)
Indian Railway Rules: ಕೈಗೆಟುಕುವ ದರದಲ್ಲಿ ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿಯಾಗಿರುವ ಭಾರತೀಯ ರೈಲ್ವೇಯಲ್ಲಿ ಪ್ರತಿದಿನ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಪ್ರಯಾಣದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಾವಹಿಸಲು ಮತ್ತವರ ಅನುಭವವನ್ನು ಉತ್ತಮಗೊಳಿಸಲು ಐಆರ್ಸಿಟಿಸಿ ಹಲವು ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಒಂದು ಪ್ರಮುಖ ಬದಲಾವಣೆಗೆ ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ.
ವಾಸ್ತವವಾಗಿ, ರೈಲು ಪ್ರಯಾಣದ ವೇಳೆ ಹಲವು ಬಾರಿ ಟಿಟಿಇ ಬಂದು ಪ್ರಯಾಣಿಕರ ಟಿಕೆಟ್ ಪರಿಶೀಲಿಸುತ್ತಾರೆ. ಆದರೀಗ ವಿಶೇಷವಾಗಿ ರಾತ್ರಿಯಲ್ಲಿ ಪ್ರಯಾಣಿಸುವವರ ನಿದ್ರೆಗೆ ತೊಂದರೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ರೈಲ್ವೆ ನಿಯಮದಲ್ಲಿ ಬದಲಾವಣೆಗೆ ಮುಂದಾಗಿದೆ. ರಾತ್ರಿ ಸಮಯದಲ್ಲಿ ರೈಲಿನಲ್ಲಿ ಪ್ರಯಾಣಿಸುವಾಗ ಟಿಟಿಇ ಮಧ್ಯರಾತ್ರಿಯಲ್ಲಿ ಟಿಕೆಟ್ ಪರಿಶೀಲಿಸಲು ಬರುವುದರಿಂದ ನಿದ್ರೆಗೆ ಭಂಗವಾಗುತ್ತದೆ ಎಂದು ಹಲವು ಪ್ರಯಾಣಿಕರು ದೂರುತ್ತಾರೆ. ಈ ಬಗ್ಗೆ ಸ್ಪಷ್ಟ ನಿಯಮ ರೂಪಿಸಿರುವ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಪರಿಹಾರವನ್ನು ನೀಡಿದೆ.
ಈ ಸಮಯದಲ್ಲಿ ಟಿಟಿಇ ಟಿಕೆಟ್ ಪರಿಶೀಲಿಸುವಂತಿಲ್ಲ:
ಐಆರ್ಸಿಟಿಸಿ ನಿಯಮಗಳ ಪ್ರಕಾರ, ರಾತ್ರಿ 10ಗಂಟೆಯಿಂದ ಬೆಳಿಗ್ಗೆ 6ಗಂಟೆ ನಡುವೆ ಸ್ಲೀಪರ್ ಅಥವಾ ಎಸಿ ಕೋಚ್ಗಳಲ್ಲಿ ಟಿಕೆಟ್ಗಳನ್ನು ಪರಿಶೀಲಿಸಲು ಟಿಟಿಇಗೆ ಅವಕಾಶವಿಲ್ಲ. ರಾತ್ರಿ ವೇಳೆ ಪ್ರಯಾಣಿಸುವ ಪ್ರಯಾಣಿಕರು ಶಾಂತಿಯುತವಾಗಿ ಮಲಗಲು ಅವಕಾಶ ರೂಪಿಸುವ ನಿಟ್ಟಿನಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದೆ. ಆದಾಗ್ಯೂ, ರಾತ್ರಿ 10ಗಂಟೆ ನಂತರ ರೈಲು ಹತ್ತುವ ಪ್ರಯಾಣಿಕರ ಟಿಕೆಟ್ ಪರಿಶೀಲಿಸಲು ಟಿಟಿಇಗೆ ಅವಕಾಶವಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.
ರೈಲು ಪ್ರಯಾಣಿಕರಿಗಾಗಿ ಸಹಾಯವಾಣಿ:
ಭಾರತೀಯ ರೈಲ್ವೆಯು ರಾತ್ರಿ 10 ಗಂಟೆಯ ಬಳಿಕ ಟಿಟಿಈ ಯಾವುದೇ ಕಾರಣವಿಲ್ಲದೆ ಪ್ರಯಾಣಿಕರಿಗೆ ಕಿರುಕುಳ ನೀಡುವ ಅಥವಾ ಪದೇ ಪದೇ ಟಿಕೆಟ್ ಕೇಳಿ ತೊಂದರೆ ನೀಡಿದರೆ ಅಂತಹವರ ವಿರುದ್ಧ ದೂರು ನೀಡಲು ಸಹಾಯವಾಣಿಯನ್ನು ಸಹ ನೀಡಿದೆ. ರೈಲ್ವೆ ಪ್ರಯಾಣಿಕರು 139 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಈ ಬಗ್ಗೆ ದೂರು ನೀಡಬಹುದಾಗಿದೆ.
ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಸಿಗುವಂತೆ ಮಾಡಲು ಕಟ್ಟು ನಿಟ್ಟಾಗಿ ಈ ನಿಯಮ ಜಾರಿಗೆ ತರಲು ರೈಲ್ವೆ ಇಲಾಖೆ ಪ್ರಯತ್ನಿಸುತ್ತಿದೆ. ಹಗಲು ರಾತ್ರಿ 24*7 ಕಾರ್ಯನಿರ್ವಹಿಸುವ ಭಾರತೀಯ ರೈಲ್ವೆಯ ಈ ಸೇವೆಯಲ್ಲಿ ಪ್ರಯಾಣಿಕರು ದೂರು ನೀಡಿದ ಕೂಡಲೇ ಕ್ರಮ ಕೈಗೊಳ್ಳಲಾಗುವುದು.