)
Govt Shock To Ineligible Beneficiaries: ಬಿಪಿಎಲ್ ಕಾರ್ಡ್ ಸೇರಿದಂತೆ ವೃದ್ಯಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲರ ಮಾಸಾಶನದಂತಹ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳು ವ್ಯಾಪಕವಾಗಿ ದುರುಪಯೋಗವಾಗುತ್ತಿವೆ. ಅನರ್ಹ ಫಲಾನುಭವಿಗಳು ಯೋಜನೆಯ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇಂಥ ಅನರ್ಹ ಫಲಾನುಭವಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ದುರ್ಬಲರಿಗೆ ನೆರವಿನ ಹಸ್ತ ಚಾಚಬೇಕಂದು ರೂಪಿಸಿರುವ ಯೋಜನೆಗಳನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ವೃದ್ಯಾಪ್ಯ ವೇತನ ಯೋಜನೆಯಲ್ಲೂ ಹೀಗೆ ಆಗಿದೆ. ಇದೀಗ ರಾಜ್ಯ ಸರ್ಕಾರ ಒಟ್ಟು 4,52,451 ಫಲಾನುಭವಿಗಳು ಅನರ್ಹರೆಂದು ಪತ್ತೆ ಹಚ್ಚಿ ಅವರಿಗೆ ನೀಡಲಾಗುತ್ತಿದ್ದ ವೃದ್ಯಾಪ್ಯವನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳುತ್ತಿದೆ.
ವೃದ್ಯಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಅಥವಾ ಅಂಗವಿಕಲರಿಗೆ ನೀಡುವ ಮಾಸಾಶನಗಳ ಉದ್ದೇಶ ಕೈಲಾಗದವರಿಗೆ ಸಹಾಯ ಮಾಡುವುದು. ಪ್ರತಿ ತಿಂಗಳು ಇಂತಿಷ್ಟು ಹಣ ಅಂತಾ ಕೊಟ್ಟು ಅವರ ಕಷ್ಟಕ್ಕೆ ನೆರವಾಗುವುದು. ಇದು ಕೂಲಿಕಾರ್ಮಿಕರು, ಹಿಂದುಳಿದವರು, ದುರ್ಬಲರು ಮತ್ತು ಕಮ್ಮಿ ಆದಾಯದಲ್ಲಿ ಬದುಕುತ್ತಿರುವವರಿಗೆ ನಿಜಕ್ಕೂ ವರದಾನವಾಗಿರುವ ಕಾರ್ಯಕ್ರಮಗಳು. ಆದರೆ ಕೆಲವರು ಇಂಥ ಬಡವರ ಪರವಾದ ಯೋಜನೆಗಳನ್ನೂ ದುರುಪಯೋಗ ಮಾಡಿಕೊಳ್ಳುತ್ತಾರೆ. ಇದರಿಂದ ನಿಜಕ್ಕೂ ಅರ್ಹವಾಗಿರುವ ಫಲಾನುಭವಿಗಳಿಗೆ ಯೋಜನೆಯ ಲಾಭ ತಪ್ಪುವಂತಾಗುತ್ತದೆ.
4,52,451 ಜನರ ವೃದ್ಧಾಪ್ಯ ವೇತನಕ್ಕೆ ಕತ್ತರಿ:
ಕರ್ನಾಟಕದಲ್ಲಿ ವೃದ್ಯಾಪ್ಯ ವೇತನ ಯೋಜನೆಯಲ್ಲಿ ಭಾರಿ ದುರುಪಯೋಗ ಆಗಿರುವುದು ಕಂಡುಬಂದಿದೆ. ಸರ್ಕಾರ ಈ ಗಂಭೀರ ಸಮಸ್ಯೆಯನ್ನು ಪರಿಗಣಿಸಿ ಫಲಾನುಭವಿಗಳ ಬಗ್ಗೆ ಪರಿಶೀಲನೆ ನಡೆಸಿದ್ದಾಗ 4,52,451 ಜನ 60 ವರ್ಷ ಆಗಿಲ್ಲದಿದ್ದರೂ ವೃದ್ಯಾಪ್ಯ ವೇತನ ಪಡೆಯುತ್ತಿದ್ದಾರೆ ಎನ್ನುವುದು ಪತ್ತೆಯಾಗಿದೆ. 3,59,397 ಜನರು ಆರ್ಥಿಕವಾಗಿ ಸದೃಢರಾಗಿದ್ದಾರೆ. ವೃದ್ಯಾಪ್ಯ ವೇತನ ಪಡೆಯಲು ನಿಗದಿ ಮಾಡಿರುವ ಆದಾಯದ ಮಿತಿಗಿಂತ ಹೆಚ್ಚು ಗಳಿಕೆ ಮಾಡುತ್ತಿದ್ದಾರೆ. ಆದರೂ ವೃದ್ಯಾಪ್ಯ ವೇತನ ಪಡೆಯುತ್ತಿದ್ದಾರೆ. ಆದಾಯ ತೆರಿಗೆ ಪಾವತಿ ಮಾಡುತ್ತಿರುವ 3,600 ಜನ ಕೂಡ ವೃದ್ಯಾಪ್ಯ ವೇತನ ಪಡೆಯುತ್ತಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ.
ಸಂಧ್ಯಾ ಸುರಕ್ಷಾ ಯೋಜನೆಯಲ್ಲೂ ಅಕ್ರಮ:
ಸಂಧ್ಯಾ ಸುರಕ್ಷಾ ಯೋಜನೆ ವಿಷಯದಲ್ಲೂ ಹೀಗೆ ಅಕ್ರಮವಾಗಿದೆ ಎಂದು ತಿಳಿದುಬಂದಿದೆ. 7 ಲಕ್ಷಕ್ಕೂ ಹೆಚ್ಚು ಜನರು 60 ವರ್ಷ ಆಗಿಲ್ಲದಿದ್ದರೂ ಸಂಧ್ಯಾ ಸುರಕ್ಷಾ ಯೋಜನೆಯ ಲಾಭ ಮಾಡಿಕೊಳ್ಳುತ್ತಿದ್ದಾರೆ. 3.71 ಲಕ್ಷ ಮಹಿಳೆಯರು ಆದಾಯ ಮಿತಿಗಿಂತ ಹೆಚ್ಚಿನ ಆದಾಯವನ್ನು ಹೊಂದಿದ್ದರೂ ವಿಧವಾ ವೇತನವನ್ನು ಪಡೆಯುತ್ತಿದ್ದಾರೆ. ಸರ್ಕಾರಿ ನೌಕರಿ ಇದ್ದ ಕುಟುಂಬದಾರು ಸಹ ವೃದ್ಯಾಪ್ಯ ವೇತನ ಪಡೆಯುತ್ತಿದ್ದಾರೆ ಎನ್ನುವುದು ತಿಳಿದುಬಂದಿದೆ.
ಹೀಗೆ ಅಬಲರಿಗೆ ಆಸರೆಯಾಗಬೇಕಿದ್ದ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ಈಗ ಸರ್ಕಾರದ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಮುಂದಿನ ತಿಂಗಳಿನಿಂದ ಫಲಾನುಭವಿಗಳ ಮನೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಲು ನಿರ್ಧರಿಸಿದೆ. ಇದೇ ಉದ್ದೇಶದಿಂದ ‘ಕುಟುಂಬ’ ಎಂಬ ಅಪ್ಲಿಕೇಶನ್ ಮೂಲಕ ಫಲಾನುಭವಿಗಳ ವಿವರಗಳನ್ನು ಸಂಗ್ರಹಿಸಲಿದೆ. ಆಧಾರ್ ಲಿಂಕ್, ಆದಾಯ ಪ್ರಮಾಣಪತ್ರ ಹಾಗು HRMS (ಸರ್ಕಾರಿ ನೌಕರರ ವೇತನ/ಪಿಂಚಣಿ ಡಾಟಾ) ಮಾಹಿತಿಗಳನ್ನು ಕ್ರಾಸ್-ಚೆಕ್ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಎರಡು ವರ್ಷಗಳಲ್ಲಿ ವಿವಿಧ ಆರ್ಥಿಕ ನೆರವು ನೀಡುವ ಯೋಜನೆಗಳಿಗೆ ಒಟ್ಟು 15.13 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳ ಪೈಕಿ 10.95 ಲಕ್ಷ ಅರ್ಜಿಗಳು ಮಾತ್ರ ಸ್ವೀಕಾರಗೊಂಡಿವೆ. ಉಳಿದವು ತಿರಸ್ಕಾರಗೊಂಡಿವೆ. ಇದಲ್ಲದೆ 7.90 ಲಕ್ಷ ವಿವಿಧ ಬಗೆಯ ಫಲಾನುಭವಿಗಳ ಪಿಂಚಣಿ ಆದೇಶಗಳು ರದ್ದಾಗಿವೆ.