)
October 1 2025 Rule Changes: ಅಕ್ಟೋಬರ್ 01ರಿಂದ ಡಿಜಿಟಲ್ ಪಾವತಿಗಳು, ಬ್ಯಾಂಕಿಂಗ್, ಪಿಂಚಣಿಗಳಿಂದ ಹಿಡಿದು ಆನ್ಲೈನ್ ಗೇಮಿಂಗ್'ವರೆಗೆ ಹಣಕಾಸು ಸಂಬಂಧಿಸಿದಂತೆ ಹಲವು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಅದರಲ್ಲೂ ಜಿಎಸ್ಟಿ ಪರಿಷ್ಕರಣೆ ಹಿನ್ನಲೆಯಲ್ಲಿ ಕೆಲವು ನಿಯಮಗಳು ಬದಲಾಗುತ್ತಿದೆ. ಅಕ್ಟೋಬರ್ 01ರಿಂದ ಯಾವೆಲ್ಲಾ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಆ ಬದಲಾವಣೆಗಳು ಸಾರ್ವಜನಿಕರಿಗೆ ಅವರ ಬಜೆಟ್ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂದು ತಿಳಿಯೋಣ...
ಅಕ್ಟೋಬರ್ 01ರಿಂದ ಯಾವೆಲ್ಲಾ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ:-
ಬ್ಯಾಂಕಿಂಗ್ ನಿಯಮ:
ಅಕ್ಟೋಬರ್ 01, 2025ರಿಂದ HDFC, PNB, YES ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕುಗಳಲ್ಲಿ ಸೇವಾ ಶುಲ್ಕ, ಗ್ರಾಹಕ ಮಾನದಂಡಗಳನ್ನು ಪರಿಷ್ಕರಿಸಲಾಗುತ್ತಿದೆ. ಇದರೊಂದಿಗೆ ಗ್ರಾಹಕರ ಲಾಕರ್ಗಳಿಗೆ ಸಂಬಂಧಿಸಿದ ನಿಯಮಗಳನ್ನು ಸಹ ಪರಿಷ್ಕರಿಸಲಾಗುತ್ತಿದೆ. ಇದು ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿದೆ.
ಎನ್ಪಿಎಸ್ ಪಿಂಚಣಿ:
ಕೇಂದ್ರ ಸರ್ಕಾರಿ ನೌಕರರು ಹೊಸ ಏಕೀಕೃತ ಪಿಂಚಣಿ ವ್ಯವಸ್ಥೆಯನ್ನು (ಯುಪಿಎಸ್) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಗೆ ಬದಲಾಯಿಸಲು ಸೆಪ್ಟೆಂಬರ್ 30, 2025ರವರೆಗೆ ಅವಕಾಶವಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಯೋಜನೆಯಲ್ಲಿ ಸರ್ಕಾರೇತರ ಚಂದಾದಾರರು ತಮ್ಮ ಪಿಂಚಣಿ ನಿಧಿಯ ಶೇ. 100ರಷ್ಟು ಇಕ್ವಿಟಿ-ಲಿಂಕ್ಡ್ ಯೋಜನೆಗಳನ್ನು ಹೂಡಿಕೆ ಮಾಡಬಹುದಾಗಿದೆ.
ಯುಪಿಐ ನಿಯಮ:
ಅಕ್ಟೋಬರ್ 01ರಿಂದ ಯುಪಿಐ ನಿಯಮಗಳಲ್ಲಿ ಪ್ರಮುಖ ಬದಲಾವಣೆ ಆಗಲಿದೆ. ನಾಳೆಯಿಂದ (ಅಕ್ಟೋಬರ್ 01) ಭಾರತೀಯ ರಾಷ್ಟ್ರೀಯ ಪಾವತಿ ನಿಗಮ- NPCI ಪೀರ್-ಟು-ಪೀರ್ (P2P) ವೈಶಿಷ್ಟ್ಯವನ್ನು ಸ್ಥಗಿತಗೊಲಿಸಲಿದೆ. ಇದರಿಂದ ಯುಪಿಐ ಬಳಕೆದಾರರು ಇನ್ಮುಂದೆ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಪಾವತಿಗಳ ಮೂಲಕ ಹಣಕ್ಕಾಗಿ ವಿನಂತಿಸಲು ಸಾಧ್ಯವಿಲ್ಲ.
ರೈಲ್ವೆ ಟಿಕೆಟ್ ಬುಕಿಂಗ್ ನಿಯಮ ಬದಲಾವಣೆ:
ಅಕ್ಟೋಬರ್ 01ರಿಂದ ಭಾರತೀಯ ರೈಲ್ವೆ ಮತ್ತು ಐಆರ್ಸಿಟಿಸಿ ಆಧಾರ್-ಲಿಂಕ್ಡ್ ಟಿಕೆಟ್ ಬುಕಿಂಗ್ ಸೇವೆಯನ್ನು ಪರಿಚಯಿಸಲು ಸನ್ನದ್ಧವಾಗಿದೆ. ಆಧಾರ್-ಲಿಂಕ್ಡ್ ಟಿಕೆಟ್ ಬುಕಿಂಗ್ ವೈಶಿಷ್ಟ್ಯದಿಂದ ಪ್ರಯಾಣಿಕರು ವೇಗವಾಗಿ ಟಿಕೆಟ್ ಬುಕಿಂಗ್ ಮಾಡಬಹುದು. ಜೊತೆಗೆ ಆದ್ಯತೆ ಟಿಕೆಟ್ ಹಂಚಿಕೆಯ ಪ್ರಯೋಜನವೂ ಲಭ್ಯವಿದ್ದು, ಡಿಜಿಟಲ್ ಪರಿಶೀಲನಾ ಮಾರ್ಗಸೂಚಿಗಳಿಂದ ನಿರ್ದಿಷ್ಟ ವರ್ಗದ ಟಿಕೆಟ್ ಪಡೆಯಲು ಕೂಡ ಅನುಕೂಲವಾಗಲಿದೆ.
ಆನ್ಲೈನ್ ಗೇಮಿಂಗ್ ನಿಯಮ:
ಆನ್ಲೈನ್ ಗೇಮಿಂಗ್ ಸಂಬಂಧಿಸಿದಂತೆ ಅಕ್ಟೋಬರ್ 01ರಿಂದ ಜಾರಿಗೆ ಬರುವಂತೆ ಸರ್ಕಾರ ಹೊಸ ಕಾನೂನನ್ನು ಅನುಷ್ಠಾನಗೊಲಿಸುತ್ತಿದೆ. ಇದರ ಅಡಿಯಲ್ಲಿ ಮನಿ ಆಧಾರಿತ ಆನ್ಲೈನ್ ಗೇಮ್ಸ್, ಗ್ಯಾಮ್ಲಿಂಗ್ ಅಪ್ಲಿಕೇಶನ್'ಗಳು, ಬೆಟ್ಟಿಂಗ್ ಆಪ್'ಗಳನ್ನು ನಿಷೇಧಿಸಲಾಗುತ್ತದೆ. ಆದಾಗ್ಯೂ, ಇ-ಸ್ಪೋರ್ಟ್ಸ್ ಮತ್ತು ಕೌಶಲ್ಯ ಆಧಾರಿತ ಆಟಗಳನ್ನು ಕಾನೂನು ಬದ್ಧವಾಗಿ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಇದಕ್ಕಾಗಿ, ಪ್ರತಿಯೊಂದು ಆನ್ಲೈನ್ ಗೇಮಿಂಗ್ ಕಂಪನಿಗಳು ನಿಯಂತ್ರಕದಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಎಲ್ಪಿಜಿ ಬೆಲೆ ಪರಿಷ್ಕರಣೆ:
ಪ್ರತಿ ತಿಂಗಳ ಮೊದಲ ದಿನದಂದು ಎಲ್ಲಾ ತೈಲ ಕಂಪನಿಗಳು ಅನಿಲ ದರವನ್ನು ಪರಿಷ್ಕರಿಸುತ್ತವೆ. ಅದರಂತೆ, ಅಕ್ಟೋಬರ್ 01ರಂದು ಕೂಡ ಎಲ್ಪಿಜಿ ಬೆಲೆಯನ್ನು ಪರಿಷ್ಕರಿಸಲಾಗುತ್ತದೆ. ಈ ಎಲ್ಲಾ ನಿಯಮಗಳು ಜನಸಾಮಾನ್ಯರ ಜೇಬಿನ ಬೆಲೆ ನೇರ ಪರಿಣಾಮ ಬೀರುತ್ತವೆ.