)
Cash Limit at Home: ಮನೆಯಲ್ಲಿ ಹಣ ಇಡುವ ಬಗ್ಗೆ ಆದಾಯ ತೆರಿಗೆ ಇಲಾಖೆ ಯಾವುದೇ ರೀತಿಯ ಗರಿಷ್ಟ ಮಿತಿಯನ್ನು ಹೇರಿಲ್ಲ. ಆದರೆ ಮನೆಯಲ್ಲಿ ಇಟ್ಟುಕೊಂಡಿರುವ ಹಣದ ನೈಜ ಮತ್ತು ಪರಿಷ್ಕೃತ ಮೂಲವನ್ನು ಖಚಿತಪಡಿಸಲೇಬೇಕು ಎನ್ನುವುದನ್ನು ಸ್ಪಷ್ಟವಾಗಿ ಹೇಳಿದೆ. ಆದಾಯ ಮೂಲವಿಲ್ಲದ ಹಣ ಮನೆಯಲ್ಲಿ ಇದ್ದರೆ ಆದಾಯ ಇಲಾಖೆ ದೊಡ್ಡ ಮೊತ್ತದ ದಂಡವನ್ನು ವಿಧಿಸಲಿದೆ.
ಪ್ರತಿ ವರ್ಷ ಆದಾಯ ಇಲಾಖೆಗೆ ಐಟಿ ರಿಟರ್ನ್ಸ್ (Income Tax Returns) ಸಲ್ಲಿಸುವಾಗ ಕಡ್ಡಾಯವಾಗಿ ನಿಮ್ಮ ಸಂಪಾದನೆಯ ಅಥವಾ ಆದಾಯದ ಮೂಲಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲೇಬೇಕು. ಐಟಿ ರಿಟರ್ನ್ಸ್ ವೇಳೆ ನಿಮ್ಮ ಹಣಕ್ಕೆ ಅಥವಾ ಆದಾಯಕ್ಕೆ ಮೂಲ ಯಾವುದು ಎನ್ನುವುದನ್ನು ತಿಳಿಸದಿದ್ದರೆ ಅಪಾಯ ತಪ್ಪಿದ್ದಲ್ಲ.
ನೀವು ಸಂಪಾದನೆ ಮಾಡುವ ಹಣಕ್ಕೆ ಅಥವಾ ನಿಮ್ಮ ಆದಾಯಕ್ಕೆ ಮೂಲ ಯಾವುದು ಎನ್ನುವುದನ್ನು ದಾಖಲೆ ಸಮೇತ ತಿಳಿಸದಿದ್ದರೆ, ಲೆಕ್ಕಪತ್ರ ಇಲ್ಲದ ಹಣ ನಿಮ್ಮ ಮನೆಯಲ್ಲಿ ಕಂಡುಬಂದರೆ ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 68–69Bನಲ್ಲಿರುವ ನಿಯಮಗಳ ಪ್ರಕಾರ ಶೇಕಡಾ 78ರಷ್ಟು ದಂಡ ವಿಧಿಸಬಹುದಾಗಿದೆ.
ಮನೆಯಲ್ಲಿ ದೊಡ್ಡ ಮೊತ್ತದ ಹಣ ಇಟ್ಟುಕೊಂಡರೆ ಆದಾಯ ಇಲಾಖೆಯ ಅಧಿಕಾರಿಗಳು (IT Raid) ದಾಳಿ ಮಾಡಬಹುದು ಎಂಬ ಭಯ ಇರುವುದು ಸಹಜ. ಆದರೆ ನೀವು ಆದಾಯ ಮೂಲದ ದಾಖಲೆಗಳನ್ನು ಹೊಂದಿದ್ದರೆ ಎಷ್ಟು ಬೇಕಾದರೂ ಹಣ ಇಟ್ಟುಕೊಳ್ಳಬಹುದು. ಅದಕ್ಕಾಗಿ ಆತಂಕ ಪಡಬೇಕಾದ ಅಗತ್ಯ ಇಲ್ಲ.
ಆದಾಯ ಇಲಾಖೆಯ ನಿಯಮಗಳು ನಿಮ್ಮ ಹಣ ಪಾರದರ್ಶಕವಾಗಿರಬೇಕು. ಪ್ರತಿಯೊಂದು ರೂಪಾಯಿಗೂ ದಾಖಲೆ ಇರಬೇಕು. ವ್ಯಾಪಾರಿಗಳಾದರೆ ನಿಮ್ಮ ಕ್ಯಾಶ್ ಬುಕ್ ಮತ್ತು ಖಾತೆ ದಾಖಲೆಗಳಿಗೆ ಹೊಂದಾಣಿಕೆಯಾಗಬೇಕು ಎಂದು ಮಾತ್ರ ಹೇಳುತ್ತವೆ. ಹಣ ಇಟ್ಟುಕೊಳ್ಳುವುದು ಅಪರಾಧ ಎನ್ನುವುದಿಲ್ಲ.