)
7th Pay Commission DA Hike: ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಅಡಿಯಲ್ಲಿ ಬರಬೇಕಿರುವ ಕೊನೆಯ ಬಹುನಿರೀಕ್ಷಿತ ತುಟ್ಟಿ ಭತ್ಯೆ (ಡಿಎ) ಹೆಚ್ಚಳಕ್ಕೆ ಅನುಮೋದನೆ ದೊರೆತಿದೆ. ಸರ್ಕಾರಿ ನೌಕರರ ಡಿಎ 55 ರಿಂದ 58% ಏರಿಕೆಯಾಗಿರುವ ಬಗ್ಗೆ ಮಾಧ್ಯಮ ವರದಿಗಳಿಂದ ಮಾಹಿತಿ ಲಭ್ಯವಾಗಿದ್ದು, ಇದರಿಂದಾಗಿ ದೀಪಾವಳಿ ಹಬ್ಬಕ್ಕೂ ಮೊದಲೇ ಸುಮಾರು 48ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರು ಮತ್ತು 66 ಲಕ್ಷ ಪಿಂಚಣಿದಾರರಿಗೆ ಜಾಕ್ಪಾಟ್ ಹೊಡೆದಂತಾಗಿದೆ.
ಡಿಎ-ತುಟ್ಟಿಭತ್ಯೆ ಎಂದರೇನು?
ಹಣದುಬ್ಬರದ ಪರಿಸ್ಥಿತಿಯಲ್ಲಿ ದೈನಂದಿನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಮತ್ತು ಉತ್ತಮ ಜೀವನವನ್ನು ನಿರ್ವಹಿಸಲು ಅನುಕೂಲವಾಗುವಂತೆ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸರ್ಕಾರ ಅವರ ವೇತನ ಮತ್ತು ಪಿಂಚಣಿಯೊಂದಿಗೆ ನೀಡುವ ಹೆಚ್ಚುವರಿ ಹಣವೇ ತುಟ್ಟಿಭತ್ಯೆ ಅಥವಾ ಡಿಎ.
ಯಾವ ಆಧಾರದ ಮೇಲೆ ಡಿಎ ನಿರ್ಧಾರವಾಗುತ್ತದೆ?
ಕಾರ್ಮಿಕ ಸಚಿವಾಲಯವು ಹಣದುಬ್ಬರ, ದೈನಂದಿನ ವೆಚ್ಚಗಳಲ್ಲಿನ ಬದಲಾವಣೆಯನ್ನು ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ (CPI-IW) ಸೂತ್ರದ ಆಧಾರದ ಮೇಲೆ ಲೆಕ್ಕಾಹಾಕಲಾಗುತ್ತದೆ. CPI-IW ಸೂಚ್ಯಂಕಕ್ಕೆ ತುಟ್ಟಿಭತ್ಯೆಯನ್ನು ಲಿಂಕ್ ಮಾಡಿ ಸರ್ಕಾರವು ಡಿಎ ಹೆಚ್ಚಳ ನ್ಯಾಯಯುತವಾಗಿ ಮಾರುಕಟ್ಟೆಯಲ್ಲಿನ ನಿಜವಾದ ಬೆಲೆ ಚಲನೆಗಳನ್ನು ಆಧರಿಸಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಡಿಎ ನಿರ್ಧರಿಸುತ್ತದೆ.
ಡಿಎ ಹೆಚ್ಚಳ 2025:
ಕಾರ್ಮಿಕ ಬ್ಯೂರೋ ಇತ್ತೀಚೆಗೆ ಜೂನ್ 2025ರ ಸಿಪಿಐ-ಐಡಬ್ಲ್ಯೂ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು ಈ ಸೂಚ್ಯಂಕವು ಮೇ ತಿಂಗಳಿನಿಂದ 1 ಪಾಯಿಂಟ್ ಏರಿಕೆಯಾಗಿ 145.0 ತಲುಪಿರುವುದಾಗಿ ತಿಳಿದುಬಂದಿದೆ. ಇದರ ಆಧಾರದ ಮೇಲೆ ಏಳನೇ ವೇತನ ಆಯೋಗದಡಿ ಜಾರಿಯಾಗಬೇಕಿರುವ ಜುಲೈ 2025 ಡಿಎ ಹೆಚ್ಚಳ 58% ಹೆಚ್ಚಾಗಿದೆ ಏಂದು ತಿಳಿದುಬಂದಿದೆ.
ಡಿಎ ಹೆಚ್ಚಳ ಯಾವಾಗಿನಿಂದ ಜಾರಿಯಾಗಲಿದೆ.
2025 ಸೆಪ್ಟೆಂಬರ್ ತಿಂಗಳಿನಲ್ಲಿ ಡಿಎ ಹೆಚ್ಚಳಕ್ಕೆ ಅನುಮೋದನೆ ದೊರೆಯುವ ನಿರೀಕ್ಷೆಯಿದ್ದು, 01 ಜುಲೈ 2025ರಿಂದಲೂ ಇದನ್ನು ಲೆಕ್ಕಹಾಕಲಾಗುತ್ತದೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ದೀಪಾವಳಿ ಹಬ್ಬಕ್ಕೂ ಮೊದಲು ಅಕ್ಟೋಬರ್ ತಿಂಗಳಲ್ಲಿ ಪರಿಷ್ಕೃತ ಡಿಎ ಹಣವನ್ನು ಪಾವತಿಸುವ ನಿರೀಕ್ಷೆಯಿದ್ದು, ಸರ್ಕಾರಿ ನೌಕರರು ವೇತನದೊಂದಿಗೆ ಮೂರು ತಿಂಗಳ ಬಾಕಿ ಹಣವನ್ನೂ ಪಡೆಯುತ್ತಾರೆ.