕೇಂದ್ರ ಸರ್ಕಾರಿ ನೌಕರರ ವೇತನ 157% ಏರಿಕೆ!
ಈ ಸೇವೆ ಸಂಪೂರ್ಣ ಉಚಿತ:
ಇನ್ನೊಂದು ಮುಖ್ಯವಾದ ವಿಚಾರವೆಂದರೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಪಿಂಚಣಿದಾರರ ಮನೆ ಬಾಗಿಲಿಗೆ ಬಂದು ಒದಗಿಸುವ ಈ ಸೇವೆಗೆ ಯಾವುದೇ ರೀತಿಯ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಐಪಿಪಿಬಿ ಈ ಸೇವೆಯನ್ನು ಸಂಪೂರ್ಣ ಉಚಿತವಾಗಿ ಒದಗಿಸುತ್ತದೆ.
ಜೀವನ ಪ್ರಮಾಣಪತ್ರ ಏಕೆ ಅಗತ್ಯ? ಯಾವಾಗ ಸಲ್ಲಿಸಬೇಕು?
ಪ್ರತಿ ವರ್ಷ, ಪಿಂಚಣಿದಾರರು ತಾವು ಜೀವಂತವಾಗಿದ್ದೇವೆ ಎಂಬುದಕ್ಕೆ ಪುರಾವೆಯಾಗಿ ಬ್ಯಾಂಕ್, ಅಂಚೆ ಕಚೇರಿ ಅಥವಾ ಯಾವುದೇ ಪಿಂಚಣಿ ನೀಡುವ ಸಂಸ್ಥೆಗೆ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಜೀವನ ಪ್ರಮಾಣಪತ್ರವನ್ನು ಪರಿಶೀಲಿಸಿದ ನಂತರ, ಪಿಂಚಣಿಯನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಪಿಂಚಣಿದಾರರು ಯಾವುದೇ ವಿರಾಮವಿಲ್ಲದೆ ಪಿಂಚಣಿ ಪಡೆಯುವುದನ್ನು ಮುಂದುವರಿಸಲು ನವೆಂಬರ್ 1 ರಿಂದ ನವೆಂಬರ್ 30 ರವರೆಗೆ ತಮ್ಮ ಜೀವನ ಪ್ರಮಾಣ ಪತ್ರ/ಡಿಜಿಟಲ್ ಲೈಫ್ ಸರ್ಟಿಫಿಕೇಟ್ (DLC) ಅನ್ನು ಸಲ್ಲಿಸಬೇಕು. 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಅಕ್ಟೋಬರ್ 1, 2025 ರಿಂದ ತಮ್ಮ ಲೈಫ್ ಸರ್ಟಿಫಿಕೇಟ್ ಅನ್ನು ಮೊದಲೇ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸೇವೆ:
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) 2020 ರಲ್ಲಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಡೋರ್‌ಸ್ಟೆಪ್ ಸೇವೆಯನ್ನು ಪ್ರಾರಂಭಿಸಿತು. ಈ ಸೇವೆಯು ಪಿಂಚಣಿದಾರರು ಆಧಾರ್ ಆಧಾರಿತ ಬಯೋಮೆಟ್ರಿಕ್ ಪರಿಶೀಲನೆಯನ್ನು ಬಳಸಿಕೊಂಡು ತ್ವರಿತವಾಗಿ ಜೀವ ಪುರಾವೆಯನ್ನು ಸಲ್ಲಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ- EPFO ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ಹಳೆಯ ವಿಧಾನದಿಂದ ಸಕ್ರಿಯವಾಗಲ್ಲ UAN
ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯುವುದು ಹೇಗೆ?
ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯುವುದು ತುಂಬಾ ಸುಲಭವಾಗಿದ್ದು ಪಿಂಚಣಿದಾರರು ಸಿಎಸ್‌ಸಿಗಳು, ಬ್ಯಾಂಕುಗಳು ಮತ್ತು ಸರ್ಕಾರಿ ಕಚೇರಿಗಳು ನಡೆಸುವ ಲೈಫ್ ಪ್ರೂಫ್ ಸೆಂಟರ್‌ಗಳಿಂದ ಅದನ್ನು ಪಡೆಯಬಹುದು. ಇಲ್ಲವೇ ಯಾವುದೇ ಪಿಸಿ, ಮೊಬೈಲ್ ಅಥವಾ ಟ್ಯಾಬ್ಲೆಟ್‌ನಲ್ಲಿ ಜೀವನ್ ಪ್ರಮಾಣ ಅಪ್ಲಿಕೇಶನ್ ಅನ್ನು ಸಹ ಬಳಸಬಹುದಾಗಿದೆ.









