)
EPFO News: ಸರ್ಕಾರಿ ಉದ್ಯೋಗವಿರಲಿ ಅಥವಾ ಖಾಸಗಿ ನೌಕರಿ ಇರಲಿ ಭಾರತದಲ್ಲಿ ವೇತನ ಪಡೆಯುವ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ (ಇಪಿಎಫ್) ಒಂದು ನಿರ್ಣಾಯಕ ಉಳಿತಾಯ ಯೋಜನೆ ಆಗಿದೆ. ನಿವೃತ್ತಿ ಬದುಕನ್ನು ಆರ್ಥಿಕವಾಗಿ ಸುಭದ್ರಗೊಳಿಸುವ ಇಪಿಎಫ್ಒದಲ್ಲಿ ಪಿಎಫ್ ಹಣವನ್ನು ಹಿಂಪಡೆಯುವುದು ಈಗ ತುಂಬಾ ಸುಲಭವಾಗಿದೆ.
ವಾಸ್ತವವಾಗಿ, ಈ ಮೊದಲು ಪಿಎಫ್ ಹಣವನ್ನು ವಿತ್ ಡ್ರಾ ಮಾಡಲು ಪದೇ ಪದೇ ಇಪಿಎಫ್ಒ ಕಚೇರಿಗೆ ಅಲೆಯಬೇಕಿತ್ತು. ಇಲ್ಲವೇ, ಉದ್ಯೋಗದಾತರನ್ನೇ ಅವಲಂಬಿಸಬೇಕಾಗಿತ್ತು. ಆದರೆ, ಡಿಜಿಟಲ್ ಪ್ರಗತಿಯೊಂದಿಗೆ ಇದೀಗ ಇಪಿಎಫ್ಒ ಸಂಬಂಧಿತ ಬಹುತೇಕ ಕೆಲಸಗಳನ್ನು ಆನ್ಲೈನ್ನಲ್ಲಿ ಸುಲಭವಾಗಿ ಪೂರ್ಣಗೊಳಿಸಬಹುದು.
ನಿವೃತ್ತಿ ಬಳಿಕ ಮಾತ್ರವಲ್ಲ ಉದ್ಯೋಗ ಬದಲಾಯಿಸಿದಾಗ ಇಲ್ಲವೇ ಆರ್ಥಿಕ ತುರ್ತುಪರಿಸ್ಥಿತಿಯಂತಹ ಪರಿಸ್ಥಿತಿಗಳಲ್ಲಿ ಇಪಿಎಫ್ಒದಲ್ಲಿ ಹೂಡಿಕೆ ಮಾಡಿರುವ ಪಿಎಫ್ ಖಾತೆಯಿಂದ ಹಣವನ್ನು ಸುಲಭವಾಗಿ ಹಿಂಪಡೆಯಬಹುದು. ಇದಕ್ಕಾಗಿ ಆಧಾರ್, ಪ್ಯಾನ್ ಮತ್ತು ಬ್ಯಾಂಕ್ ವಿವರಗಳನ್ನು ಲಿಂಕ್ ಮಾಡಿ ನಿಮ್ಮ ಕೆವೈಸಿ ಪೂರ್ಣಗೊಳಿಸಿರುವುದು ಅಗತ್ಯವಾಗಿದೆ.
ಆನ್ಲೈನ್ನಲ್ಲಿ ಪಿಎಫ್ ಹಣವನ್ನು ವಿತ್ ಡ್ರಾ ಮಾಡಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ:
ಹಂತ-1: ಇಪಿಎಫ್ಒ ಸದಸ್ಯರ ಪೋರ್ಟಲ್ಗೆ ಭೇಟಿ ನೀಡಿ, UAN ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ. ಇದಕ್ಕಾಗಿ, ಒಟಿಪಿ ಆಧಾರಿತ ಲಾಗಿನ್ ಲಭ್ಯವಿದೆ.
ಹಂತ-2: ಪಿಎಫ್ ಹಿಂಪಡೆಯುವಿಕೆ ಕ್ಲೈಮ್ ಸಲ್ಲಿಸಿ. ಇದರಲ್ಲಿ ಅರ್ಹತಾನುಸಾರ ನಿಮಗೆ ಅನ್ವಯಿಸುವ ಫಾರ್ಮ್ ಕ್ಲಿಕ್ ಮಾಡಿ. ಕ್ಲೈಮ್ (ಫಾರ್ಮ್-31, 19 & 10C) ಸಲ್ಲಿಸಿ.
* ಪೂರ್ಣ ಸೆಟಲ್ಮೆಂಟ್ (ಫಾರ್ಮ್ 19) – ಅಂತಿಮ ಪಿಎಫ್ ಹಿಂಪಡೆಯುವಿಕೆಗೆ.
* ಭಾಗಶಃ ಹಿಂಪಡೆಯುವಿಕೆ (ಫಾರ್ಮ್ 31) - ತುರ್ತು ಪರಿಸ್ಥಿತಿಗಳಿಗಾಗಿ.
* ಪಿಂಚಣಿ ಹಿಂಪಡೆಯುವಿಕೆ (ಫಾರ್ಮ್ 10C) - ಇಪಿಎಸ್ಗೆ ಅರ್ಹರಾಗಿದ್ದರೆ.
ಹಂತ-3: ನೀವಿನ್ನೂ ಉದ್ಯೋಗದಲ್ಲಿದ್ದರೆ ಉದ್ಯೋಗದಾತರು ನಿಮ್ಮ ವಿನಂತಿಯನ್ನು ಅನುಮೋದಿಸಬೇಕು. ನಂತರ ಇಪಿಎಫ್ಒ ವಿವರಗಳನ್ನು ಪರಿಶೀಲಿಸಿ ಪಾವತಿ ಪ್ರಕ್ರಿಯೆಯನ್ನು ಮುಂದುವರೆಸುತ್ತದೆ.
ಹಂತ-4: ಅನುಮೋದನೆ ಪಡೆದ ನಂತರ, ಮೊತ್ತವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ನಿಮ್ಮ ಖಾತೆ ಸ್ಟೇಟಸ್ ಯಾವ ಹಂತದಲ್ಲಿದೆ ಎಂದು ತಿಳಿಯಲು, ಇಪಿಎಫ್ಒ ಪೋರ್ಟಲ್ನಲ್ಲಿ "ಟ್ರ್ಯಾಕ್ ಕ್ಲೈಮ್ ಸ್ಟೇಟಸ್" ನಲ್ಲಿ ನಿಮ್ಮ ಕ್ಲೈಮ್ ಅನ್ನು ಟ್ರ್ಯಾಕ್ ಮಾಡಿ.
ಪಿಎಫ್ ವಿತ್ ಡ್ರಾ ಮಾಡುವ ಇತರ ಮಾರ್ಗಗಳೆಂದರೆ:
ಆಫ್ಲೈನ್:
ಆಫ್ಲೈನ್ ಮೂಲಕ ಪಿಎಫ್ ಹಣವನ್ನು ವಿತ್ ಡ್ರಾ ಮಾಡಲು ಮೊದಲು ಇಪಿಎಫ್ಒ ಕಚೇರಿಗೆ ಭೌತಿಕ ಫಾರ್ಮ್ 19/31 ಅನ್ನು ಸಲ್ಲಿಸಬೇಕಾಗುತ್ತದೆ.
ಉಮಾಂಗ್ ಆಪ್ :
ಉಮಾಂಗ್ ಆಪ್ನಲ್ಲಿ ಇಪಿಎಫ್ಒ ವಿಭಾಗಕ್ಕೆ ಹೋಗಿ ಪಿಎಫ್ ಹಣಕ್ಕಾಗಿ ಕ್ಲೈಮ್ ಮಾಡಬಹುದಾಗಿದೆ.
ಎಸ್ಎಂಎಸ್:
“EPFOWO UAN ENG” ಮಾದರಿಯಲ್ಲಿ "EPFOWO ಸ್ಪೇಸ್ ನಿಮ್ಮ ಯುಎಎನ್ ಸಂಖ್ಯೆ ನಮೂದಿಸಿ ಮತ್ತೆ ಸ್ಪೇಸ್ ನೀಡಿ ಇಂಗ್ಲಿಷ್ ಭಾಷೆಗಾಗಿ ENG ಎಂದು ಟೈಪ್ ಮಾಡಿ 7738299899 ಸಂಖ್ಯೆಗೆ ಎಸ್ಎಂಎಸ್ ಕಳುಹಿಸುವ ಮೂಲಕವೂ ನಿಮ್ಮ ಪಿಎಫ್ ಹಣವನ್ನು ವಿತ್ ಡ್ರಾ ಮಾಡಬಹುದು. ಆದರೆ, ಇಪಿಎಫ್ಒ ನೊಂದಾಯಿತ ಸಂಖ್ಯೆಯಿಂದ ಮಾತ್ರವೇ ಈ ಸೌಲಭ್ಯದ ಲಾಭವನ್ನು ಪಡೆಯಬಹುದು.