)
EPFO Wage Ceiling Hike: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗಾಗಿ ಶೀಘ್ರದಲ್ಲೇ ಮಹತ್ವದ ಘೋಷಣೆ ಮಾಡುವ ನಿರೀಕ್ಷೆಯಿದೆ. ಉದ್ಯೋಗಿಗಳ ದೀರ್ಘಕಾಲದ ಬೇಡಿಕೆಯಾದ ಇಪಿಎಫ್ಒ ಕಡ್ಡಾಯ ಭವಿಷ್ಯ ನಿಧಿ ಮತ್ತು ಪಿಂಚಣಿ ಕೊಡುಗೆಗಳಿಗೆ ವೇತನ ಮಿತಿಯನ್ನು ಹೆಚ್ಚಿಸುವ ಬಗ್ಗೆ ಮೋದಿ ಸರ್ಕಾರ ಪರಿಷ್ಕರಿಸುತ್ತಿದೆ. ಮೂಲಗಳಿಂದ ಲಭ್ಯವಿರುವ ಮಾಹಿತಿಗಳ ಪ್ರಕಾರ, ಇಪಿಎಫ್ ವೇತನ ಮಿತಿ ಪ್ರಸ್ತುತ 15,000 ಇದ್ದು, ಇದನ್ನು 25,000ರೂ.ವರೆಗೆ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಗಮನಾರ್ಹವಾಗಿ ಸೆಪ್ಟೆಂಬರ್ 01, 2014ರಲ್ಲಿ ಇಪಿಎಫ್ ಮಿತಿಯನ್ನು ಪರಿಷ್ಕರಿಸಲಾಗಿತ್ತು. ಎಂದರೆ ಹತ್ತು ವರ್ಷಗಳ ಹಿಂದೆ ಇಪಿಎಫ್ಒ ಇಪಿಎಫ್ ವೇತನ ಮಿತಿಯನ್ನು 6,500ರೂ. ಗಳಿಂದ 15,000ರೂ.ಗಳಿಗೆ ಹೆಚ್ಚಿಸಲಾಗಿತ್ತು. ಇದೀಗ, ಈ ಮಿತಿಯನ್ನು 25,000ರೂ.ವರೆಗೆ ಹೆಚ್ಚಿಸಲು ಚರ್ಚಿಸಲಾಗುತ್ತಿದೆ. ಇಪಿಎಫ್ ವೇತನ ಮಿತಿಯನ್ನು ಹೆಚ್ಚಿಸುವ ಕ್ರಮವು ಪಿಂಚಣಿ ಭದ್ರತೆಯನ್ನು ಹೆಚ್ಚಿಸಲು ಮತ್ತು ಲಕ್ಷಾಂತರ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ವಿಸ್ತರಿಸಲು ವ್ಯಾಪಕ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ.
ವಾಸ್ತವವಾಗಿ, ಈಗಿರುವ ನಿಯಮಗಳ ಪ್ರಕಾರ ತಿಂಗಳಿಗೆ 15,000 ರೂ.ಗಳವರೆಗೆ ಮೂಲ ವೇತನ ಹೊಂದಿರುವ ಉದ್ಯೋಗಿಗಳಿಗೆ ಮಾತ್ರ ಇಪಿಎಫ್ ಸದಸ್ಯತ್ವ ಕಡ್ಡಾಯವಾಗಿದೆ. ಈ ಮಿತಿಗಿಂತ ಹೆಚ್ಚು ಆದಾಯ ಗಳಿಸುವವರು ಇದರಿಂದ ಹೊರಗುಳಿಯಬಹುದು. ಕಂಪನಿಗಳು ಅವರನ್ನು ಕಡ್ಡಾಯವಾಗಿ ಇಪಿಎಫ್ನಲ್ಲಿ ಸೇರಿಸಿಕೊಳ್ಳಲೇಬೇಕು ಎಂಬುದು ಅನಿವಾರ್ಯವಲ್ಲ. ಇದು ಗಮನಾರ್ಹ ಪಿಂಚಣಿ ಅಂತರಕ್ಕೆ ಕಾರಣವಾಗುತ್ತದೆ. ಆದರೆ, ಭವಿಷ್ಯದಲ್ಲಿ ಇಪಿಎಫ್ಒ ಮಿತಿಯನ್ನು ತಿಂಗಳಿಗೆ 25,000 ರೂ.ಗೆ ಹೆಚ್ಚಿಸಲಾಗುವುದು ಎಂದು ಹೇಳಲಾಗುತ್ತಿದ್ದು ಇದು ಒಂದು ಪ್ರಮುಖ ಬದಲಾವಣೆಯಾಗಲಿದೆ. ಏಕೆಂದರೆ ಇದು ಖಾಸಗಿ ವಲಯದ ಎಲ್ಲಾ ನೌಕರರನ್ನು ಇಪಿಎಫ್ ಅಡಿಯಲ್ಲಿ ತರುತ್ತದೆ. ಇದು ನೌಕರರ ಇಪಿಎಫ್ ಮತ್ತು ಇಪಿಎಸ್ ಪಿಂಚಣಿ ಎರಡರಲ್ಲೂ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಪ್ರಸ್ತುತ ವ್ಯವಸ್ಥೆಯಡಿಯಲ್ಲಿ, ತಿಂಗಳಿಗೆ ರೂ. 15,000 ಕ್ಕಿಂತ ಹೆಚ್ಚು ಆದಾಯ ಗಳಿಸುವ ಉದ್ಯೋಗಿಗಳಲ್ಲಿ ಹೆಚ್ಚಿನವರು ಪಿಂಚಣಿ ಯೋಜನೆಯಿಂದ ಹೊರಗುಳಿದಿದ್ದಾರೆ. ಇಪಿಎಫ್ ಕೊಡುಗೆ ಅವರಿಗೆ ಕಡ್ಡಾಯವಲ್ಲದ ಕಾರಣ, ಹೆಚ್ಚಿನವರು ಇಪಿಎಫ್ ಕೊಡುಗೆ ನೀಡುವುದಿಲ್ಲ ಮತ್ತು ಇದರಿಂದಾಗಿ ಭವಿಷ್ಯದ ಆರ್ಥಿಕ ಭದ್ರತೆಯನ್ನು ಕಳೆದುಕೊಳ್ಳುತ್ತಾರೆ. ಮಿತಿಗಿಂತ ಸ್ವಲ್ಪ ಹೆಚ್ಚು ಆದಾಯ ಗಳಿಸುವ ಅನೇಕ ಖಾಸಗಿ ವಲಯದ ಉದ್ಯೋಗಿಗಳನ್ನು ಔಪಚಾರಿಕ ಪಿಂಚಣಿ ಯೋಜನೆಗಳಿಂದ ಹೊರಗುಳಿಯುವುದರಿಂದ ವೃದ್ಧಾಪ್ಯದಲ್ಲಿ ಅವರಿಗೆ ಯಾವುದೇ ಆರ್ಥಿಕ ಭದ್ರತೆ ದೊರೆಯುವುದಿಲ್ಲ.
ಇಪಿಎಫ್ಒ ಮುಂದಿನ ನಿರ್ಧಾರ ಯಾವಾಗ ಹೊರಬೀಳಲಿದೆ?
ಇಪಿಎಫ್ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ (ಸಿಬಿಟಿ) ಮುಂದಿನ ಸಭೆ ಮುಂದಿನ ವರ್ಷದ ಆರಂಭದಲ್ಲಿ ನಡೆಯುವ ನಿರೀಕ್ಷೆಯಿದೆ. ಈ ಸಭೆಯಲ್ಲಿ ಇಪಿಎಫ್ಒ ಮಹತ್ವದ ನಿರ್ಧಾರಕ್ಕೆ ಅನುಮೋದನೆ ದೊರೆಯುವ ಸಾಧ್ಯತೆಯಿದೆ. ಕಾರ್ಮಿಕ ಸಚಿವಾಲಯದ ಆಂತರಿಕ ಪರಿಶೀಲನೆಯು ಮಿತಿಯನ್ನು 10,000 ರೂ.ಗಳಷ್ಟು ಹೆಚ್ಚಿಸುವುದರಿಂದ 1 ಕೋಟಿಗೂ ಹೆಚ್ಚು ಹೆಚ್ಚು ಕಾರ್ಮಿಕರನ್ನು ಕಡ್ಡಾಯ ಇಪಿಎಫ್ ಮತ್ತು ಇಪಿಎಸ್ ವ್ಯಾಪ್ತಿಗೆ ತರಬಹುದು ಎಂದು ಆಶಿಸಲಾಗಿದೆ.