)
Indian Railways Rules: ಭಾರತದ ಸಂಚಾರ ವ್ಯವಸ್ಥೆಯಲ್ಲಿ ರೈಲಿನ ಪಾತ್ರ ಬಹಳ ದೊಡ್ಡದು. ಅದರಲ್ಲೂ ಈಗ ದೀಪಾವಳಿ ಮತ್ತು ಉತ್ತರ ಭಾರತದ ದೊಡ್ಡ ಹಬ್ಬ ಛತ್ ಪೂಜೆ ಸಂದರ್ಭದಲ್ಲಂತೂ ಎಲ್ಲಾ ರೈಲುಗಳು ತುಂಬಿ ತುಳುಕುತ್ತಿರುತ್ತವೆ. ಅಪರೂಪಕ್ಕೆ, ಹಬ್ಬಕ್ಕೆ ಅಂತಾ ಹೋಗುವಾಗ ಲಗ್ಗೇಜ್ ಕೂಡ ಜಾಸ್ತಿ ಇರುತ್ತದೆ. ಹಾಗಂತಾ ಕೆಲವು ನಿರ್ಬಂಧಿತ ವಸ್ತುಗಳನ್ನು ಚೀಲದಲ್ಲಿ ತುಂಬಿಕೊಂಡು ಹೋಗಲು ರೈಲ್ವೆ ಇಲಾಖೆ ನಿಯಮಗಳಲ್ಲಿ ಅವಕಾಶ ಇಲ್ಲ. ಇದನ್ನೂ ಮೀರಿ ಚೀಲದಲ್ಲಿ/ಬ್ಯಾಗ್ ನಲ್ಲಿ ಆ ವಸ್ತುಗಳನ್ನು ತೆಗೆದುಕೊಂಡು ರೈಲು ಪ್ರಯಾಣ ಮಾಡಲು ಮುಂದಾದರೆ ಜೈಲು ಸೇರಬೇಕಾಗುತ್ತದೆ.
ರೈಲಿನಲ್ಲಿ ಪ್ರಯಾಣಿಸುವಾಗ ಯಾವ ವಸ್ತುಗಳನ್ನು ಬ್ಯಾಗ್'ನಲ್ಲಿ ಕೊಂಡೊಯ್ಯಬಾರದು ಎಂಬ ಬಗ್ಗೆ ಈಗಾಗಲೇ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಮನವಿ ಮಾಡಿದೆ. ಜೊತೆಗೆ ರೈಲಿನಲ್ಲಿ ವಸ್ತುಗಳನ್ನು ಬ್ಯಾಗ್'ಗಳಲ್ಲಿ ತುಂಬಿಕೊಂಡು ಹೋಗುವವರ ಬಗ್ಗೆ ನಿಗಾ ಇಡಲು ಪರಿಶೀಲನಾ ತಂಡಗಳನ್ನು ರಚಿಸಲಾಗಿರುತ್ತದೆ. ಆ ತಂಡಗಳು ಪ್ರಯಾಣದ ವೇಳೆ ರೈಲುಗಳನ್ನು ಪರಿಶೀಲನೆ ನಡೆಸುತ್ತವೆ. ಪ್ರಯಾಣಿಕರು ತಮ್ಮ ವಸ್ತುಗಳನ್ನು ಚೀಲದಲ್ಲಿ ಕೊಂಡೊಯ್ಯುತ್ತಿದ್ದರೆ ಅಂಥವರ ವಿರುದ್ಧ ದೂರು ದಾಖಲಿಸುತ್ತವೆ ಹಾಗೆಯೇ ಜೈಲಿಗೆ ಕಳುಹಿಸುತ್ತವೆ ಎಂದು ತಿಳಿದುಬಂದಿದೆ.
ರೈಲ್ವೆ ಇಲಾಖೆಯ ಮಾಹಿತಿ ಮತ್ತು ಪ್ರಚಾರ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ದಿಲೀಪ್ ಕುಮಾರ್ ಅವರು, ಸುಧಾರಿತ ರೈಲು ಪ್ರಯಾಣಕ್ಕೆ ಅಥವಾ ಕಾರ್ಯಾಚರಣೆಗೆ ಇಲಾಖೆ ವತಿಯಿಂದ ನಿರಂತರವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಯೇ ಇಲಾಖೆಯ ಆದ್ಯತೆ. ಸುರಕ್ಷತೆಯ ಹಿನ್ನೆಲೆಯಲ್ಲಿ ನಿರ್ಬಂಧಿತ ವಸ್ತುಗಳನ್ನು ಬ್ಯಾಗ್'ನಲ್ಲಿ ತುಂಬಿಕೊಂಡು ಹೋಗುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಅಂತಹ ವಸ್ತುಗಳನ್ನು ಚೀಲದಲ್ಲಿ ಸಾಗಿಸುವುದು ರೈಲ್ವೆ ಇಲಾಖೆಗಳ ನಿಯಮದ ಪ್ರಕಾರ ನಿಷಿದ್ಧ ಎಂದು ಹೇಳಿದ್ದಾರೆ.
ವಿಶೇಷವಾಗಿ ದೀಪಾವಳಿ ಅಥವಾ ಛತ್ ಪೂಜಾ ಸಂದರ್ಭದಲ್ಲಿ ಈ ರೀತಿಯ ಪರಿಶೀಲನೆಯನ್ನು ಹೆಚ್ಚು ಮಾಡಲಾಗುತ್ತದೆ. ಏಕೆಂದರೆ ಈ ಹಬ್ಬಗಳ ವೇಳೆಯಲ್ಲಿ ಜನ ಸಾಮಾನ್ಯವಾಗಿ ಪಟಾಕಿಗಳು, ಒಲೆಗಳು, ಲೈಟರ್ಗಳಂತಹ ವಸ್ತುಗಳನ್ನು ಸಾಗಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಒಂದು ಸಣ್ಣ ಕಿಡಿ ಈ ವಸ್ತುಗಳಿಗೆ ತಗುಲಿದರೆ ದೊಡ್ಡ ಅಪಾಯ ಸೃಷ್ಟಿಯಾಗುವಂತಹ ಸಾಧ್ಯತೆ ಇರುತ್ತವೆ. ಇದು ಪ್ರಯಾಣಿಕರ ಸುರಕ್ಷತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಆದುದರಿಂದ ಈ ವಸ್ತುಗಳನ್ನು ಅಪಾಯಕಾರಿ ಎಂದು ಪರಿಗಣಿಸಿ ಅವುಗಳ ಸಾಗಾಣಿಕೆಗೆ ರೈಲ್ವೆ ಇಲಾಖೆ ನಿಷೇದ ಹೇರಿದೆ.
ಶಿಕ್ಷೆ ಮತ್ತು ದಂಡ ಏನು?
1989ರ ರೈಲ್ವೆ ಕಾಯಿದೆಯ ಸೆಕ್ಷನ್ 67, 164 ಹಾಗು 165ರ ಅನುಸಾರ ಪ್ರಯಾಣದ ವೇಳೆ ಸುಡುವ ಅಥವಾ ಸ್ಫೋಟವಾಗಬಲ್ಲ ವಸ್ತುಗಳನ್ನು ಸಾಗಾಣಿಕೆ ಮಾಡುವುದು ಶಿಕ್ಷಾರ್ಹ ಅಪರಾಧ. ಹಾಗಾಗಿ ರೈಲು ಪ್ರಯಾಣದ ಸಂದರ್ಭದಲ್ಲಿ ಬ್ಯಾಗ್'ಗಳಲ್ಲಿ ಇಂತಹ ವಸ್ತುಗಳನ್ನು ಸಾಗಿಸುವುದು ತಿಳಿದುಬಂದರೆ ಅಂಥ ಪ್ರಯಾಣಿಕರಿಗೆ 1 ಸಾವಿರ ರೂಪಾಯಿ ದಂಡ, ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಕೆಲವೊಂದು ಪ್ರಕರಣದಲ್ಲಿ ಈ ಎರಡನ್ನೂ ವಿಧಿಸಲಾಗುತ್ತದೆ.