)
EPF Rules: ಸರ್ಕಾರಿ ನೌಕರರಿರಲಿ ಅಥವಾ ಖಾಸಗಿ ನೌಕರರಿರಲಿ ಭಾರತದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಉದ್ಯೋಗಿಯೂ ಕೂಡ ನೌಕರರ ಭವಿಷ್ಯ ನಿಧಿ ಸಂಸ್ಥೆ-ಇಪಿಎಫ್ಒದಲ್ಲಿ ಖಾತೆಯನ್ನು ಹೊಂದಿರುತ್ತಾರೆ. ಜೊತೆಗೆ ಪ್ರತಿ ತಿಂಗಳು ತಮ್ಮ ವೇತನದ ಒಂದು ನಿರ್ದಿಷ್ಟ ಭಾಗವನ್ನು ಇದರಲ್ಲಿ ಹೂಡಿಕೆ ಮಾಡುತ್ತಾರೆ. ಈ ಹೂಡಿಕೆ ಹಣಕ್ಕೆ ಸರ್ಕಾರ ಬಡ್ಡಿಯನ್ನು ಸಹ ಒದಗಿಸುತ್ತದೆ. ಹಾಗಾಗಿಯೇ, ಪಿಎಫ್ ಹೂಡಿಕೆ ನಿವೃತ್ತಿ ಬದುಕಿನಲ್ಲಿ ಅತ್ಯುತ್ತಮ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.
ಸಾಮಾನ್ಯವಾಗಿ, ಕೆಲಸ ತೊರೆದ ಭವಿಷ್ಯ ನಿಧಿ (PF) ಹಣಕ್ಕೆ ಬಡ್ಡಿ ದೊರೆಯುವುದಿಲ್ಲ ಎಂದು ಎಲ್ಲರೂ ಭಾವಿಸುತ್ತಾರೆ. ಆದರಿದು ತಪ್ಪು ಕಲ್ಪನೆ. ಪಿಎಫ್ ಖಾತೆಗೆ ಕೊಡುಗೆ ಪಾವತಿ ಸ್ಥಗಿತಗೊಂಡ ಬಳಿಕವೂ ಇಪಿಎಫ್ ಸೀಮಿತ ಅವಧಿಯವರೆಗೆ ಬಡ್ಡಿ ಸೌಲಭ್ಯವನ್ನು ನೀಡುವುದನ್ನು ಮುಂದುವರೆಸುತ್ತದೆ.
ಕೆಲಸ ಬಿಟ್ಟ ಎಷ್ಟು ಸಮಯದವರೆಗೆ ಸಿಗುತ್ತೆ ಬಡ್ಡಿ?
ಇಪಿಎಫ್ಒದಲ್ಲಿ ಪಿಎಫ್ ಕೊನೆಯ ಕೊಡುಗೆ ಬಳಿಕ ಇಪಿಎಫ್ ಬ್ಯಾಲೆನ್ಸ್ ಮೇಲೆ ಬರೋಬ್ಬರಿ 36 ತಿಂಗಳುಗಳವರೆಗೆ ಎಂದರೆ ಸಂಪೂರ್ಣ ಮೂರು ವರ್ಷಗಳ ಕಾಲ ಬಡ್ಡಿ ಹಣವನ್ನು ನೀಡಲಾಗುತ್ತದೆ. ಮೂರು ವರ್ಷಗಳ ಬಳಿಕ ಈ ಖಾತೆಯನ್ನು ನಿಷ್ಕ್ರಿಯ ಎಂದು ಪರಿಗಣಿಸಲಾಗುತ್ತದೆ. ಆ ಬಳಿಕ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ಬಡ್ಡಿ ಸ್ಥಗಿತಗೊಳ್ಳುತ್ತದೆ.
ಈ ನಿಯಮ ಕೇವಲ ಮಧ್ಯದಲ್ಲಿ ಕೆಲಸ ಬಿಟ್ಟ ನೌಕರರಿಗೆ ಮಾತ್ರವಲ್ಲ ನಿವೃತ್ತರಾದವರಿಗೂ ಅನ್ವಯಿಸುತ್ತದೆ. ನಿವೃತ್ತಿಯ ಬಳಿಕವೂ ಕೂಡ ಮೂರು ವರ್ಷಗಳವರೆಗೆ ಇಪಿಎಫ್ ಖಾತೆಯಲ್ಲಿ ಬಡ್ಡಿ ಒದಗಿಸಲಾಗುತ್ತದೆ. ಬಳಿಕ ಇಪಿಎಫ್ ಖಾತೆಗೆ ಬಡ್ಡಿ ಸ್ಥಗಿತಗೊಳ್ಳುತ್ತದೆಯೇ ಹೊರತು ಈ ಹಂತದಲ್ಲಿ ಪಿಎಫ್ ಬ್ಯಾಲೆನ್ಸ್ ಹಣ ಸುರಕ್ಷಿತವಾಗಿರುತ್ತದೆ.
ಪಿಎಫ್ ಹಣದ ಮೇಲೆ ಸಿಗುವ ಬಡ್ಡಿ ಎಷ್ಟು?
ಇಪಿಎಫ್ಗೆ ಕೊಡುಗೆಗಳನ್ನು ಎರಡೂ ಕಡೆಯಿಂದ ಎಂದರೆ ನೌಕರರು ಮತ್ತು ಉದ್ಯೋಗದಾತರು ಇಬ್ಬರೂ ಪ್ರತಿ ತಿಂಗಳು ಮೂಲ ವೇತನದ ಒಂದು ಭಾಗವನ್ನು ಇಪಿಎಫ್ಒ ಖಾತೆಗೆ ಜಮಾ ಮಾಡುತ್ತಾರೆ. ಪ್ರಸ್ತುತ, 2024-25ನೇ ಹಣಕಾಸು ವರ್ಷದಲ್ಲಿ ಇಪಿಎಫ್ ಬ್ಯಾಲೆನ್ಸ್ ಗೆ 8.25% ಬಡ್ಡಿಯನ್ನು ನೀಡಲಾಗುತ್ತಿದೆ. ಪಿಎಫ್ ಕೊಡುಗೆ ಮತ್ತು ಅದರ ಬಡ್ಡಿ ಒಟ್ಟು ಮೊತ್ತವನ್ನು ಪಿಎಫ್ ಬ್ಯಾಲೆನ್ಸ್ ಆಗಿ ಪರಿಗಣಿಸಲಾಗುತ್ತದೆ.