ಆದಾಯ ತೆರಿಗೆ ಎಫೆಕ್ಟ್ ಆಗದಂತೆ ಎಷ್ಟು ಚಿನ್ನವನ್ನು ದೀಪಾವಳಿ ಉಡುಗೊರೆಯಾಗಿ ಪಡೆಯಬಹುದು?

Diwali Gift Income Tax: ದೀಪಾವಳಿ ಹಬ್ಬಕ್ಕೆ ತುಂಬಾ ದೊಡ್ಡ ಮೊತ್ತದ ಚಿನ್ನದ ಆಭರಣಗಳನ್ನು ಅಥವಾ ಗಟ್ಟಿಯನ್ನು ಉಡುಗೊರೆಯಾಗಿ ಪಡೆದರೆ ಏನಾಗಬಹುದು? ಆದಾಯ ತೆರಿಗೆ ಪಾವತಿಸಬೇಕಾಗುತ್ತಾ ಅಥವಾ ಇಲ್ಲವಾ? ಎಂಬ ಬಗ್ಗೆ ಕಾನೂನು ಏನು ಹೇಳುತ್ತದೆ ಎನ್ನುವುದನ್ನು ತಿಳಿದಿರುವುದು ಅಗತ್ಯವಾಗಿದೆ. 

Written by - Yashaswini V | Last Updated : Oct 16, 2025, 08:44 AM IST
  • 1961ರ ಆದಾಯ ತೆರಿಗೆ ಕಾಯಿದೆ ಚಿನ್ನವನ್ನು ಉಡುಗೊರೆಯಾಗಿ ಸ್ವೀಕರಿಸಲು ಇರುವ ನಿರ್ಬಂಧದ ಬಗ್ಗೆ ಹೇಳುತ್ತದೆ.
  • ಸಂಬಂಧಿಕರಿಂದ ಮತ್ತು ಸಂಬಂಧಿಕರಲ್ಲದವರಿಂದ ಚಿನ್ನವನ್ನು ಉಡುಗೊರೆಯಾಗಿ ಪಡೆದರೆ ಪ್ರತ್ಯೇಕ ನಿಯಮಗಳಿವೆ.
  • ವಿವಾಹದ ಸಂಧರ್ಭದಲ್ಲಿ ಪಡೆಯುವ ಉಡುಗೊರೆಗೂ ನಿರ್ಬಂಧವಿದೆ
ಆದಾಯ ತೆರಿಗೆ ಎಫೆಕ್ಟ್ ಆಗದಂತೆ ಎಷ್ಟು ಚಿನ್ನವನ್ನು ದೀಪಾವಳಿ ಉಡುಗೊರೆಯಾಗಿ ಪಡೆಯಬಹುದು?

Income Tax Alert: ದೀಪಾವಳಿ ಹಬ್ಬಕ್ಕೆ ಚಿನ್ನದ ಉಡುಗೊರೆ ನೀಡುವುದು ಮತ್ತು ಪಡೆಯುವುದು ಭಾರತದಂಥ ಸಂಪ್ರದಾಯಸ್ಥ ದೇಶದಲ್ಲಿ ಸರ್ವೇ ಸಾಮಾನ್ಯ. ಏಕೆಂದರೆ ಬಹುತೇಕ ಭಾರತೀಯರು ಚಿನ್ನವನ್ನು ಸಂಪತ್ತು, ಆಶೀರ್ವಾದ ಮತ್ತು ಅದೃಷ್ಟದ ಸಂಕೇತ ಎಂದು ಭಾವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಕಿನ ಹಬ್ಬವಾದ ದೀಪಾವಳಿಯಲ್ಲಿ ಚಿನ್ನವನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಆದರೆ ದೊಡ್ಡ ಮೊತ್ತದ ಚಿನ್ನವನ್ನು ದೀಪಾವಳಿ ಉಡುಗೊರೆಯಾಗಿ ಪಡೆದರೆ ಆದಾಯ ತೆರಿಗೆ ಪಾವತಿಸಬೇಕಾ ಅಥವಾ ಬೇಡವಾ? ಅದು ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತಾ ಎಂಬ ಪ್ರಶ್ನೆಗಳು ಹಲವರನ್ನು ಕಾಡುತ್ತವೆ.

Add Zee News as a Preferred Source

ಚಿನ್ನ ಎಂದರೆ ಅದು ನಾಣ್ಯ, ಆಭರಣ ಅಥವಾ ಸಣ್ಣ ಸಣ್ಣ ಗಟ್ಟಿಯ ರೂಪದಲ್ಲಿರಲಿ ಅದು ಚಿನ್ನವೇ. ಹಾಗಾಗಿ ಯಾವುದೇ ರೂಪದಲ್ಲಿದ್ದರೂ ಸರಿ ದೀಪಾವಳಿ ವೇಳೆ ಬಂಧುಗಳು ಮತ್ತು ಸ್ನೇಹಿತರು ಚಿನ್ನವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಇದರಿಂದಾಗಿ ದೀಪಾವಳಿ ಬರುವ ಹೊತ್ತಿನಲ್ಲಿ ಚಿನ್ನದ ಬೆಲೆ ಗಗನಕ್ಕೆ ಮುತ್ತಿಡುತ್ತಿದೆ. ಆದರೆ 1961ರ ಆದಾಯ ತೆರಿಗೆ ಕಾಯಿದೆ ಅಡಿಯಲ್ಲಿ ಚಿನ್ನದ ನಾಣ್ಯಗಳು ಅಥವಾ ಆಭರಣಗಳನ್ನು ಉಡುಗೊರೆಯಾಗಿ ಸ್ವೀಕರಿಸಲು ಯಾವುದೇ ನಿರ್ದಿಷ್ಟ ಮಿತಿ ಇಲ್ಲ. ಹಾಗಂತಾ ಬೇಕಾಬಿಟ್ಟಿ ಚಿನ್ನವನ್ನು ಸ್ವೀಕರಿಸುವಂತಿಲ್ಲ. ಅದರ ಬಗ್ಗೆ ಮುಂದೆ ಓದಿ.

ದೀಪಾವಳಿ ವೇಳೆ ಚಿನ್ನವನ್ನು ಉಡುಗೊರೆಯಾಗಿ ಪಡೆಯಬಹುದು. ಆದರೆ ಯಾರಿಂದ ಉಡುಗೊರೆ ಪಡೆಯುತ್ತೀರಿ ಎನ್ನುವುದು ಬಹಳ ಮುಖ್ಯ. ಅದರ ಮೇಲೆ ನೀವು ಆದಾಯ ತೆರಿಗೆಯನ್ನು ಪಾವತಿಸಬೇಕೋ ಬೇಡವೋ ಎನ್ನುವುದು ಕೂಡ ನಿರ್ಧಾರವಾಗುತ್ತದೆ. ವ್ಯಾಪಾರ-ವಹಿವಾಟು, ವಿದೇಶಿಯಿಂದ ಆಮದಾಗುವುದು ವಿಷಯಗಳ ಹಿನ್ನೆಲೆ ಇದ್ದರೆ ಆಗ ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತದೆ.

ಉಡುಗೊರೆಗಳು ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತವೆಯೇ ಇಲ್ಲವೇ ಎನ್ನುವುದನ್ನು 1961ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 56(2)(x) ನಿಯಂತ್ರಿಸುತ್ತದೆ. ಈ ಸೆಕ್ಷನ್ ಪರಿಗಣನೆಯಿಲ್ಲದೆ ಸ್ವೀಕರಿಸಿದ ಹಣ ಅಥವಾ ಆಸ್ತಿಯನ್ನು (ಚಿನ್ನ, ಆಭರಣ, ಷೇರುಗಳು ಅಥವಾ ಸ್ಥಿರ ಆಸ್ತಿ ಸೇರಿದಂತೆ) ಇತರೆ ಮೂಲಗಳಿಂದ ಬಂದ ಆದಾಯ ಎಂದು ನಿರ್ಧರಿಸುತ್ತದೆ. ಅದಕ್ಕೆ ಕೆಲವು ನಿರ್ದಿಷ್ಟ ವಿನಾಯಿತಿಗಳಿರುತ್ತವೆ. ಅದು ಮೀರಿದರೆ ಆಗ ಆದಾಯ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ.

ದೀಪಾವಳಿ ವಿಷಯಕ್ಕೆ ಬರುವುದಾದರೆ ನಿರ್ದಿಷ್ಟವಾಗಿ ಬಂಧುಗಳಿಂದ ಚಿನ್ನವನ್ನು ಉಡುಗೊರೆಯಾಗಿ ಸ್ವೀಕರಿಸಿದರೆ ಅದಕ್ಕೆ ತೆರಿಗೆ ಇರುವುದಿಲ್ಲ. ಆದರೆ ಸಂಬಂಧಿಕರೂ ಅಲ್ಲದ, ಸ್ನೇಹಿತರೂ ಅಲ್ಲದವರು ಒಂದು ಹಣಕಾಸು ವರ್ಷದಲ್ಲಿ 50 ಸಾವಿರ ರೂಪಾಯಿಗಿಂತಲೂ ಹೆಚ್ಚು ಮೌಲ್ಯದ ಚಿನ್ನವನ್ನು ಉಡುಗೊರೆಯಾಗಿ ನೀಡಿದರೆ ಆಗ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. 

ಬಂಧುಗಳು ಎಂದರೆ ಪೋಷಕರು, ಒಡಹುಟ್ಟಿದವರು, ಸಂಗಾತಿ, ವಂಶಸ್ಥರು, ಅತ್ತೆ, ಮಾವ ಮತ್ತಿತರ ಆದಾಯ ಇಲಾಖೆ ಕಾಯಿದೆ ಅಡಿ ಸಂಬಂಧಿಕರು ಎಂದು ವ್ಯಾಖ್ಯಾನಿಸಿರುವವರಿಂದ ಮಾತ್ರ ಚಿನ್ನವನ್ನು ಉಡುಗೊರೆಯಾಗಿ ಪಡೆದರೆ ಅದು ಎಷ್ಟೇ ಮೊತ್ತದ್ದಾಗಿದ್ದರೂ ತೆರಿಗೆ ವಿನಾಯಿತಿ ಇರುತ್ತದೆ. ಬೇರೆಯವರಿಂದ ಪಡೆದರೆ ತೆರಿಗೆ ಪಾವತಿ ಮಾಡಬೇಕಾಗಿರುವುದು ಕಡ್ಡಾಯ.

ವಿವಾಹದ ವೇಳೆ ಉಡುಗೊರೆಗೆ ಏನು ನಿರ್ಬಂಧ?
ಹಬ್ಬದ ಸಮಯದಲ್ಲಿ ಮಾತ್ರ ಮದುವೆ ಆಗುವ ಸಂದರ್ಭದಲ್ಲೂ ದುಬಾರಿ ಬೆಲೆಯ ಚಿನ್ನದ ಉಡುಗೊರೆಗಳನ್ನು ನೀಡುವುದು ಸಾಮಾನ್ಯ. ಒಂದು ರೀತಿಯಲ್ಲಿ ಹಬ್ಬದ ಸಮಯಕ್ಕಿಂತ ಮದುವೆ ಸಂದರ್ಭದಲ್ಲಿ ಹೆಚ್ಚು. ಹಾಗಾಗಿ ಮದುವೆ ಸಂದರ್ಭದಲ್ಲಿ ಯಾರಿಂದ ಚಿನ್ನದ ಉಡುಗೊರೆಯನ್ನು ಪಡೆಯಬೇಕು? ಎಷ್ಟು ಮೊತ್ತದವರೆಗಿನ ಚಿನ್ನವನ್ನು ಉಡುಗೊರೆಯಾಗಿ ಪಡೆಯಬಹುದು ಎಂದು ತಿಳಿದುಕೊಳ್ಳುವುದು ಕೂಡ ಅತ್ಯಗತ್ಯ.

ಮದುವೆ ಸಂಧರ್ಭದಲ್ಲಿ ಸ್ವೀಕರಿಸುವ ಉಡುಗೊರೆಗಳಿಗೆ ಅದು ಯಾವುದೇ ರೂಪದಲ್ಲಿ ಇರಲಿ ತೆರಿಗೆ ವಿನಾಯಿತಿ ಇರುತ್ತದೆ. ಅಂದರೆ ಚಿನ್ನ, ಹಣ, ವಸ್ತುಗಳು ಮತ್ತು ಆಸ್ತಿ ಸ್ವರೂಪದಲ್ಲಿದ್ದರೂ ತೆರಿಗೆ ವಿನಾಯಿತಿ ಇರುತ್ತದೆ. ಹಾಗೆಯೇ ಅದಕ್ಕೆ ಸಂಬಂಧಿಕರು ಎಂಬ ನಿರ್ಬಂಧ ಕೂಡ ಇರುವುದಿಲ್ಲ. ಆ ಸಂದರ್ಭದಲ್ಲಿ ಯಾರು ಬೇಕಾದರೂ ಎಷ್ಟು ಮೊತ್ತದ ಚಿನ್ನಾಭರಣವನ್ನಾದರೂ ಉಡುಗೊರೆಯನ್ನು ನೀಡಬಹುದು. ಅದಕ್ಕೆ ತೆರಿಗೆ ಪಾವತಿಸಬೇಕಾದ ಅಗತ್ಯ ಇರುವುದಿಲ್ಲ ಎನ್ನುತ್ತಾರೆ ತೆರಿಗೆ ತಜ್ಞರು.

ಇದನ್ನೂ ಓದಿ- DA Hike: ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್, ತುಟ್ಟಿಭತ್ಯೆ ಹೆಚ್ಚಳ, ಎಷ್ಟು ಜಾಸ್ತಿ? ಯಾವಾಗ ಎಫೆಕ್ಟ್?

ಇದನ್ನೂ ಓದಿ- ಪಿಎಫ್ ಖಾತೆ ZERO ಆಗಿದ್ದರೂ ಸಿಗುತ್ತೆ ₹50,000: ಇಪಿಎಫ್‌ಒದ ಈ ಪ್ರಯೋಜನದ ಬಗ್ಗೆ ತಿಳಿಯದಿದ್ದರೆ ಭಾರೀ ನಷ್ಟ

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News