)
PVC Aadhaar Card: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಫ್ರೀ ಬಸ್ಸಿನಲ್ಲಿ ಸಂಚರಿಸುವ ಮಹಿಳೆಯರ ಸಾಮಾನ್ಯ ಸಮಸ್ಯೆ ಎಂದರೆ ಉದ್ದನೆಯ ಆಧಾರ್ ಕಾರ್ಡ್ ಕೊಂಡೊಯ್ಯುವುದು. ನಿಮ್ಮ ಈ ಸಮಸ್ಯೆಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ಸ್ವತಃ ಪರಿಹಾರವನ್ನು ಹೊಂದಿದೆ. ನೀವು ಉದ್ದುದ್ದ ಆಧಾರ್ ಕಾರ್ಡ್ ಹಿಡಿದು ಓಡಾಡುವ ಬದಲಿಗೆ ಎಟಿಎಂ ಮಾದರಿಯಂತೆ ಕಾಣುವ ಪಿವಿಸಿ ಆಧಾರ್ ಕಾರ್ಡ್ ಅನ್ನು ಪಡೆಯಬಹುದು.
ಸಾಮಾನ್ಯ ಆಧಾರ್ ಕಾರ್ಡ್ ನಂತೆಯೇ ಮಾನ್ಯತೆ ಹೊಂದಿರುವ ಈ ಪಿವಿಸಿ ಆಧಾರ್ ಕಾರ್ಡ್ ಸುರಕ್ಷಿತ ಕ್ಯೂಆರ್ ಕೋಡ್, ಹೊಲೋಗ್ರಾಂ, ಮೈಕ್ರೋ ಟೆಕ್ಸ್ಟ್ ಹಾಗೂ ಟ್ಯಾಂಪರ್ಪ್ರೂಫಿಂಗ್ಗಾಗಿ ಘೋಸ್ಟ್ ಇಮೇಜ್ನಂತಹ ಹಲವು ಸುಧಾರಿತಾ ಭದ್ರತಾ ವೈಶಿಷ್ಟ್ಯಗಳನ್ನೂ ಒಳಗೊಂಡಿರುತ್ತದೆ. ಮತ್ತೊಂದು ಪ್ರಮುಖ ವಿಚಾರವೆಂದರೆ ಪಿವಿಸಿ ಆಧಾರ್ ಕಾರ್ಡ್ ಪಡೆಯಲು ನೀವು ದಿನಗಟ್ಟಲೆ ಕಾಯುವ ಅವಶ್ಯಕತೆ ಇಲ್ಲ. ಬದಲಿಗೆ ಕೇವಲ ಹತ್ತೇ ಹತ್ತು ನಿಮಿಷಗಳಲ್ಲಿ ಪಿವಿಸಿ ಆಧಾರ್ ಕಾರ್ಡ್ ಪಡೆಯಬಹುದು.
ಪಿವಿಸಿ ಆಧಾರ್ ಕಾರ್ಡ್ ಪಡೆಯಲು ನೀವು ಮನೆಯಿಂದ ಹೊರ ಹೋಗುವ ಅಗತ್ಯವೂ ಇಲ್ಲ. ಇದಕ್ಕಾಗಿ ಹೆಚ್ಚು ಶ್ರಮಪಡುವ ಅಗತ್ಯವೂ ಇಲ್ಲ. ಬದಲಿಗೆ ಆನ್ಲೈನ್ನಲ್ಲಿ ಕೇವಲ ಐದು ಹಂತಗಳನ್ನು ಅನುಸರಿಸಿ ಪಿವಿಸಿ ಆಧಾರ್ ಕಾರ್ಡ್ ಪಡೆಯಬಹುದು.
ಆನ್ಲೈನ್ನಲ್ಲಿ ಪಿವಿಸಿ ಆಧಾರ್ ಕಾರ್ಡ್ ಪಡೆಯಲು ಹಂತ-ಹಂತದ ಪ್ರಕ್ರಿಯೆ:
ಹಂತ-1:
ಮೊದಲಿಗೆ ಯುಐಡಿಎಐ ಅಧಿಕೃತ uidai.gov.in ಪೋರ್ಟಲ್ಗೆ ಭೇಟಿ ನೀಡಿ. ಅಲ್ಲಿ "my aadhaar" ವಿಭಾದದಲ್ಲಿ "ಆರ್ಡರ್ ಪಿವಿಸಿ ಆಧಾರ್ ಕಾರ್ಡ್" ಆಯ್ಕೆಯನ್ನು ಆರಿಸಿ.
ಹಂತ-2:
ನಿಗದಿತ ಜಾಗದಲ್ಲಿ ನಿಮ್ಮ 12-ಅಂಕಿಗಳ ಆಧಾರ್ ನಂಬರ್ ಅಥವಾ 28 ಅಂಕಿಯ EID ನಮೂದಿಸಿ, ಕ್ಯಾಪ್ಚಾ ನಮೂದಿಸಿ, ಒಟಿಪಿ ಕಳುಹಿಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ-3:
ನಿಮ್ಮ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಸಂಖ್ಯೆಯನ್ನು ನಮೂದಿಸಿ. ಬಳಿಕ ಸ್ಕ್ರೀನ್ ಮೇಲೆ ಕಾಣುವ ನಿಮ್ಮ ಆಧಾರ್ ವಿವರಗಳನ್ನು ಪರಿಶೀಲಿಸಿ.
ಹಂತ-4:
ಆಧಾರ್ ವಿವರಗಳ ಪರಿಶೀಲನೆ ಬಳಿಕ ಎಲ್ಲವೂ ಸರಿಯಿದ್ದರೆ ಅದನ್ನು ದೃಢೀಕರಿಸಿ ಮತ್ತು ಪೇಮೆಂಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಜಿಎಸ್ಟಿ ಮತ್ತು ಸ್ಪೀಡ್ ಪೋಸ್ಟ್ ಒಳಗೊಂಡಂತೆ ಇದಕ್ಕಾಗಿ ತಗಲುವ ಶುಲ್ಕ 50 ರೂ. ಗಳು. ಇದನ್ನು ಪಾವತಿಸಿ.
ಹಂತ-5:
ಮೇಲಿನ ನಾಲ್ಕೂ ಹಂತಗಳನ್ನು ಪೂರ್ಣಗೊಳಿಸಿ ಪಾವತಿ ಯಶಸ್ವಿಯಾದ ನನತರ ರಶೀದಿ ರಚಿಸಲಾಗುತ್ತದೆ. ಕೂಡಲೇ ಒಂದು ಮಾದರಿ ಪ್ರತಿ ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಇದನ್ನುದ್ ಡೌನ್ಲೋಡ್ ಮಾಡಿಕೊಳ್ಳಿ. ಯುಐಡಿಎಐ ಐದು ಕೆಲಸದ ದಿನಗಳಲ್ಲಿ ನಿಮ್ಮ ನೋಂದಾಯಿತ ವಿಳಾಸಕ್ಕೆ ಪಿವಿಸಿ ಆಧಾರ್ ಕಾರ್ಡ್ ಅನ್ನು ಸ್ಪೀಡ್ ಪೋಸ್ಟ್ ಮಾಡುತ್ತದೆ.
ಈ ರೀತಿಯಾಗಿ ನೀವು ಸುಲಭವಾಗಿ ನಿಮ್ಮ ಉದ್ದದ ಆಧಾರ್ ಕಾರ್ಡ್ ಅನ್ನು ಪಿವಿಎಸ್ ಆಧಾರ್ ಕಾರ್ಡ್ ಗೆ ಬದಲಾಯಿಸಬಹುದು.