)
New GST Rates 2025: ಸೆಪ್ಟೆಂಬರ್ 22ರಿಂದ ಹೊಸ GST ದರಗಳು ಜಾರಿಗೆ ಬರಲಿವೆ. ಆದರೆ, ಸರಕುಗಳ MRP ಬೆಲೆ ತಕ್ಷಣ ಬದಲಾವಣೆಯಾಗುವುದೇ? ಜನರಿಗೆ ಲಾಭ ತಕ್ಷಣ ಸಿಗುವುದೇ? ಎಂಬ ಗೊಂದಲ ಎಲ್ಲರಲ್ಲೂ ಇದೆ. ಈ ವಿಚಾರವನ್ನು ಗಮನಕ್ಕೆ ತೆಗೆದುಕೊಂಡ ಕೇಂದ್ರ ಸರ್ಕಾರವು ಜನರ ಪರವಾಗಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸೆಪ್ಟೆಂಬರ್ 22ರಿಂದ ಭಾರತದಲ್ಲಿ ಹೊಸ ಜಿಎಸ್ಟಿ ದರಗಳು ಜಾರಿಯಾಗುತ್ತವೆ. ಇದುವರೆಗೆ 5%, 12%, 18% ಮತ್ತು 28% ಎಂಬ ನಾಲ್ಕು ಸ್ಲ್ಯಾಬ್ಗಳು ಇದ್ದವು. ಆದರೆ ಈಗ ಕೇಂದ್ರ ಸರ್ಕಾರವು ಅವುಗಳನ್ನು ಕಡಿಮೆ ಮಾಡಿ ಕೇವಲ 5% ಮತ್ತು 18% ಮಾತ್ರ ಉಳಿಸಿದೆ. 12% ಜಿಎಸ್ಟಿ ಯಲ್ಲಿದ್ದ ಬಹುತೇಕ ಎಲ್ಲಾ ವಸ್ತುಗಳನ್ನು 5% ಗೆ ತರಲಾಗಿದೆ. 28% ಜಿಎಸ್ಟಿ ಯಲ್ಲಿದ್ದ ವಸ್ತುಗಳಲ್ಲಿ 98% ವಸ್ತುಗಳನ್ನು 18% ಗೆ ತರಲಾಗಿದೆ. ಕೆಲವೇ ಐಷಾರಾಮಿ ವಸ್ತುಗಳಿಗೆ ಮಾತ್ರ 40% ಜಿಎಸ್ಟಿ ಮುಂದುವರಿಯುತ್ತದೆ.
ಇಲ್ಲಿ ಜನರಿಗೆ ದೊಡ್ಡ ಅನುಮಾನವೇನೆಂದರೆ, ಈ ಬದಲಾವಣೆ ಜಾರಿಯಾದ ಕೂಡಲೇ ಸರಕುಗಳ MRP ಬೆಲೆ ಬದಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದು. ಏಕೆಂದರೆ, ಕಂಪನಿಗಳು ಈಗಾಗಲೇ ತಯಾರಿಸಿರುವ ವಸ್ತುಗಳ ಮೇಲೆ ಹಳೆಯ MRP ಮುದ್ರಿಸಲಾಗಿದೆ. ಈ ಗೊಂದಲವನ್ನು ನಿವಾರಿಸಲು ಕೇಂದ್ರ ಸರ್ಕಾರವು ಸ್ಪಷ್ಟ ನಿಯಮ ಹೊರಡಿಸಿದೆ. ಸೆಪ್ಟೆಂಬರ್ 22 ನಂತರ ಮಾರುಕಟ್ಟೆಯಲ್ಲಿ ದೊರೆಯುವ ಪ್ರತಿಯೊಂದು ವಸ್ತುವಿನ ಮೇಲೂ ಎರಡು MRP ಇರಬೇಕು. ಒಂದು ಹಳೆಯದು, ಇನ್ನೊಂದು ಹೊಸದು. ಹಳೆಯದನ್ನು ಮುಚ್ಚಿ ಹೊಸದನ್ನು ಹಾಕುವುದು ಕಾನೂನುಬಾಹಿರ. ಎರಡೂ MRPಗಳು ಗ್ರಾಹಕರಿಗೆ ಗೋಚರಿಸಬೇಕು. ಹೀಗಾಗಿ, ಗ್ರಾಹಕರು ಯಾವ ಬೆಲೆಗೆ ವಸ್ತುವನ್ನು ಖರೀದಿಸಬೇಕು ಎಂಬ ನಿರ್ಧಾರವನ್ನು ಸುಲಭವಾಗಿ ತೆಗೆದುಕೊಳ್ಳಬಹುದು.
ಉದಾಹರಣೆಗೆ, ಹಳೆಯ MRP ಹೆಚ್ಚು ಇದ್ದರೂ, ಹೊಸ GST ದರ ಕಡಿಮೆ ಇದ್ದರೆ, ನೀವು ಕಡಿಮೆ ಬೆಲೆಯ ಪ್ರಕಾರ ವಸ್ತುವನ್ನು ಖರೀದಿಸಬಹುದು. ಈ ನಿಯಮದಿಂದ ಜನರಿಗೆ ನಷ್ಟವಾಗುವುದಿಲ್ಲ. ಕೆಲವೊಮ್ಮೆ ಹಳೆಯ MRP ಕಡಿಮೆ ಇದ್ದರೆ, ನೀವು ಅದನ್ನೇ ಆರಿಸಿಕೊಳ್ಳಬಹುದು. ಹೀಗಾಗಿ ಎರಡೂ ಬೆಲೆಗಳು ಜನರಿಗೆ ಪ್ರಯೋಜನಕಾರಿಯಾಗುತ್ತವೆ. ಇದೇ ನಿಯಮ ಕಂಪನಿಗಳಿಗೆ ಸಹ ಉಪಯುಕ್ತ. ಏಕೆಂದರೆ, ಸರ್ಕಾರವು ಜಿಎಸ್ಟಿ ದರವನ್ನು ಕಡಿಮೆ ಮಾಡಿರುವುದರಿಂದ ಕಂಪನಿಗಳು ತೆರಿಗೆ ಕಡಿಮೆ ಪಾವತಿಸಬೇಕು. ಹೀಗಾಗಿ ಅವರಿಗೆ ಆ ಮಟ್ಟಿಗೆ ಪರಿಹಾರ ಸಿಗುತ್ತದೆ.
ಇದರ ಜೊತೆಗೆ, ತಯಾರಕರು, ಪ್ಯಾಕರ್ಗಳು ಮತ್ತು ಆಮದುದಾರರು ಪತ್ರಿಕೆಯಲ್ಲಿ ಕನಿಷ್ಠ ಎರಡು ಜಾಹೀರಾತುಗಳನ್ನು ನೀಡಿ, ತಮ್ಮ ಉತ್ಪನ್ನಗಳನ್ನು ಹೊಸ GST ದರದಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದು ಜನರಿಗೆ ತಿಳಿಸಬೇಕಾಗಿದೆ. ಅಲ್ಲದೆ, ಕಾನೂನು ಮಾಪನಶಾಸ್ತ್ರ ನಿಯಂತ್ರಕರಿಗೂ ಮಾಹಿತಿ ನೀಡಬೇಕಾಗಿದೆ. ಈ ನಿಯಮಗಳು ಡಿಸೆಂಬರ್ 31ರವರೆಗೆ ಅಥವಾ ಹಳೆಯ ಸ್ಟಾಕ್ ಮುಗಿಯುವವರೆಗೆ ಜಾರಿಯಲ್ಲಿರುತ್ತವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವಿಷಯವನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುವುದು ಎಂದು ಹೇಳಿದ್ದಾರೆ. ಜನರಿಗೆ ಬೆಲೆ ಇಳಿಕೆಯ ಪ್ರಯೋಜನ ತಲುಪದಿದ್ದರೆ, ಸರ್ಕಾರವು ತಪಾಸಣೆ ನಡೆಸಬಹುದು ಮತ್ತು ಕ್ರಮ ಕೈಗೊಳ್ಳಬಹುದು.
ಒಟ್ಟಿನಲ್ಲಿ ಹೇಳುವುದಾದರೆ, ಸೆಪ್ಟೆಂಬರ್ 22 ರಿಂದ ನೀವು ಅಂಗಡಿಯಲ್ಲಿ ಖರೀದಿಸುವ ಪ್ರತಿಯೊಂದು ವಸ್ತುವಿನ ಮೇಲೆ ಎರಡು MRP ಕಾಣಬಹುದು. ಆ ವೇಳೆ ಕಡಿಮೆ ಬೆಲೆಯನ್ನೇ ಆರಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದ ಸಾರ್ವಜನಿಕರಿಗೆ ನಷ್ಟವಾಗುವುದಿಲ್ಲ ಮತ್ತು ಹೊಸ GST ದರದ ಲಾಭವನ್ನು ನೇರವಾಗಿ ಪಡೆಯಬಹುದು.