)
ಕೇಂದ್ರ ಉದ್ಯೋಗಿ ಸಂಘಟನೆಗಳು ನಿರಂತರವಾಗಿ ಡಿಎ ಬಾಕಿ ಬಿಡುಗಡೆಗಾಗಿ ದೊಡ್ಡ ಮಟ್ಟದ ಹೋರಾಟವನ್ನೇ ನಡೆಸಿಕೊಂಡು ಬಂದಿವೆ. ಇದರ ಬಗ್ಗೆ ವಿವಿಧ ರೀತಿಯ ಮಾತುಕತೆಗಳು ಕೂಡಾ ನಡೆಯುತ್ತಿವೆ. ಎಲ್ಲಾ ಉದ್ಯೋಗಿಗಳ ಮನಸ್ಸಿನಲ್ಲಿರುವ ಪ್ರಶ್ನೆಯೆಂದರೆ, ಡಿಎ ಬಾಕಿಯ ಲಾಭ ತಮಗೆ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬುದು. 18 ತಿಂಗಳ ಡಿಎ ಬಾಕಿಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರವು ತನ್ನ ಹೇಳಿಕೆ ಬಿಡುಗಡೆ ಮಾಡಿದೆ. ಈ ಮೂಲಕ ಕೇಂದ್ರ ನೌಕರರ ಮನಸ್ಸಿನ ಗೊಂದಲಕ್ಕೆ ತೆರೆ ಎಳೆದಿದೆ.
ಡಿಎ ಬಾಕಿ ಹಣವನ್ನು ನೀಡಲಾಗುತ್ತದೆಯೇ? :
ಕೇಂದ್ರ ನೌಕರರಿಗೆ ಡಿಎ ಬಾಕಿ ಹಣ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬುದು ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಮಳೆಗಾಲದ ಅಧಿವೇಶನದಲ್ಲಿ 18 ತಿಂಗಳಿನಿಂದ ಬಾಕಿ ಉಳಿದಿರುವ ಡಿಎ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ, ಸರ್ಕಾರದಿಂದ ಆಘಾತಕಾರಿ ಉತ್ತರ ಬಂದಿದೆ. ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ತಮ್ಮ ಉತ್ತರದಿಂದ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸಿದ್ದಾರೆ.
ಗೊಂದಲಕ್ಕೆ ತೆರೆ ಎಳೆದ ಸರ್ಕಾರ :
ಕೇಂದ್ರ ಸರ್ಕಾರದ ಬಳಿ 18 ತಿಂಗಳ ಡಿಎ ಬಾಕಿ ನೀಡುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಈ ಹಣವನ್ನು ಬಿಡುಗಡೆ ಮಾಡುವ ಬಗ್ಗೆ ಯೋಚಿಸುತ್ತಿಲ್ಲ ಎಂದು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಕೊರೊನಾ ಅವಧಿಯಲ್ಲಿ ಕುಸಿದು ಬಿದ್ದಿದ್ದ ಆರ್ಥಿಕತೆಯನ್ನು ಮತ್ತೆ ಹಳಿಗೆ ತರಲು 18 ತಿಂಗಳ ಡಿಎಯನ್ನು ತಡೆ ಹಿಡಿಯಲಾಗಿತ್ತು. ಆದರೆ, ನಂತರ ಹಣಕಾಸಿನ ಸ್ಥಿತಿ ಸುಧಾರಿಸಿದ್ದು, ತಡೆ ಹಿಡಿಯಲಾದ 18 ತಿಂಗಳ ತುಟ್ಟಿಭತ್ಯೆಯನ್ನು ಬಿಡುಗಡೆ ಮಾಡಬೇಕು ಎನ್ನುವುದು ನೌಕರರ ಬೇಡಿಕೆಯಾಗಿತ್ತು.
ಡಿಎ ಎಷ್ಟು ಹೆಚ್ಚಿಸಬಹುದು? :
ಕೇಂದ್ರ ನೌಕರರ ಡಿಎ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಪರಿಗಣಿಸಲಾಗಿದೆ. ದೀಪಾವಳಿಗೂ ಮುನ್ನ ಮೋದಿ ಸರ್ಕಾರ ಈ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಈ ಬಾರಿ ಡಿಎಯನ್ನು 3 ಶೇಕಡಾದಷ್ಟು ಹೆಚ್ಚಿಸಬಹುದು.
ಪ್ರಸ್ತುತ, ಕೇಂದ್ರ ನೌಕರರು ಶೇಕಡಾ 55 ರಷ್ಟು ಡಿಎ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಸರ್ಕಾರವು ಪ್ರತಿ ಅರ್ಧ ವರ್ಷಕ್ಕೊಮ್ಮೆ ಡಿಎ ಹೆಚ್ಚಿಸುವ ಕೆಲಸ ಮಾಡುತ್ತದೆ. ಇದರ ದರಗಳು ಜನವರಿ 1 ಮತ್ತು ಜುಲೈ 1 ರಿಂದ ಜಾರಿಗೆ ಬರುತ್ತವೆ.