)
Ola Muhurat Mahotsav: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಓಲಾ ಎಲೆಕ್ಟ್ರಿಕ್ ಮಂಗಳವಾರ 'ಓಲಾ ಮುಹೂರ್ತ ಮಹೋತ್ಸವ' ಎಂಬ ಆಫರ್ ಘೋಷಿಸಿದೆ. ಈ ಆಫರ್ ಅಡಿಯಲ್ಲಿ ಓಲಾ ಎಲೆಕ್ಟ್ರಿಕ್ನ S1 ಸ್ಕೂಟರ್ ಮತ್ತು ರೋಡ್ಸ್ಟರ್X ಮೋಟಾರ್ಸೈಕಲ್ನ ಬೆಲೆಗಳು ಸೆಪ್ಟೆಂಬರ್ 23 ರಿಂದ 9 ದಿನಗಳವರೆಗೆ 49,999 ರೂ.ಗಳಿಂದ ಪ್ರಾರಂಭವಾಗುತ್ತವೆ. 'ಓಲಾ ಮುಹೂರ್ತ ಮಹೋತ್ಸವ'ದ ಅಡಿಯಲ್ಲಿ ಗ್ರಾಹಕರು ಈಗ ಹಿಂದೆಂದೂ ನೋಡಿರದ ಅತ್ಯಂತ ಕಡಿಮೆ ಬೆಲೆಗೆ ಓಲಾ ಸ್ಕೂಟರ್ಗಳು ಮತ್ತು ಮೋಟಾರ್ಸೈಕಲ್ಗಳನ್ನ ಖರೀದಿಸುವ ಅವಕಾಶ ಪಡೆಯುತ್ತಾರೆ ಎಂದು ಬೆಂಗಳೂರು ಮೂಲದ ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. ಹಬ್ಬದ ಕೊಡುಗೆಯಾಗಿ S1X 2 kWh ಮತ್ತು ರೋಡ್ಸ್ಟರ್ X 2.5 kWh ಬೆಲೆ 49,999 ರೂ.ಗಳಾಗಿರುತ್ತದೆ ಎಂದು ಕಂಪನಿ ತಿಳಿಸಿದೆ.
S1 & ರೋಡ್ಸ್ಟರ್Xನ ಉಳಿದ ರೂಪಾಂತರಗಳ ಬೆಲೆ
ಇವುಗಳ ಹೊರತಾಗಿ S1 Pro+ 5.2 kWh ಮತ್ತು RoadsterX+ 9.1 kWh ಬೆಲೆ 99,999 ರೂ. ಇರುತ್ತದೆ ಎಂದು ಕಂಪನಿ ತಿಳಿಸಿದೆ. S1 Pro+ 5.2 kWh ಮತ್ತು RoadsterX+ 9.1 kWh ಎರಡೂ 4680 ಭಾರತ್ ಸೆಲ್ ಬ್ಯಾಟರಿ ಪ್ಯಾಕ್ಗಳೊಂದಿಗೆ ಬರುತ್ತವೆ. ಮೊದಲು ಬಂದವರಿಗೆ ಆದ್ಯತೆ ನೀಡುವ ಆಧಾರದ ಮೇಲೆ S1 ಮತ್ತು ರೋಡ್ಸ್ಟರ್ನ ಸೀಮಿತ ಯೂನಿಟ್ಗಳನ್ನ ಈ ಬೆಲೆಗಳಲ್ಲಿ ಲಭ್ಯವಾಗುವಂತೆ ಮಾಡುವುದಾಗಿ ಕಂಪನಿ ತಿಳಿಸಿದೆ. ಇದಕ್ಕೆ ಸಂಬಂಧಿಸಿದ ಸಮಯವನ್ನ ಕಂಪನಿಯ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪ್ರತಿದಿನವೂ ಪ್ರಕಟಿಸುತ್ತದೆ. ಈ ಬಗ್ಗೆ ಓಲಾ ವಕ್ತಾರರು ಮಾತನಾಡಿ, "ಮುಹೂರ್ತ ಮಹೋತ್ಸವವು ಹಿಂದೆಂದೂ ನೋಡಿರದ ಬೆಲೆಗಳ ಬಗ್ಗೆ ಮಾತ್ರವಲ್ಲ, ಇದು ವಿಶ್ವ ದರ್ಜೆಯ ಎಲೆಕ್ಟ್ರಿಕ್ ವಾಹನಗಳನ್ನ (EV) ಪ್ರತಿಯೊಬ್ಬ ಭಾರತೀಯನಿಗೂ ಸಿಗುವಂತೆ ಮಾಡುವ ಉದ್ದೇಶವನ್ನು ಹೊಂದಿದೆ" ಎಂದು ಹೇಳಿದರು.
GST ಬದಲಾವಣೆಯಿಂದ ಖರೀದಿ ಭರಾಟೆ ಜೋರು
ಸೆಪ್ಟೆಂಬರ್ 22ರ ಸೋಮವಾರದಿಂದ ಹೊಸ GST ದರಗಳು ಜಾರಿಗೆ ಬಂದ ನಂತರ, ಕಾರುಗಳನ್ನು ಖರೀದಿಸಲು ಗ್ರಾಹಕರ ದೊಡ್ಡ ಗುಂಪೇ ವಿವಿಧ ಕಾರು ಕಂಪನಿಗಳ ಶೋ ರೂಂಗಳಿಗೆ ಧಾವಿಸಿತ್ತು. ಸರ್ಕಾರವು ಸಣ್ಣ ಕಾರುಗಳ ಮೇಲಿನ GSTಯನ್ನು ಶೇ.28ರಿಂದ 18ಕ್ಕೆ ಇಳಿಸಿದೆ. ಹೊಸ GST ದರಗಳ ಅನುಷ್ಠಾನದೊಂದಿಗೆ ನವರಾತ್ರಿಯ ಮೊದಲ ದಿನದಂದು ಕಾರುಗಳ ಖರೀದಿ ಹೆಚ್ಚಾಯಿತು. ಸೋಮವಾರ ಖರೀದಿ ಮಾಡಿದ ಕಾರುಗಳ ದಾಖಲೆ ನೋಡಿದ್ರೆ, ಕಳೆದ ಹಲವಾರು ವರ್ಷಗಳಲ್ಲಿ ಮಾರುತಿ ಸುಜುಕಿ ಮತ್ತು ಹುಂಡೈ ಒಂದು ದಿನದ ಮಾರಾಟದಲ್ಲಿ ಹೊಸ ದಾಖಲೆಯನ್ನೇ ಮಾಡಿದೆ ಎಂದು ತಿಳಿದುಬಂದಿದೆ. ಮಾರುತಿ ಮೊದಲ ದಿನ ಸುಮಾರು 30,000 ಕಾರುಗಳನ್ನು ಮಾರಾಟ ಮಾಡಿದ್ರೆ, ಹುಂಡೈ 11,000 ಮತ್ತು ಟಾಟಾ ಮೋಟಾರ್ಸ್ ಸುಮಾರು 10,000 ಕಾರುಗಳನ್ನ ಮಾರಾಟ ಮಾಡಿದೆ.