)
EPFO New Rules: ಇತ್ತೀಚಿಗೆ ನಡೆದ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (ಸಿಬಿಟಿ) ಸಭೆ ಬಳಿಗೆ ತನ್ನ ಕೋಟ್ಯಾಂತರ ಇಪಿಎಫ್ ಸದಸ್ಯರಿಗೆ ದೀಪಾವಳಿ ಉಡುಗೊರೆ ನೀಡಿದ್ದ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ)ಯ ಪಿಎಫ್ ಹಣ ಹಿಂಪಡೆಯುವಿಕೆಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಸಡಿಲಗೊಳಿಸಿತ್ತು. ಮಾತ್ರವಲ್ಲ, ಇನ್ನೂ ಕೆಲ ನಿಯಮಗಳನ್ನು ಕ್ಲಿಷ್ಟಗೊಳಿಸಿದೆ. ಹೀಗಾಗಿ, ಇದು ಇಪಿಎಫ್ ಸದಸ್ಯರಲ್ಲಿ ಭಾರೀ ಗೊಂದಲಕ್ಕೆ ಕಾರಣವಾಗಿದೆ. ತನ್ನ ಸದಸ್ಯರಲ್ಲಿ ಮೂಡಿರುವ ಗೊಂದಲಗಳಿಗೆ ಉತ್ತರ ನೀಡುವ ನಿಟ್ಟಿನಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಹೊಸ ನಿಯಮಗಳನ್ನು ವಿವರವಾಗಿ ವಿವರಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಯಾವ ಸಂದರ್ಭದಲ್ಲಿ ಇಪಿಎಫ್ ಸದಸ್ಯರು ತಮ್ಮ ಹಣವನ್ನು ತ್ವರಿತವಾಗಿ ಹಿಂಪಡೆಯಬಹುದು ಎಂಬ ಬಗ್ಗೆ ಸ್ಪಷ್ಟನೆಯನ್ನು ನೀಡಿದೆ.
ಭಾಗಶಃ ಹಿಂಪಡೆಯುವಿಕೆ ನಿಯಮಗಳಲ್ಲಿನ ಬದಲಾವಣೆ:
ಮೊನ್ನೆ ಮೊನ್ನೆ ನಡೆದ ಇಪಿಎಫ್ಒದ ಸಿಬಿಟಿ ಸಭೆಯಲ್ಲಿ ಇಪಿಎಫ್ ಸದಸ್ಯರಿಗೆ ಭಾಗಶಃ ಮೊತ್ತವನ್ನು ಹಿಂಪಡೆಯುವಿಕೆ ನಿಯಮಗಳಲ್ಲಿ ಪ್ರಮುಖ ಸಡಿಲಿಕೆಯನ್ನು ಘೋಷಿಸಿದೆ. ಈ ಬದಲಾವಣೆಯಲ್ಲಿ 13 ವಿಭಿನ್ನ ಭಾಗಶಃ ಹಿಂಪಡೆಯುವಿಕೆ ನಿಬಂಧನೆಗಳನ್ನು ಸರಳೀಕರಣಗೊಳಿಸಲಾಗಿದೆ. ನಿರ್ದಿಷ್ಟ ಮಾನದಂಡಗಳನ್ನು ಪೂರೈಸುವ ಮೂಲಕ ಉದ್ಯೋಗಿ ಮತ್ತು ಉದ್ಯೋಗದಾತರ ಪಾಲುಗಳನ್ನೂ ಒಳಗೊಂಡಂತೆ ಇಪಿಎಫ್ಒ ಚಂದಾದಾರರು ಭಾಗಶಃ ಹಿಂಪಡೆಯುವಿಕೆಯ ಅಡಿಯಲ್ಲಿ ಶೇ.75ರಷ್ಟು ಹಣ ಹಿಂಪಡೆಯಲು ಸಾಧ್ಯವಾಗುತ್ತದೆ.
ಭಾಗಶಃ ಹಿಂಪಡೆಯುವಿಕೆಗೆ ಕನಿಷ್ಠ ಸೇವಾವಧಿ ಇಳಿಕೆ:
ಈ ಹಿಂದೆ, ಇಪಿಎಫ್ ಮೊತ್ತದ ಭಾಗಶಃ ಹಣವನ್ನು ಹಿಂಪಡೆಯಲು ಕನಿಷ್ಠ ಸೇವಾ ಅವಧಿಯನ್ನು ಗರಿಷ್ಠ ಅವಧಿ 7 ವರ್ಷಗಳವರೆಗೆ ನಿಗದಿಗೊಳಿಸಲಾಗಿತ್ತು. ಆದಾಗ್ಯೂ, ಈಗ ಎಲ್ಲಾ ಭಾಗಶಃ ಹಿಂಪಡೆಯುವಿಕೆಗಳಿಗೆ ಕನಿಷ್ಠ ಅವಧಿಯನ್ನು 12 ತಿಂಗಳುಗಳಿಗೆ (1 ವರ್ಷಕ್ಕೆ) ಇಳಿಸಲಾಗಿದೆ.
ಗಮನಾರ್ಹವಾಗಿ, ಈ ಹಿಂದೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ನಿಯಮಗಳ ಪ್ರಕಾರ, ಇಪಿಎಫ್ ಸದಸ್ಯರು ತಮ್ಮ ಪಿಎಫ್ ಕೊಡುಗೆಗಳು ಮತ್ತು ಬಡ್ಡಿಯ 50-100% ಮೊತ್ತವನ್ನು ಮಾತ್ರ ಹಿಂಪಡೆಯಲು ಅವಕಾಶವಿತ್ತು. ಇದೀಗ, ಇಪಿಎಫ್ಒ ಪ್ರಮುಖ ಬದಲಾವಣೆಯಿಂದಾಗಿ 75-100% ಹಣವನ್ನು ಹಿಂಪಡೆಯಲು ಅವಕಾಶವಿದೆ. ಇದು ಉದ್ಯೋಗಸ್ಥರು ಮತ್ತು ಉದ್ಯೋಗದಾತರ ಕೊಡುಗೆಗಳು ಮತ್ತದರ ಬಡ್ಡಿ ಹಣ ಎಲ್ಲವನ್ನೂ ಒಳಗೊಂಡಿರುತ್ತದೆ.
ಪಿಎಫ್ ಹಣ 100% ವಿತ್ ಡ್ರಾ:
ನಿರುದ್ಯೋಗದ ಸಂದರ್ಭದಲ್ಲಿ ಪಿಎಫ್ ಹಣವನ್ನು ಶೇ. 100ರಷ್ಟು ಹಿಂಪಡೆಯಬಹುದು ಎಂದಿರುವ ಇಪಿಎಫ್ಒ ಇದಕ್ಕಾಗಿ 12 ತಿಂಗಳುಗಳ ಅವಧಿಯನ್ನು ಪೂರ್ಣಗೊಳಿಸಬೇಕು ಎಂಬ ನಿಯಮವನ್ನು ರೂಪಿಸಿದೆ. ಅರ್ಥಾತ್, ಯಾವುದೇ ಉದ್ಯೋಗಿಯು ಕೆಲಸ ಕಳೆದುಕೊಂಡ 12 ತಿಂಗಳ ನಂತರ ಇಪಿಎಫ್ ಮೊತ್ತವನ್ನು ಅವಧಿಗೂ ಮೊದಲೇ 100% ಹಿಂಪಡೆಯಬಹುದಾಗಿದೆ. ಆದಾಗ್ಯೂ, ಹೊಸ ನಿಯಮದ ಪ್ರಕಾರ, 75% ಪಿಎಫ್ ಮೊತ್ತವನ್ನು ತ್ವರಿತವಾಗಿ ಹಿಂಪಡೆಯಲು ಅವಕಾಶವಿದೆ.
ಶೇ.75 ಹಣ ಹಿಂಪಡೆಯುವಿಕೆಯ ಲಾಭ:
ಉದ್ಯೋಗಸ್ಥರು ದುಡಿಯುವ ಸಮಯದಲ್ಲಿ ತಮ್ಮ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಯ ಸಲುವಾಗಿ ಕೂಡಿಟ್ಟ ಹಣವನ್ನು ನಿರುದ್ಯೋಗ ಹಾಗೂ ಮತ್ತಿತರ ಅಗತ್ಯ ಸಂದರ್ಭಗಳಲ್ಲಿ ಸಂಪೂರ್ಣವಾಗಿ ಹಿಂಪಡೆಯದೆ ಕನಿಷ್ಠ 25% ಹಣವನ್ನಾದರೂ ಇಪಿಎಫ್ ಖಾತೆಯಲ್ಲಿ ಉಳಿಸುವುದರಿಂದ ಈ ಹಣಕ್ಕೆ ನಿಯಮಾನುಸಾರ ಬಡ್ಡಿಯನ್ನು ಪಡೆಯುವುದನ್ನು ಮುಂದುವರೆಸಬಹುದು.
ನಿರುದ್ಯೋಗ ಹೊರತುಪಡಿಸಿ ಇನ್ಯಾವ ಸಂದರ್ಭದಲ್ಲಿ 100% ಪಿಎಫ್ ಹಣ ಹಿಂಪಡೆಯಬಹುದು?
ಇಪಿಎಫ್ಒ ನೀಡಿರುವ ಮಾಹಿತಿಯ ಪ್ರಕಾರ, ನಿರುದ್ಯೋಗ ಹೊರತುಪಡಿಸಿ ಇಪಿಎಫ್ ಸದಸ್ಯರು 55ವರ್ಷಗಳು ತುಂಬಿದ ಬಳಿಕ, ನಿವೃತಿ ಸಂದರ್ಭದಲ್ಲಿ, ಕೆಲಸ ಮಾಡಲು ಅಸಮರ್ಥತೆ, ಕೆಲಸದಿಂದ ವಜಾಗೊಳ್ಳುವಿಕೆ, ಶಾಶ್ವತ ಅಂಗವೈಕಲ್ಯ, ಸ್ವಯಂಪ್ರೇರಿತ ನಿವೃತ್ತಿ ಅಥವಾ ಶಾಶ್ವತವಾಗಿ ದೇಶ ತೊರೆಯುವ ಸಂದರ್ಭಗಳಲ್ಲಿ ತಮ್ಮ ಪಿಎಫ್ನ ಸಂಪೂರ್ಣ 100% ಹಣವನ್ನು ಹಿಂಪಡೆಯಬಹುದಾಗಿದೆ.