ಆಗಸ್ಟ್ 1, 2025ರಿಂದ ಯುಪಿಐ (UPI) ವ್ಯವಸ್ಥೆಯಲ್ಲಿ ಕೆಲವು ಮುಖ್ಯ ಬದಲಾವಣೆಗಳು ಜಾರಿಗೆ ಬರಲಿವೆ. ಗೂಗಲ್ ಪೇ, ಫೋನ್ಪೇ, ಪೇಟಿಎಂನಂತಹ ಆ್ಯಪ್ಗಳ ಬಳಕೆದಾರರಿಗೆ ಈ ಮಾಹಿತಿ ತಿಳಿಯಲೇಬೇಕು.

ಆಗಸ್ಟ್ 1, 2025ರಿಂದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ವ್ಯವಸ್ಥೆಯಲ್ಲಿ ಹಲವು ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ಗೂಗಲ್ ಪೇ, ಫೋನ್ಪೇ, ಪೇಟಿಎಂನಂತಹ ಯುಪಿಐ ಆ್ಯಪ್ಗಳನ್ನು ಬಳಸುವವರಿಗೆ ಈ ನಿಯಮಗಳು ಮುಖ್ಯವಾಗಿವೆ.
ಈ ಬದಲಾವಣೆಗಳ ಉದ್ದೇಶ, ಯುಪಿಐ ಸೇವೆಯನ್ನು ಹೆಚ್ಚು ಸಮರ್ಪಕ, ಸುಗಮ ಹಾಗೂ ಸುಸ್ಥಿರಗೊಳಿಸುವುದು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್ಪಿಸಿಐ) ಈ ಕ್ರಮಗಳನ್ನು ಜಾರಿಗೊಳಿಸುತ್ತಿದೆ.
ಬ್ಯಾಲನ್ಸ್ ಚೆಕ್ಗೆ ಮಿತಿ:
ಯುಪಿಐ ಆ್ಯಪ್ಗಳ ಮೂಲಕ ಒಂದು ದಿನದಲ್ಲಿ ಬ್ಯಾಂಕ್ ಖಾತೆಯ ಬ್ಯಾಲನ್ಸ್ ಅನ್ನು ಕೇವಲ 50 ಬಾರಿ ಪರಿಶೀಲಿಸಬಹುದು. ಇದಕ್ಕಿಂತ ಹೆಚ್ಚಿನ ಪರಿಶೀಲನೆಗೆ ಅವಕಾಶವಿರುವುದಿಲ್ಲ. ಇದೇ ರೀತಿ, ಮೊಬೈಲ್ ನಂಬರ್ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಒಂದು ದಿನದಲ್ಲಿ 25 ಬಾರಿ ಮಾತ್ರ ಪಡೆಯಬಹುದು.
ಆಟೊಡೆಬಿಟ್ಗೆ ನಿರ್ಬಂಧ:
ಒಟಿಟಿ ಪ್ಲಾಟ್ಫಾರ್ಮ್ಗಳು, ಮ್ಯುಚುವಲ್ ಫಂಡ್ ಎಸ್ಐಪಿ ಮುಂತಾದವುಗಳಿಗೆ ಸ್ವಯಂಚಾಲಿತವಾಗಿ (ಆಟೊಡೆಬಿಟ್) ಹಣ ಕಡಿತಗೊಳ್ಳುವ ಸೌಲಭ್ಯವಿದೆ. ಆದರೆ, ಈಗಿಂದ ಆಟೊಡೆಬಿಟ್ ಕಡಿಮೆ ಟ್ರಾಫಿಕ್ ಇರುವ ಸಮಯದಲ್ಲಿ ಮಾತ್ರ ಸೀಮಿತವಾಗಿರಲಿದೆ. ಬೆಳಗಿನ 10 ಗಂಟೆಯೊಳಗೆ, ಮಧ್ಯಾಹ್ನ 1ರಿಂದ ಸಂಜೆ 5 ಗಂಟೆಯವರೆಗೆ ಹಾಗೂ ರಾತ್ರಿ 9:30ರ ನಂತರ ಮಾತ್ರ ಆಟೊಡೆಬಿಟ್ ಕಾರ್ಯನಿರ್ವಹಿಸಲಿದೆ.
ವಹಿವಾಟಿನ ಸ್ಥಿತಿ ಪರಿಶೀಲನೆಗೆ ಕಟ್ಟುಪಾಡು: ಯುಪಿಐ ವಹಿವಾಟಿನ ಸ್ಥಿತಿಯನ್ನು ಪರಿಶೀಲಿಸಲು ಒಂದು ದಿನದಲ್ಲಿ ಮೂರು ಬಾರಿ ಮಾತ್ರ ಅವಕಾಶವಿದೆ. ಪ್ರತಿ ಪರಿಶೀಲನೆಯ ನಡುವೆ ಕನಿಷ್ಠ 90 ಸೆಕೆಂಡ್ಗಳ ಅಂತರ ಇರಬೇಕು.
ಈ ಬದಲಾವಣೆ ಏಕೆ?
ಯುಪಿಐ ವ್ಯವಸ್ಥೆಯ ಬಳಕೆ ದಿನೇ ದಿನೇ ಏರಿಕೆಯಾಗುತ್ತಿದೆ. ಒಂದು ತಿಂಗಳಲ್ಲಿ ಸುಮಾರು 1,600 ಕೋಟಿ ವಹಿವಾಟುಗಳು ನಡೆಯುತ್ತಿವೆ. ಇದರಿಂದ ಯುಪಿಐ ನೆಟ್ವರ್ಕ್ನ ಮೇಲೆ ಭಾರೀ ಒತ್ತಡ ಬೀಳುತ್ತಿದೆ. ಈ ಒತ್ತಡವನ್ನು ಕಡಿಮೆ ಮಾಡಿ, ಸೇವೆಯ ದಕ್ಷತೆಯನ್ನು ಹೆಚ್ಚಿಸಲು ಎನ್ಪಿಸಿಐ ಈ ನಿಯಮಗಳನ್ನು ಜಾರಿಗೊಳಿಸಿದೆ.ಈ ಬದಲಾವಣೆಗಳಿಂದ ಯುಪಿಐ ಬಳಕೆದಾರರು ತಮ್ಮ ವಹಿವಾಟು ಚಟುವಟಿಕೆಗಳನ್ನು ಯೋಜನಾಬದ್ಧವಾಗಿ ನಿರ್ವಹಿಸಬೇಕಾಗುತ್ತದೆ.