)
BIS hallmarking: ಆಭರಣಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ನೋಡಿದರೆ ಚಿನ್ನ, ಬೆಳ್ಳಿ ಖರೀದಿಸಲು ಜನರು ಗೊಂದಲಕ್ಕೊಳಗಾಗಿದ್ದರೆ. ಆದ್ದರಿಂದ ಈ ಸಮಯದಲ್ಲಿ ಕೇಂದ್ರ ಸರ್ಕಾರವು ಮಹತ್ತರ ನಿಯಮವೊಂದನ್ನು ಜಾರಿಗೆ ತರಲು ಮುಂದಾಗಿದೆ. ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಳ್ಳಿ ಆಭರಣಗಳ ಶುದ್ಧತೆ ಬಗ್ಗೆ ಗ್ರಾಹಕರಿಗೆ ಇನ್ನಷ್ಟು ಭರವಸೆ ನೀಡಲು ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ. ಸೆಪ್ಟೆಂಬರ್ 1, 2025ರಿಂದ ಬೆಳ್ಳಿ ಆಭರಣಗಳ ಮೇಲೆ ಹೊಸ ಹಾಲ್ಮಾರ್ಕಿಂಗ್ ನಿಯಮ ಜಾರಿಗೆ ಬರಲಿದೆ. ಈ ನಿಯಮ ಆರಂಭದಲ್ಲಿ ಸ್ವಯಂಪ್ರೇರಿತವಾಗಿದ್ದು, ಖರೀದಿದಾರರಿಗೆ ಹಾಲ್ಮಾರ್ಕ್ ಮಾಡಿದ ಅಥವಾ ಮಾಡದ ಆಭರಣಗಳನ್ನು ಆಯ್ಕೆಮಾಡುವ ಅವಕಾಶ ಇರುತ್ತದೆ.
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಈ ನಿಯಮವನ್ನು ಜಾರಿಗೊಳಿಸುತ್ತಿದ್ದು, HUID ವ್ಯವಸ್ಥೆಯೊಂದಿಗೆ ಆರು ಶುದ್ಧತೆಯ ಹಂತಗಳಲ್ಲಿ ಬೆಳ್ಳಿ ಆಭರಣಗಳನ್ನು ಗುರುತಿಸಲು ಅವಕಾಶ ಕಲ್ಪಿಸಿದೆ. ಇದರಿಂದ ಗ್ರಾಹಕರು ತಮ್ಮ ಆಭರಣಗಳ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ಸುಲಭವಾಗಲಿದೆ.
ಹಾಲ್ಮಾರ್ಕಿಂಗ್ನ ದೊಡ್ಡ ಲಾಭವೇನು?
ಈ ನಿಯಮದೊಂದಿಗೆ ಗ್ರಾಹಕರು ನಕಲಿ ಹಾಗೂ ಕಲಬೆರಕೆ ಆಭರಣಗಳಿಂದ ದೂರವಿದ್ದು, ತಾವು ಖರೀದಿಸುತ್ತಿರುವ ಬೆಳ್ಳಿ ನಿಜವಾಗಿಯೂ ಶುದ್ಧವೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. BIS ಕೇರ್ ಅಪ್ಲಿಕೇಶನ್ನ “Verify HUID” ವೈಶಿಷ್ಟ್ಯದ ಮೂಲಕ ಯಾವುದೇ ಆಭರಣದ ಶುದ್ಧತೆ ಪರೀಕ್ಷಿಸಲು ಸಾಧ್ಯ. ಇದರಿಂದ ಮಾರುಕಟ್ಟೆಯಲ್ಲಿ ಪಾರದರ್ಶಕತೆ ಹೆಚ್ಚುವುದಷ್ಟೇ ಅಲ್ಲ, ಗ್ರಾಹಕರ ವಿಶ್ವಾಸವೂ ಬಲವಾಗುತ್ತದೆ.
ಈಗ ಬೆಳ್ಳಿಗೂ ಹಾಲ್ಮಾರ್ಕ್ ಕಡ್ಡಾಯ
ಇದಕ್ಕೂ ಮುನ್ನ, 2021ರಲ್ಲಿ ಚಿನ್ನದ ಆಭರಣಗಳಿಗೆ ಹಾಲ್ಮಾರ್ಕಿಂಗ್ ನಿಯಮ ಕಡ್ಡಾಯಗೊಂಡಿತ್ತು. ಅದೇ ಮಾದರಿಯಲ್ಲಿ ಈಗ ಬೆಳ್ಳಿ ಆಭರಣಗಳಿಗೂ ಈ ವ್ಯವಸ್ಥೆ ಜಾರಿಯಾಗುತ್ತಿದೆ. ಇದರಿಂದ ಆಭರಣ ಮಾರುಕಟ್ಟೆಯಲ್ಲಿ ಗುಣಮಟ್ಟ ಹೆಚ್ಚುವ ನಿರೀಕ್ಷೆ ಇದೆ.
ಸರ್ಕಾರದ ಈ ಹೆಜ್ಜೆಯಿಂದ ಬೆಳ್ಳಿ ಆಭರಣ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚುವುದರೊಂದಿಗೆ ನಕಲಿ ಉತ್ಪನ್ನಗಳ ಮಾರಾಟ ತಗ್ಗುತ್ತವೆ. ಮುಖ್ಯವಾಗಿ ಗ್ರಾಹಕರು ತಮ್ಮ ಹಣಕ್ಕೆ ಸಮರ್ಪಕ ಮೌಲ್ಯ ಪಡೆಯುವುದರಲ್ಲಿ ಸಂದೇಹವಿಲ್ಲ.