EPFO PF Update: ಉದ್ಯೋಗ ಬದಲಾವಣೆಯ ನಂತರ ಈಗ 'ಪಿಎಫ್ ವರ್ಗಾವಣೆ' ತುಂಬಾ ಸುಲಭವಾಗಲಿದೆ. ಪಿಎಫ್ ವರ್ಗಾವಣೆಗಾಗಿ ಪದೇ ಪದೇ ಹೆಆರ್ ಬಳಿ ಅಲೆದಾಡುವ ಸಮಸ್ಯೆಯಿಂದ ಪರಿಹಾರ ನೀಡಲು ಹೊಸ ನಿಯಮ ರೂಪಿಸಿರುವ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಇದೀಗ ಈ ನಿಯಮವನ್ನು ಸರಳೀಕರಣಗೊಳಿಸಿದೆ.
ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರಿಗೆ ದೊಡ್ಡ ತಲೆಬಿಸಿ ಆಗಿದ್ದ 'ಪಿಎಫ್ ವರ್ಗಾವಣೆ'ಗೆ ಸಂಬಂಧಿಸಿದಂತೆ ಮಹತ್ವದ ಹೆಜ್ಜೆ ಇಟ್ಟಿರುವ ಇಪಿಎಫ್ಒ ಇದೀಗ ಒಂದೇ ಒಂದು ಕ್ಲಿಕ್‌ನಲ್ಲಿ ಸಮಸ್ಯೆಯನ್ನು ಪರಿಹರಿಸಲು ಹೊಸ ವ್ಯವಸ್ಥೆಯನ್ನು ಕಲ್ಪಿಸಿದೆ.
ವಾಸ್ತವವಾಗಿ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ ಉದ್ಯೋಗ ಬದಲಾಯಿಸಿದಾಗ 'ಪಿಎಫ್ ಖಾತೆ' ವರ್ಗಾಯಿಸಬೇಕಾಗುತ್ತದೆ. ಇಲ್ಲದಿದ್ದರೆ, ನಿಮ್ಮ ಪಿಎಫ್ ಖಾತೆಯಲ್ಲಿ ಬಡ್ಡಿ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಬಹುದು.
ಇದನ್ನೂ ಓದಿ- 8th Pay Commission: ಕೇಂದ್ರ ಸರ್ಕಾರಿ ನೌಕರರ ವೇತನ 157% ಏರಿಕೆ!
ಈ ಹಿಂದೆ, ಉದ್ಯೋಗ ಬದಲಾವಣೆಯ ನಂತರ, ಉದ್ಯೋಗಿ ಪಿಎಫ್ ವರ್ಗಾವಣೆಗಾಗಿ ಫಾರ್ಮ್ -13 ಅನ್ನು ಭರ್ತಿ ಮಾಡಿ ಹಳೆಯ ಮತ್ತು ಹೊಸ ಉದ್ಯೋಗದಾತರಿಗೆ ಸಲ್ಲಿಸಬೇಕಾಗಿತ್ತು. ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು 1 ರಿಂದ 2 ತಿಂಗಳುಗಳು ಬೇಕಾಗುತ್ತಿತ್ತು. ಒಂದೊಮ್ಮೆ ಕ್ಲೈಮ್ ತಿರಸ್ಕರಿಸಲ್ಪಟ್ಟರೆ ಅಥವಾ ಬಾಕಿ ಉಳಿದಿದ್ದಲ್ಲಿ ಪಿಎಫ್ ಖಾತೆಗೆ ಪಾವತಿಯನ್ನು ನಿಲ್ಲಿಸಲಾಗುತ್ತಿತ್ತು. ಇದರಿಂದಾಗಿ ಉದ್ಯೋಗಿ ತಮ್ಮ ಪಿಎಫ್ ಖಾತೆಯಲ್ಲಿನ ವಹಿವಾಟುಗಳನ್ನು ಸರಾಗಗೊಳಿಸಲು ಪದೇ ಪದೇ ಎಚ್‌ಆರ್ ಬಳಿ ತೆರಳಿ ವಿನಂತಿ ಸಲ್ಲಿಸಬೇಕಾಗುತ್ತಿತ್ತು.
ಪ್ರಸ್ತುತ, ಲಕ್ಷಾಂತರ ಉದ್ಯೋಗಿಗಳ ಅನುಕೂಲಕ್ಕಾಗಿ, ಇಪಿಎಫ್‌ಒ ಈ ನಿಯಮದಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಈಗ ಈ ಪ್ರಕ್ರಿಯೆಯು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ. ಯಾವುದೇ ಉದ್ಯೋಗಿ ಹೊಸ ಕೆಲಸಕ್ಕೆ ಸೇರಿದ ತಕ್ಷಣ, ಅವರ ಯುಎಎನ್ ಅನ್ನು ಹೊಸ ಖಾತೆಗೆ ಲಿಂಕ್ ಮಾಡಲಾಗುತ್ತದೆ. ಅದರ ನಂತರ, ನೌಕರರ ಹಳೆಯ ಪಿಎಫ್ ಖಾತೆಯನ್ನ ಕೂಡಲೇ ಹೊಸ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಇಪಿಎಫ್ಒ ಪೋರ್ಟಲ್ ಆಧಾರ್ ಮತ್ತು ಕೆವೈಸಿ ಮೂಲಕ ಸ್ವಯಂ ಪರಿಶೀಲನೆಯನ್ನು ಮಾಡುತ್ತದೆ. ಇದರಲ್ಲಿ ನಿಮ್ಮ ಹಳೆಯ ಪಿಎಫ್ ಬ್ಯಾಲೆನ್ಸ್ ಸ್ವಯಂಚಾಲಿತವಾಗಿ ವರ್ಗಾವಣೆಯಾಗುತ್ತದೆ. ಇಪಿಎಫ್ಒ ಹೊಸ ನಿಯಮದ ಬಹು ಮುಖ್ಯವಾದ ವಿಷಯವೆಂದರೆ ಈ ಪ್ರಕ್ರಿಯೆಯು ಕೇವಲ 3 ರಿಂದ 5 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ.
ಇದನ್ನೂ ಓದಿ- EPFO: ಪಿಂಚಣಿದಾರರಿಗೆ ಹೊಸ ಸೌಕರ್ಯ 'ಡಿಜಿಟಲ್ ಲೈಫ್ ಸರ್ಟಿಫಿಕೇಟ್' ಸಲ್ಲಿಸಲು ಇಲ್ಲಿದೆ ಸುಲಭ ಮಾರ್ಗ
ಇಪಿಎಫ್ಒ ಹೊಸ ನಿಯಮದ ಅಡಿಯಲ್ಲಿ ಉದ್ಯೋಗಸ್ಥರಿಗೆ ತಮ್ಮ ಪಿಎಫ್ ಖಾತೆಯನ್ನು ವರ್ಗಾಯಿಸಲು ಯಾವುದೇ ರೀತಿಯ ದಾಖಲೆಗಳು ಅಥವಾ ಯಾರ ಸಹಿಯೂ ಅಗತ್ಯವಿಲ್ಲ. ನೀವು ನೇರವಾಗಿ ನಿಮ್ಮ ಖಾತೆಯನ್ನು ನಿಯಂತ್ರಿಸಬಹುದು. ಆದಾಗ್ಯೂ, ಇಪಿಎಫ್ಒ ಪೋರ್ಟಲ್‌ನಲ್ಲಿ ಈ ಹೊಸ ನಿಯಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು, ನೌಕರರು ಕೆಲವು ಅಂಶಗಳ ಬಗ್ಗೆ ನಿಗಾವಹಿಸಬೇಕಾಗುತ್ತದೆ. ಉದಾಹರಣೆಗೆ, ನೌಕರರ ಯುಎಎನ್ ಸಕ್ರಿಯವಾಗಿರಬೇಕು ಮತ್ತು ಅದು ಆಧಾರ್‌ಗೆ ಲಿಂಕ್ ಆಗಿರಬೇಕು. ಇದರೊಂದಿಗೆ, ಪಿಎಫ್ ಖಾತೆಯ ಕೆವೈಸಿ ಅನ್ನು ಸಹ ನವೀಕರಿಸಿರುವುದು ಅಗತ್ಯವಾಗಿದೆ.









