)
Raitha Samriddhi Yojana: ತೀವ್ರ ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ನೆರವಾಗಲು ಮತ್ತು ಕೃಷಿ ಕ್ಷೇತ್ರಕ್ಕೆ ಉತ್ತೇಜನ ಕೊಡಲು ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು ರೈತ ಸಮೃದ್ಧಿ ಎಂಬ ಉಪಯುಕ್ತ ಯೋಜನೆಯನ್ನು ಜಾರಿಗೆ ತಂದಿದೆ. ಸ್ವಸಹಾಯ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು ಹಾಗು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನವೋದ್ಯಮಿಗಳು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಕೃಷಿ ಭಾಗ್ಯ ಯೋಜನೆಯ ಫಲಾನುಭವಿಗಳು ರೈತ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇದೇ ಆಗಸ್ಟ್ 25 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಕೃಷಿ ಅಧಿಕಾರಿ ಅಥವಾ ಜಿಲ್ಲಾ ಪಂಚಾಯತಿಯ ಕೃಷಿ ಇಲಾಖೆ ವಿಭಾಗವನ್ನು ಸಂಪರ್ಕಿಸಬಹುದಾಗಿದೆ.
ರೈತ ಸಮೃದ್ಧಿ ಯೋಜನೆ ಮೂಲಕ ವಿಶೇಷವಾಗಿ ಈ ಕೆಳಕಂಡ ಕೆಲಸಗಳಿಗೆ ಸರ್ಕಾರದಿಂದ ನೆರವು ಪಡೆದುಕೊಳ್ಳಬಹುದು:
>> ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು
>> ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು
>> ಮಣ್ಣಿನ ಗುಣಮಟ್ಟಕ್ಕೆ ತಕ್ಕಂತಹ ಬೆಳೆ ಬೆಳೆಯಲು
>> ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು
ರೈತ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲಿಗೆ ಕೃಷಿಕರು ಮತ್ತು ಕೃಷಿ ಉದ್ಯಮಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ. ನಂತರ ತಾವು ಯಾವ ರೀತಿಯಲ್ಲಿ ಯೋಜನೆಯ ಲಾಭ ಪಡೆದುಕೊಳ್ಳಲು ಬಯಸುತ್ತಿದ್ದಾರೆ ಎಂಬುದರ ಕುರಿತಾಗಿ ಯೋಜನಾ ವರದಿಯನ್ನು ತಯಾರಿಸಿ ಕೃಷಿ ಇಲಾಖೆಗೆ ನೀಡಬೇಕಾಗಿದೆ. ತಮ್ಮ ಉತ್ಪನ್ನದ ವಿವರಗಳನ್ನು ಮುಖ್ಯವಾಗಿ ಕಳೆದ ಮೂರು ವರ್ಷಗಳಲ್ಲಿ ಮಾಡಿರುವ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.