APY 5000 Pension Premium: ನಿವೃತ್ತಿಯ ನಂತರ ಮಾಸಿಕ ಪಿಂಚಣಿ ಪಡೆಯಲು ಬಯಸಿದರೆ ಅಟಲ್ ಪಿಂಚಣಿ ಯೋಜನೆ ನಿಮಗೆ ಉತ್ತಮ ಆಯ್ಕೆಯಾಗಿದೆ. ಅಟಲ್ ಪಿಂಚಣಿ ಯೋಜನೆಯು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಜನರಿಗೆ ಭಾರತ ಸರ್ಕಾರ ಪರಿಚಯಿಸಿದ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ನೀವು ದಿನಕ್ಕೆ ಕೇವಲ 7 ರೂಪಾಯಿ ಉಳಿಸಿದರೆ, ನಿವೃತ್ತಿಯ ನಂತರ ನೀವು 5,000 ರೂ. ಪಿಂಚಣಿ ಪಡೆಯಬಹುದು. ಏಕೆಂದರೆ ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಅಸಂಘಟಿತ ಕಾರ್ಮಿಕರು ತಮ್ಮ ವೃದ್ಧಾಪ್ಯದಲ್ಲಿ ಸ್ಥಿರ ಆದಾಯ ಪಡೆಯುವುದಾಗಿದೆ.
ಈ ಯೋಜನೆಯ ಪ್ರಮುಖ ಪ್ರಯೋಜನವೆಂದರೆ ನೀವು ತುಂಬಾ ಕಡಿಮೆ ಹೂಡಿಕೆಯೊಂದಿಗೆ ಪ್ರಾರಂಭಿಸಬಹುದು. ಉದಾಹರಣೆಗೆ ನೀವು 18ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರಿದರೆ, ನೀವು ಪ್ರತಿ ತಿಂಗಳು ಕೇವಲ 210 ರೂ. ಪಾವತಿಸಬೇಕಾಗುತ್ತದೆ. ಪ್ರತಿಯಾಗಿ 60 ವರ್ಷ ತುಂಬಿದ ನಂತರ ನಿಮಗೆ ಮಾಸಿಕ 5,000 ರೂ. ಪಿಂಚಣಿ ಸಿಗುತ್ತದೆ. ನೀವು 32ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರಿದರೆ, ಮಾಸಿಕ ಕೊಡುಗೆ 689 ರೂ. ಆಗಿರುತ್ತದೆ.
ಇದನ್ನೂ ಓದಿ: ಚಿನ್ನ ಅಥವಾ ರಿಯಲ್ ಎಸ್ಟೇಟ್? ಹೆಚ್ಚು ಲಾಭ ಸಿಗಬೇಕಾದರೆ ಎಲ್ಲಿ ಹೂಡಿಕೆ ಮಾಡಬೇಕು ?
ಅಟಲ್ ಪಿಂಚಣಿ ಯೋಜನೆ ಎಂದರೇನು?: ಅಟಲ್ ಪಿಂಚಣಿ ಯೋಜನೆ (APY)ಯನ್ನ 2015-16ರಲ್ಲಿ ಪ್ರಾರಂಭಿಸಲಾಯಿತು. ಇದನ್ನ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿರ್ವಹಿಸುತ್ತದೆ. ಈ ಯೋಜನೆಯು 60 ವರ್ಷ ವಯಸ್ಸಿನ ನಂತರ ಸರ್ಕಾರಿ ಖಾತರಿಯೊಂದಿಗೆ ಮಾಸಿಕ 1,000 ರಿಂದ 5,000 ರೂ.ಗಳ ಪಿಂಚಣಿಯನ್ನ ಖಾತ್ರಿಗೊಳಿಸುತ್ತದೆ. ಹೆಚ್ಚುವರಿಯಾಗಿ ಸರ್ಕಾರವು ಈ ಯೋಜನೆಯಲ್ಲಿ ವರ್ಷಕ್ಕೆ ಗರಿಷ್ಠ 1,000 ರೂ. ಅಥವಾ ನಿಮ್ಮ ಒಟ್ಟು ಉಳಿತಾಯದ 50%, ಯಾವುದು ಕಡಿಮೆಯೋ ಅದನ್ನು ಕೊಡುಗೆಯಾಗಿ ನೀಡುತ್ತದೆ. ಆದರೆ ಈ ಪ್ರಯೋಜನವು ತೆರಿಗೆ ಪಾವತಿಸದ ಮತ್ತು ಬೇರೆ ಯಾವುದೇ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ದಾಖಲಾಗದ ಜನರಿಗೆ ಮಾತ್ರ ಲಭ್ಯವಿದೆ.
ಅಟಲ್ ಪಿಂಚಣಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?: ಆದಾಯ ತೆರಿಗೆ ಪಾವತಿಸದ 18 ರಿಂದ 40 ವರ್ಷದೊಳಗಿನ ಭಾರತೀಯ ನಾಗರಿಕರು ಈ ಯೋಜನೆಗೆ ಸೇರಬಹುದು. (ಅಕ್ಟೋಬರ್ 1, 2022ರಿಂದ, ಆದಾಯ ತೆರಿಗೆ ಪಾವತಿಸುವವರು ಈ ಯೋಜನೆಗೆ ಸೇರಲು ಅರ್ಹರಲ್ಲ.) 60 ವರ್ಷ ವಯಸ್ಸನ್ನ ತಲುಪಿದ ನಂತರ ಚಂದಾದಾರರು ತಮ್ಮ ಮಾಸಿಕ ಕೊಡುಗೆಯನ್ನ ಅವಲಂಬಿಸಿ ತಿಂಗಳಿಗೆ 1,000 ರೂ., 2,000 ರೂ., 3,000 ರೂ., 4,000 ರೂ. ಅಥವಾ 5,000 ರೂ.ನ ಖಾತರಿಯ ಪಿಂಚಣಿ ಪಡೆಯುತ್ತಾರೆ. ಪಿಂಚಣಿ ಪಡೆಯಲು ಕನಿಷ್ಠ 20 ವರ್ಷಗಳ ಕಾಲ ಈ ಯೋಜನೆಗೆ ಕೊಡುಗೆ ನೀಡುವುದು ಕಡ್ಡಾಯವಾಗಿದೆ. ನೀವು ನಿಮ್ಮ ಮಾಸಿಕ/ತ್ರೈಮಾಸಿಕ/ಅರ್ಧವಾರ್ಷಿಕ ಕೊಡುಗೆಯನ್ನ ನಿಗದಿತ ದಿನಾಂಕದೊಳಗೆ ಪಾವತಿಸದಿದ್ದರೆ, ದಂಡ ವಿಧಿಸಲಾಗುತ್ತದೆ. ನೀವು ಬಾಕಿ ಇರುವ ಮೊತ್ತವನ್ನ ಆಧರಿಸಿ ಈ ದಂಡವನ್ನ ಲೆಕ್ಕಹಾಕಲಾಗುತ್ತದೆ.
ಇದನ್ನೂ ಓದಿ: ರೈಲ್ವೆ ಟಿಕೆಟ್ ಬುಕಿಂಗ್ ನಿಯಮದಲ್ಲಿ ಭಾರೀ ಬದಲಾವಣೆ: ಕನ್ಫರ್ಮ್ ಟಿಕೆಟ್ ಪಡೆಯಲು ಇದನ್ನು ತಪ್ಪದೇ ತಿಳಿಯಿರಿ









